
ಸಿಡಬ್ಲೂಆರ್‌ಸಿ ನಿರ್ಧಾರವನ್ನು ಪ್ರಾಧಿಕಾರ ಎತ್ತಿಹಿಡಿದಿದ್ದು, ನೀರು ಹರಿಸಿದರೆ 5.5 ಟಿಎಂಸಿ ಜಲ ಸಂಪನ್ಮೂಲ ಖಾಲಿಯಾಗಲಿದೆ. ಇದರಿಂದಾಗಿ ಬೆಂಗಳೂರು ಸೇರಿ ಕಾವೇರಿ ಕೊಳ್ಳದ ನಗರಗಳಿಗೆ ಕುಡಿಯುವ ನೀರಿನ ಅಭಾವದ ಭೀತಿ ಎದುರಾಗಿದೆ. ಜುಲೈ 29ರಿಂದ ಈ ಆದೇಶ ಅನ್ವಯವಾಗಲಿದ್ದು, ಮುಂದಿನ ನಡೆ ತೀರ್ಮಾನಿಸಲು ಆಗಸ್ಟ್ 2ಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸರ್ವಪಕ್ಷ ಸಭೆ ಕರೆದಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ತೀವ್ರ ಮಳೆ ಕೊರತೆ ಹಾಗೂ ಬರ ಪರಿಸ್ಥಿತಿ ತಲೆದೋರಿರುವ ಬೆನ್ನಲ್ಲೇ ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೊಂದು ಭಾರಿ ಆಘಾತ ಎದುರಾಗಿದೆ. ಮುಂದಿನ 15 ದಿನಗಳ ಕಾಲ ತಮಿಳುನಾಡಿಗೆ ಪ್ರತಿದಿನ 3,500 ಕ್ಯೂಸೆಕ್ ಕಾವೇರಿ ನೀರನ್ನು ಬಿಡುಗಡೆ ಮಾಡಬೇಕೆಂದು ಕಾವೇರಿ ನೀರು ನಿಯಂತ್ರಣ ಸಮಿತಿ ನೀಡಿದ್ದ ಆದೇಶವನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಗುರುವಾರ ಎತ್ತಿಹಿಡಿದಿದೆ. ಜುಲೈ 29ರಿಂದ ಜಾರಿಗೆ ಬರುವಂತೆ ಬಿಳಿಗುಂಡ್ಲು ಪಾಯಿಂಟ್‌ನಲ್ಲಿ ಈ ಪ್ರಮಾಣದ ನೀರು ಹರಿಯುವಂತೆ ನೋಡಿಕೊಳ್ಳಲು ಸೂಚಿಸಲಾಗಿದೆ.
ಜಲಾಶಯಗಳಲ್ಲಿ ನೀರಿನ ಅಭಾವವಿದ್ದು, ಈ ಆದೇಶ ಪಾಲಿಸಲು ಕೆಆರ್‌ಎಸ್ ಹಾಗೂ ಕಬಿನಿ ಜಲಾಶಯಗಳಿಂದ ಪ್ರತಿದಿನ ಹೆಚ್ಚುವರಿಯಾಗಿ 4,500 ರಿಂದ 5,000 ಕ್ಯೂಸೆಕ್ ನೀರು ಹರಿಸಬೇಕಾಗುತ್ತದೆ. ಇದರಿಂದ ರಾಜ್ಯದ ಜಲಾಶಯಗಳಿಂದ ಸುಮಾರು 5.5 ಟಿಎಂಸಿ ನೀರು ಖಾಲಿಯಾಗಲಿದ್ದು, ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನ ನಗರ-ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವುದೇ ದೊಡ್ಡ ಸವಾಲಾಗಲಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಕಾನೂನು ಹೋರಾಟ ಹಾಗೂ ರಾಜಕೀಯ ತಂತ್ರಜ್ಞಾನ ಮಟ್ಟದ ನಿರ್ಧಾರ ಕೈಗೊಳ್ಳಲು ಉಪಮುಖ್ಯಮಂತ್ರಿ ಹಾಗೂ ನೀರಾವರಿ ಸಚಿವ ಡಿ.ಕೆ. ಶಿವಕುಮಾರ್ ಅವರು ಆಗಸ್ಟ್ 2ರ ಭಾನುವಾರ ಬೆಳಿಗ್ಗೆ 11 ಗಂಟೆಗೆ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಮಹತ್ವದ ಸರ್ವಪಕ್ಷ ಸಭೆ ಕರೆದಿದ್ದಾರೆ.
65% ಮಳೆ ಅಭಾವ: ನೀರು ಹರಿಸಲು ಸಾಧ್ಯವೇ ಇಲ್ಲ – ಕರ್ನಾಟಕ
ಪ್ರಸ್ತುತ ಕಾವೇರಿ ಜಲಾನಯನ ಪ್ರದೇಶದ ಸ್ಥಿತಿ ಅತ್ಯಂತ ಶೋಚನೀಯವಾಗಿದೆ. ಜೂನ್ 1ರಿಂದ ಜುಲೈ 27ರವರೆಗಿನ ಅವಧಿಯಲ್ಲಿ ಕಾವೇರಿ ಕೊಳ್ಳದ 4 ಪ್ರಮುಖ ಜಲಾಶಯಗಳಿಗೆ ಹರಿದುಬಂದಿರುವ ನೀರಿನ ಪ್ರಮಾಣವು ಕಳೆದ 30 ವರ್ಷಗಳ ಸರಾಸರಿಗಿಂತ %65.86 ರಷ್ಟು ಕಡಿಮೆಯಾಗಿದೆ. ಪ್ರಸ್ತುತ ಬಿಳಿಗುಂಡ್ಲುವಿನಲ್ಲಿ ಹರಿವು ಕೇವಲ 176 ಕ್ಯೂಸೆಕ್ ಇದ್ದು, ಕೆಆರ್‌ಎಸ್ ಹಾಗೂ ಕಬಿನಿ ಜಲಾಶಯಗಳ ಜಂಟಿ ಹೊರಹರಿವು ಕೇವಲ 1,822 ಕ್ಯೂಸೆಕ್ ಮಾತ್ರವೇ ಇದೆ. “ನಮ್ಮದೇ ಜನರಿಗೆ ಕುಡಿಯುವ ನೀರಿಲ್ಲದಿರುವಾಗ ತಮಿಳುನಾಡಿಗೆ ನೀರು ಹರಿಸುವುದು ಅಸಾಧ್ಯ. ಈ ವಾಸ್ತವ ಸ್ಥಿತಿಯನ್ನು ಪ್ರಾಧಿಕಾರದ ಮುಂದೆ ಖಡಕ್ ಆಗಿ ಮಂಡಿಸಲಾಗಿದೆ.
ಆಗಸ್ಟ್ 2ಕ್ಕೆ ಸರ್ವಪಕ್ಷ ಸಭೆ: ಒಗ್ಗಟ್ಟಿನ ಹೋರಾಟಕ್ಕೆ ಕರೆ
ಈ ಬಿಕ್ಕಟ್ಟಿನಿಂದ ಹೊರಬರಲು ಮತ್ತು ರಾಜ್ಯದ ಹಿತರಕ್ಷಣೆಗಾಗಿ ಸರ್ಕಾರ ಸರ್ವಪಕ್ಷಗಳ ಬೆಂಬಲ ಕೋರಿದೆ. ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕಾವೇರಿ ವಿಚಾರದಲ್ಲಿ ರಾಜ್ಯದ ಹಿತರಕ್ಷಣೆ ನಮಗೆ ಅತ್ಯಂತ ಮುಖ್ಯ, ಹೀಗಾಗಿ ರಾಜ್ಯದ ಮಾಜಿ ಮುಖ್ಯಮಂತ್ರಿಗಳು, ವಿಧಾನಸಭೆ ಹಾಗೂ ವಿಧಾನ ಪರಿಷತ್ ವಿಪಕ್ಷ ನಾಯಕರು, ಪ್ರಮುಖ ರಾಜಕೀಯ ಪಕ್ಷಗಳ ಅಧ್ಯಕ್ಷರು ಹಾಗೂ ಕಾವೇರಿ ಕೊಳ್ಳದ ಸಂಸದರು ಮತ್ತು ಶಾಸಕರನ್ನು ಸಭೆಗೆ ಆಹ್ವಾನಿಸಲಾಗಿದೆ ಎಂದು ಮಾಹಿತಿ ನೀಡಿದರು.
ಈಗಾಗಲೇ ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ವಿ. ಸೋಮಣ್ಣ, ಜಗದೀಶ್ ಶೆಟ್ಟರ್ ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರೊಂದಿಗೆ ಮಾತುಕತೆ ನಡೆಸಲಾಗಿದ್ದು, ಅವರು ರಾಜ್ಯದ ಹಿತಕ್ಕಾಗಿ ಶಕ್ತಿಮೀರಿ ಸಹಕಾರ ನೀಡುವ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಪರಸ್ಪರ ಗೌರವದಿಂದ ಇರೋಣ: ಡಿಕೆಶಿ
ತಮಿಳುನಾಡು ಸರ್ಕಾರದ ನಿಲುವಿನ ಬಗ್ಗೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, ನಾವು ಯಾರೊಂದಿಗೂ ಪರಸ್ಪರ ಕಾದಾಟ ಮಾಡಲು ಇಷ್ಟಪಡುವುದಿಲ್ಲ. ನೆಲದ ಕಾನೂನಿಗೆ ಗೌರವ ಕೊಟ್ಟು, ಎಲ್ಲರ ಭಾವನೆಗಳನ್ನು ಪುರಸ್ಕರಿಸಬೇಕಿದೆ. ದೇಶ ಒಂದೇ ಆಗಿರುವುದರಿಂದ ಪರಸ್ಪರ ಗೌರವದಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ನಮ್ಮ ಗುರಿ ಎಂದಿದ್ದಾರೆ.
ಆದರೆ, ರಾಜ್ಯದಲ್ಲಿ ಎದುರಾಗಿರುವ ತೀವ್ರ ಬರಗಾಲದ ನಡುವೆ ನೀರು ಹರಿಸುವ ಆದೇಶ ಹೊರಬಿದ್ದಿರುವುದು ಕರ್ನಾಟಕದ ರೈತರು ಹಾಗೂ ಕಾವೇರಿ ಹೋರಾಟಗಾರರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಭಾನುವಾರದ ಸರ್ವಪಕ್ಷ ಸಭೆಯ ನಿರ್ಧಾರದತ್ತ ಎಲ್ಲರ ಕಣ್ಣು ನೆಟ್ಟಿದೆ.
ಕಾದಟಕ್ಕೆ ಇಚ್ಚಿಸಲ್ಲ : ಒಂದೇ ದೇಶ ಗೌರವ ನೀಡೋಣ – ಸಿಎಂ
ದೆಹಲಿಯಲ್ಲಿ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಮಾತನಾಡಿ ಎಲ್ಲಾ ಮಾಜಿ ಸಿಎಂಗಳು, ವಿಧಾನಸಭೆ ವಿಪಕ್ಷ ನಾಯಕ, ವಿಧಾನ ಪರಿಷತ್ ವಿಪಕ್ಷ ನಾಯಕರು, ಜೆಡಿಎಸ್ ನಾಯಕರು ಹಾಗೂ ಮಾಜಿ ನೀರಾವರಿ ಸಚಿವರು, ಆ ಭಾಗದ ಸಂಸದರನ್ನು ಸರ್ವಪಕ್ಷ ಸಭೆಗೆ ಆಹ್ವಾನಿಸಲಾಗಿದೆ. ಸಭೆಯಲ್ಲಿ ಕಾವೇರಿ ನೀರು ಬಿಡುಗಡೆ ಬಿಕ್ಕಟ್ಟು ಸಂಬAಧ ಚರ್ಚೆ ನಡೆಸಲಾಗುವುದು. ಬರ, ಮಳೆ ಕೊರತೆ ಹಿನ್ನೆಲೆಯಲ್ಲಿ ರಾಜ್ಯದ ನಿಲುವಿನ ಬಗ್ಗೆ ಮುಂದಿನ ನಡೆಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ. ಬಿಜೆಪಿ ಸಂಸದರಾದ ಪ್ರಲ್ಹಾದ್ ಜೋಶಿ, ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್ ಜೊತೆ ಈ ಬಗ್ಗೆ ಮಾತನಾಡಿದ್ದೇನೆ. ಅವರೆಲ್ಲರೂ ಶಕ್ತಿ ಮೀರಿ ರಾಜ್ಯದ ಹಿತಕ್ಕಾಗಿ ಸಹಕಾರ ಕೊಡುತ್ತಿದ್ದಾರೆ. ತಮಿಳುನಾಡು ಸಿಎಂ ವಿಜಯ್ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ನಾವು ಪರಸ್ಪರ ಕಾದಾಟ ಮಾಡಲು ಇಚ್ಛಿಸುವುದಿಲ್ಲ. ನೆಲದ ಕಾನೂನು ಇದೆ. ಇಬ್ಬರೂ ಪರಸ್ಪರ ಗೌರವ ಕೊಡೋಣ. ಎಲ್ಲರ ಭಾವನೆಗಳಿಗೆ ಗೌರವ ನೀಡೋಣ. ದೇಶ ಒಂದು ಎಂದು ಹೇಳಿದರು.
ಸರ್ವಪಕ್ಷ ಸಭೆಯಲ್ಲಿ ನಿರ್ಧಾರ – ರೆಡ್ಡಿ
ಸಿಡಬ್ಲೂ÷್ಯಎಂಎ ಸಿಡಬ್ಲೂ÷್ಯಆರ್‌ಸಿ ಆದೇಶವನ್ನು ಎತ್ತಿಹಿಡಿದಿದೆ. ಮುಂದಿನ ನಡೆಯ ಬಗ್ಗೆ ಸಚಿವ ರಾಮಲಿಂಗಾರೆಡ್ಡಿಯನ್ನು ಮಾಧ್ಯಮದವರು ಕೇಳಿದಾಗ, ಮುಖ್ಯಮಂತ್ರಿ ಆಗಸ್ಟ್ 2 ರಂದು ಸರ್ವಪಕ್ಷ ಸಭೆ ಕರೆದಿದ್ದಾರೆ. ಅಲ್ಲಿ ಏನು ಮಾಡಬೇಕೆಂದು ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ . ತೀವ್ರ ಬರಗಾಲದಿಂದ ರಾಜ್ಯವು ತತ್ತರಿಸುತ್ತಿರುವುದರಿಂದ ಕರ್ನಾಟಕದ ರೈತರು, ಸಂಘಟನೆಗಳು ಈ ಆದೇಶದಿಂದ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದರು.








