
ಚಾಮರಾಜನಗರ : ಕಾರ್ ಲೋನ್ ಕೊಡಿಸಲು ದೂರುದಾರರಿಂದ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದ ಎಂಡಿ ಹಾಗೂ ಕೇಸ್ ವರ್ಕರನ್ನು ಬಂಧಿಸಿದ್ದಾರೆ.
ಚಾಮರಾಜನಗರದ ಜಿಲ್ಲಾಡಳಿತ ಭವನದಲ್ಲಿರುವ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದ ಎಂಡಿ ನಾಗೇಂದ್ರ ಹಾಗೂ ಕೇಸ್ ವರ್ಕರ್ ಸರ್ವಮಂಗಳ ಲೋಕಾಯುಕ್ತರ ಬಲೆ ಬಿದ್ದವರು.
ಚಾಮರಾಜನಗರ ಲೋಕಾಯುಕ್ತ ಡಿವೈಎಸ್ಪಿ ಗಜೇಂದ್ರ ಪ್ರಸಾದ್ ನೇತೃತ್ವದಲ್ಲಿ ನಗರಸಭೆಯ ಮೇಲೆ ಗುರುವಾರ ಸಂಜೆ ದಿಢೀರ್ ದಾಳಿ ನಡೆಸಿದ ತಂಡ, ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದ ಕಚೇರಿಗೆ ತೆರಳಿ ಎಂಡಿ ನಾಗೇಂದ್ರ ಹಾಗೂ ಕೇಸ್ ವರ್ಕರ್ ಸರ್ವಮಂಗಳ ಸಾರ್ವಜನಿಕರೊಬ್ಬರಿಂದ ಹಣ ಪಡೆಯುತ್ತಿದ್ದಾಗ ಹಣದ ಸಮೇತ ಹಿಡಿದು ಹಾಕಿದ್ದಾರೆ.
ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದ ಎಂಡಿ ನಾಗೇಂದ್ರ ಹಾಗೂ ಕೇಸ್ ವರ್ಕರ್ ಸರ್ವಮಂಗಳ ಚಾಮರಾಜನಗರದ ನಿವಾಸಿ ಮಹಮದ್ ಜುಬೇರ್ ಎಂಬವರಿಗೆ ಕಾರ್ ಲೋನ್ ಕೊಡಿಸುವುದಾಗಿ ಹಣದ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಎಂಡಿ ಹಾಗೂ ಕೇಸ್ ವರ್ಕರ್ ಹಣಕ್ಕೆ ಬೇಡಿಕೆ ಇಟ್ಟಿದ ಸಂಬAಧ ಮಹಮದ್ ಜುಬೇರ್ ಈ ಇಬ್ಬರ ವಿರುದ್ದ ಲೋಕಾಯುಕ್ತರಿಗೆ ದೂರು ನೀಡಿದ್ದರು.
ಗುರುವಾರ ಕಾರ್ ಲೋನ್ ಗಾಗಿ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮಕ್ಕೆ ತೆರಳಿದ ಮಹಮದ್ ಜುಬೇರ್ ಎಂಡಿ ಹಾಗೂ ಕೇಸ್ ವರ್ಕರ್ ಗೆ 15ಸಾವಿರ ರೂ. ಹಣ ನೀಡುತ್ತಿದ್ದಾಗ ದಾಳಿ ನಡೆಸಿದ ಲೋಕಾಯುಕ್ತರು ಹಣದ ಸಮೇತ ಎಂಡಿ ಹಾಗೂ ಕೇಸ್ ವರ್ಕರ್ ಗಳಿಬ್ಬರನ್ನು ಹಿಡಿದಿದ್ದಾರೆ. 2011ರಲ್ಲಿಯೂ ನಡೆದ ಲೋಕಾ ದಾಳಿಯಲ್ಲೂ ಎಂಡಿ ನಾಗೇಂದ್ರ ಸಿಕ್ಕಿಬಿದ್ದಿದ್ದು, ಈಗ ಎರಡನೇ ಬಾರಿಯೂ ಲೋಕಾ ಬಲೆಗೆ ಬಿದ್ದಿದ್ದಾರೆ.
ದಾಳಿ ನಡೆಸಿ ಬಳಿಕ ಸುಮಾರು ಮೂರು ಗಂಟೆಗಳಿಗೂ ಹೆಚ್ಚುಕಾಲ ದಾಖಲಾತಿ ಪರಿಶೀಲನೆ ನಡೆಸಿ ವಿಚಾರಣೆ ನಡೆಸಿದರು.








