ಹಾನಗಲ್ಲ :
ಸಿದ್ಧರಾಮಯ್ಯ ಹಾವೇರಿ ಮಾತ್ರವಲ್ಲ ರಾಜ್ಯದ ಯಾವುದೇ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದರೂ ಗೆಲುವು ಖಚಿತ, ಸಮ್ಮಿಶ್ರ ಸರಕಾರ ಐದು ವರ್ಷ ಪೂರೈಸುತ್ತದೆ, ಮತ್ತೆ ಕಾಂಗ್ರೇಸ್ ರಾಜ್ಯದಲ್ಲಿ ಸಿದ್ಧರಾಮಯ್ಯ ನೇತೃತ್ವದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ವಿಶ್ವಾಸ ವ್ಯಕ್ತಪಡಿಸಿದರು.
ಶನಿವಾರ ಹಾನಗಲ್ಲಿನಲ್ಲಿ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ನಂತರ ಸುದ್ದಿಗಾರರಿಗೆ ವಿವರ ನೀಡಿದ ಅವರು, ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಯಾವುದೆ ಅಡೆತಡೆಗಳಿಲ್ಲದೆ ಐದು ವರ್ಷ ಪೂರೈಸುತ್ತದೆ. ಕಾಂಗ್ರೇಸ್ ಪಕ್ಷವನ್ನು ಜನತೆ ಪೂರ್ಣ ಬಹುಮತಕ್ಕೆ ತರುವಲ್ಲಿ ಹಿಂದಿನ ವಿಧಾನಸಭಾ ಚುನಾವಣೆ ಸ್ವಲ್ಪ ಹಿಂದೇಟಾಗಿದೆ. ಈಗ ಜನತೆಗೆ ಕಾಂಗ್ರೇಸ್ ಬಗ್ಗೆ ವಿಶ್ವಾಸ ಮೂಡಿದೆ. ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗುತ್ತೇನೆ ಎಂದು ಹೇಳಿರುವುದನ್ನು ತಪ್ಪು ಭಾವಿಸುವುದು ಬೇಡ. ಈಗಿನ ಸಮ್ಮಿಶ್ರ ಸರಕಾರದ ಐದು ವರ್ಷ ಪೂರ್ಣಗೊಂಡ ನಂತರ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಕಾಂಗ್ರೇಸ್ ಬಹುಮತ ಪಡೆಯುವುದು. ಆಗ ಮತ್ತೆ ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗುತ್ತಾರೆ. ಆದರೆ ಈಗ ಸಿದ್ಧರಾಮಯ್ಯ ಅವರ ಹೇಳಿಕೆಯನ್ನು ತಿರುಚುತ್ತಿರುವುದು ಸರಿಯಲ್ಲ ಎಂದರು.
ಕೇಂದ್ರ ಸರಕಾರ ಪ್ರವಾಹಕ್ಕೆ ತುತ್ತಾದ ಕೊಡಗಿಗೆ ಸಾಂತ್ವನದ ಮಾತುಗಳನ್ನಾಡಿದೆ ಹೊರತು ಸಹಾಯಕ್ಕೆ ನಿಲ್ಲುತ್ತಿಲ್ಲ. ಕೇರಳಕ್ಕೆ ಭೇಟಿ ನೀಡಿದ ಪ್ರಧಾನಿ ಕೊಡಗಿನ ಕಡೆ ಮುಖ ಮಾಡಲಿಲ್ಲ. ಇದು ರಾಜ್ಯಕ್ಕೆ ಮಾಡಿದ ಮಲತಾಯಿ ಧೋರಣೆಯಾಗಿದೆ. ಅಲ್ಲಿ ಪುನರ್ವಸತಿ ಹಾಗೂ ಮೂಲಭೂತ ಸೌಕರ್ಯ ಒದಗಿಸಲು ನೂರಾರು ಕೋಟಿ ರೂಗಳ ಅಗತ್ಯವಿದ್ದು, ಕೇಂದ್ರ ಸರಕಾರ ಆನೆ ಹೊಟ್ಟಿಗೆ ಅರೆಕಾಸಿನ ಮಜ್ಜಿಗೆ ಎಂಬಂತೆ ಎಂಟು ಕೋಟಿ ರೂ ಅನುದಾನ ನೀಡಿ ಕೈ ಚಲ್ಲಿರುವುದು ಸರಿಯಲ್ಲ. ಇಂತಹ ಸ್ಥಿತಿಯಲ್ಲಿ ನೂರು ಕೋಟಿ ಪರಿಹಾರವನ್ನು ಕೇಂದ್ರ ಸರಕಾರ ನೀಡಬೇಕಾಗಿತ್ತು ಎಂದರು.