ದಾವಣಗೆರೆ :
ಶಿಕ್ಷಣ, ಅಕ್ಷರ ಜ್ಞಾನ ಮನುಷ್ಯನ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಉಜ್ಜಯಿನಿ ಸದ್ಧರ್ಮ ಪೀಠದ ಶ್ರೀಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರದ ಡಿಸಿಎಂ ಟೌನ್‍ಶಿಪ್ ಬಳಿಯ ಗೋಲ್ಡನ್ ಪಬ್ಲಿಕ್ ಇಂಗ್ಲೀಷ್ ಮೀಡಿಯಂ ಸ್ಕೂಲ್‍ನ ಶಾಲಾ ಹೊಸ ಕಟ್ಟದ ಪ್ರವೇಶ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಸುಖ ಹಾಗೂ ನೆಮ್ಮದಿಯ ಜೀವನಕ್ಕೆ ವಿದ್ಯೆ, ಜ್ಞಾನವೇ ಪ್ರಮುಖ ಅಸ್ತ್ರವಾಗಿದೆ ಎಂದರು.
ವಿದ್ಯೆಯು ಶ್ರೇಷ್ಠ ಸಂಪತ್ತು ಆಗಿದೆ. ಪರಿಶ್ರಮವಿದ್ದರೆ ವಿದ್ಯಾ ಸಂಪತನ್ನು ಪಡೆಯಬಹುದಾಗಿದೆ. ಲಕ್ಷ್ಮಿ ಚಂಚಲೆಯಾಗಿದ್ದು, ಆರ್ಥಿಕವಾಗಿ ಎಷ್ಟೇ ಸಂಪತ್ತು ಕೂಡಿಟ್ಟರೂ ಅದರ ಮೇಲೆ ತೆರಿಗೆ ದಾಳಿ, ಕಳವು ಹೀಗೆ ಒಂದಲ್ಲ ಒಂದು ರೀತಿ ಭಯ ಯಾವಾಗಲೂ ಇರಲಿದೆ. ಆದರೆ, ವಿದ್ಯೆ ಎಂಬ ಸಂಪತ್ತನ್ನು ಅಪಹರಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ಪ್ರತಿಭಾ ಸಂಪನ್ನರಾದರೆ ಶ್ರೇಷ್ಠ, ಉನ್ನತ ಸ್ಥಾನ ಕಾಣಬಹುದಾಗಿದೆ. ಇಂದು ಅನ್ನ, ಆಹಾರ ಶಾರೀರಿಕ ಬೆಳವಣಿಗೆ ಕೊಟ್ಟರೆ, ವಿದ್ಯೆಯು ವಿಚಾರ, ಜ್ಞಾನವನ್ನು ಕೊಡಲಿದೆ. ಶಾರೀರಿಕವಾಗಿ ಬಲ, ಪ್ರಬುದ್ಧತೆ ಜೊತೆಗೆ ಬುದ್ಧಿವಂತಿಕೆ ಹಾಗೂ ಜ್ಞಾನ ಮುಖ್ಯವಾಗಿದೆ. ಬೇರೊಬ್ಬರನ್ನು ಮೆಚ್ಚುಸುವ ಸಲುವಾಗಿ ರೂಪವಂತರಾಗಬೇಕೆಂದು ಬಯಸುತ್ತಾರೆ. ಆದರೆ, ಶಾರೀಕವಾಗಿ ರೂಪವಂತರಾದರೆ ಸಾಲದು ಸ್ವಭಾವವೂ ಶ್ರೇಷ್ಠ ರೂಪವಂತಿಕೆಯಿಂದ ಕೂಡಿರಬೇಕೆಂದು ಪ್ರತಿಪಾದಿಸಿದರು.
ಪರಿಪೂರ್ಣ ವಿದ್ಯಾವಂತ, ವಿನಯವಂತರನ್ನು ಜಗತ್ತು ಗುರುತಿಸಿ ನೌಕರಿ ನೀಡಲಿದೆ. ಕೇವಲ ಅಂಕ ಗಳಿಸಿದರೆ ಸಾಲದು ಬೌದ್ಧಿಕವಾಗಿಯೂ ವಿಕಾಸ ಹೊಂದಬೇಕು. ವಿದ್ಯೆ ಜೊತೆಗೆ ವಿನಯವೂ ಇರಬೇಕು. ವಿದ್ಯೆ, ತಾಳ್ಮೆ, ಸಮಾಧಾನವಿದ್ದರೆ ಪರಿಪೂರ್ಣ ವಿದ್ಯಾವಂತರಾಗಿ ಉಜ್ವಲ ಭವಿಷ್ಯ ಕಾಣಬಹುದಾಗಿದೆ ಎಂದರು.
ಪ್ರಸ್ತುತ ಶಿಕ್ಷಕರಿಗೆ ಗೌರವ ಸಿಗಲು ಸರ್ವಪಲ್ಲಿ ರಾಧಾಕೃಷ್ಣನ್ ಅವರೇ ಕಾರಣರಾಗಿದ್ದಾರೆ. ಶಿಕ್ಷಕ ವೃತ್ತಿ ಪವಿತ್ರವಾಗಿದ್ದು, ಶಿಕ್ಷಕರ ಕೈಯಲ್ಲಿ ವಿದ್ಯಾರ್ಥಿಗಳ ಭವಿಷ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಆವರಗೊಳ್ಳ ಪುರವರ್ಗ ಹಿರೇಮಠದ ಶ್ರೀಓಂಕಾರ ಶಿವಾಚಾರ್ಯ ಸ್ವಾಮೀಜಿ, ವಿಧಾನ ಪರಿಷತ್‍ನ ಮಾಜಿ ಮುಖ್ಯ ಸಚೇತಕ ಡಾ.ಎ.ಹೆಚ್.ಶಿವಯೋಗಿಸ್ವಾಮಿ, ಕಂಬಾಳಿ ಮಠದ ಪ್ರವಚನಚಾರ್ಯ ಶ್ರೀಗಂಗಾಧರ ಸ್ವಾಮಿ, ಶಾಸಕ ಎಸ್.ಎ. ರವೀಂದ್ರನಾಥ್, ಕಡಾಕೊಳ್ಳ ನಿವೃತ್ತ ಮುಖ್ಯೋಪದ್ಯಾಯರಾದ ಸುಶೀಲಮ್ಮ ಕೆ.ಎಂ. ವೀರಯ್ಯ, ಕೆ.ಎಂ. ಗುರುಸಿದ್ದಮ್ಮ, ತುಮಕೂರು ಸಿದ್ದಗಂಗಪ್ಪ, ಶಾಲೆಯ ಕಾರ್ಯದರ್ಶಿ ಕೆ.ಎಂ.ಶಿವಕುಮಾರ್, ಕುಸುಮ ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.