ಸಾಮಾಜಿಕ ಯೋಜನೆಗಳಿಗೆ ಆಧಾರ್ ಕಡ್ಡಾಯ : ಸರ್ಕಾರ

ಬೆಂಗಳೂರು

  ಸಂಧ್ಯಾ ಸುರಕ್ಷಾ,ವಿಧವಾ ವೇತನ,ಅಂಗವಿಕಲರ ವೇತನ ಸೇರಿದಂತೆ ಹಲ ಸಾಮಾಜಿಕ ಯೋಜನೆಗಳ ಫಲಾನುಭವಿಗಳಿಗೆ ಇನ್ನು ಮುಂದೆ ಆಧಾರ್ ಕಡ್ಡಾಯಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.ಪ್ರತಿ ವರ್ಷ ಅರವತ್ತೈದು ಲಕ್ಷ ಜನರಿಗೆ ವಿವಿಧ ಸಾಮಾಜಿಕ ಯೋಜನೆಗಳಡಿ 7200 ಕೋಟಿ ರೂಗಳಷ್ಟು ಹಣ ನೀಡಲಾಗುತ್ತಿದ್ದು ಆ ಪೈಕಿ ಶೇಕಡಾ ಮೂವತ್ತರಿಂದ ನಲವತ್ತರಷ್ಟು ಜನ ಯೋಜನೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ.

    ಹೀಗಾಗಿ ಆಧಾರ್ ಕಡ್ಡಾಯ ಮಾಡಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಸಂದಾಯ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಇಂದು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರಿಗೆ ತಿಳಿಸಿದರು.ಸರ್ಕಾರ ರೂಪಿಸಿರುವ ಹಲವು ಸಾಮಾಜಿಕ ಯೋಜನೆಗಳಡಿ ಫಲಾನುಭವಿಗಳಾಗಿರುವವರ ಪೈಕಿ ಹಲವರು ಇದರ ಅನುಕೂಲ ಪಡೆಯಲು ಅರ್ಹರೇ ಅಲ್ಲ ಎಂದ ಅವರು,ಈ ಹಿನ್ನೆಲೆಯಲ್ಲಿ ಆಧಾರ್ ಕಡ್ಡಾಯ ಮಾಡಿ,ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಲು ತೀರ್ಮಾನ ಮಾಡಲಾಗಿದೆ.

   ಇದರಿಂದಾಗಿ ಸುಮಾರು ಆರು ನೂರರಿಂದ ಏಳು ನೂರು ಕೋಟಿ ರೂಪಾಯಿ ಉಳಿಯಬಹುದು ಎಂಬ ನಿರೀಕ್ಷೆ ಇದೆ.ಜಿಲ್ಲಾಧಿಕಾರಿಗಳ ಕಛೇರಿ ಹಾಗೂ ತಾಲ್ಲೂಕು ಕಛೇರಿಗಳ ಮುಂದೆ ಇರುವ ಮಧ್ಯವರ್ತಿಗಳ ಹಾವಳಿಯಿಂದ ಹೀಗೆ ಅನರ್ಹರಿಗೂ ಸರ್ಕಾರದ ಹಣ ವಿನಾಕಾರಣ ತಲುಪುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

   ಹೀಗೆ ಉಳಿಯುವ ಹಣದಲ್ಲಿ ಸರ್ಕಾರ ಇತರ ಯೋಜನೆಗಳಿಗೆ ಹಣ ನೀಡಬಹುದು ಎಂದ ಅವರು,ಶವಸಂಸ್ಕಾರ ಯೋಜನೆ ರೂಪಿಸಿದ ಸರ್ಕಾರಗಳು ಸತ್ತವರ ಕುಟುಂಬದವರು ಶ್ರೀಮಂತರ ಮನೆಬಾಗಿಲಿಗೆ ಹೋಗಿ ಹಣಕ್ಕಾಗಿ ಅಲೆಯುವ ಸ್ಥಿತಿ ಬರಬಾರದು ಎಂದು ಬಯಸಿದ್ದವು ಎಂದು ಹೇಳಿದರು.

   ಇದೇ ಕಾರಣಕ್ಕಾಗಿ ಸತ್ತವರ ಅಂತ್ಯಸಂಸ್ಕಾರಕ್ಕಾಗಿ ತಲಾ ಐದು ಸಾವಿರ ರೂಪಾಯಿಗಳನ್ನು ನೀಡಲು ತೀರ್ಮಾನ ಮಾಡಲಾಗಿತ್ತು.ಆದರೆ ವ್ಯಕ್ತಿ ಸತ್ತು ಮೂರು ವರ್ಷ ಕಳೆದರೂ ಹಣ ನೀಡದ ಪರಿಸ್ಥಿತಿ ಬಹಿರಂಗವಾಗಿದೆ ಎಂದು ಹೇಳಿದರು.
ಕಳೆದ ಮೂರು ವರ್ಷಗಳಲ್ಲಿ 84,394 ಪ್ರಕರಣಗಳಲ್ಲಿ ಸತ್ತವರ ಅಂತ್ಯಸಂಸ್ಕಾರಕ್ಕಾಗಿ ಹಣ ನೀಡಲಾಗಿಲ್ಲ.ಇದರ ಬಾಬತ್ತು ಈಗ ಸುಮಾರು 72 ಕೋಟಿ ರೂಪಾಯಿಗಳಷ್ಟಾಗಿದೆ ಎಂದು ವಿವರಿಸಿದರು.

   ಹೀಗಾಗಿ ಮುಖ್ಯಮಂತ್ರಿಗಳ ಜತೆ ಮಾತನಾಡಿ ಮೊದಲು ಕಂತಿನಲ್ಲಿ 18 ಕೋಟಿ ರೂಪಾಯಿ,ಎರಡನೇ ಕಂತಿನಲ್ಲಿ 18 ಕೋಟಿ ರೂಪಾಯಿ ಬಿಡುಗಡೆ ಮಾಡಿಸಲಾಗಿದೆ ಎಂದು ಸಚಿವ ಅಶೋಕ್ ಹೇಳಿದರು.ವಿವಿಧ ಸಾಮಾಜಿಕ ಯೋಜನೆಗಳ ಅಡಿಯಲ್ಲಿ ನಡೆಯುತ್ತಿರುವ ಅವ್ಯವಹಾರವನ್ನು ತಡೆಗಟ್ಟಿದರೆ ಅಂತ್ಯ ಸಂಸ್ಕಾರದಂತಹ ಯೋಜನೆಗಳಿಗೆ ತಕ್ಷಣವೇ ಹಣ ನೀಡಬಹುದು ಎಂದು ಅವರು ವಿವರಿಸಿದರು.

   ಇನ್ನು ಮುಂದೆ ಬಡವರು ಸತ್ತಾಗ ತಕ್ಷಣವೇ ಅಂತ್ಯ ಸಂಸ್ಕಾರದ ಕಾರ್ಯಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಐದು ಸಾವಿರ ರೂಪಾಯಿಗಳನ್ನು ತೆಗೆದುಕೊಂಡು ಹೋಗಿ ಕೊಡಬೇಕು ಎಂದು ನುಡಿದರು.

ಫೋನ್ ಕದ್ದಾಲಿಕೆ

   ಈ ಹಿಂದಿನ ಸರ್ಕಾರದಲ್ಲಿ ನಡೆದ ಟೆಲಿಫೋನ್ ಕದ್ದಾಲಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸುತ್ತಿದ್ದು ಹಿರಿಯ ಪೋಲೀಸ್ ಅಧಿಕಾರಿ ಅಲೋಕ್ ಕುಮಾರ್ ಅವರನ್ನು ವಿಚಾರಣೆಗೊಳಪಡಿಸಿದ ಕುರಿತು ಪ್ರತಿಕ್ರಿಯಿಸಿದ ಅವರು,ಯಾರು ಉಪ್ಪು ತಿಂದಿದ್ದಾರೋ?ಅವರು ನೀರು ಕುಡಿಯಲೇಬೇಕು ಎಂದು ವ್ಯಂಗ್ಯ ಆಡಿದರು.

   ಟೆಲಿಫೋನ್ ಕದ್ದಾಲಿಕೆಗೂ ನಿರ್ದಿಷ್ಟ ಕಾನೂನಿದೆ.ಯಾರ ದೂರವಾಣಿಯನ್ನು ಕದ್ದಾಲಿಸಬೇಕು ಎಂದು ಬ್ರಿಟಿಷರ ಕಾಲದಲ್ಲೇ ಕಾನೂನು ರೂಪಿಸಲಾಗಿದೆ.ಮತ್ತು ನಾವು ಕಾಲಕ್ಕೆ ತಕ್ಕಂತೆ ತಿದ್ದುಪಡಿಗಳನ್ನು ಮಾಡುತ್ತಾ ಬಂದಿದ್ದೇವೆ.ಸಮಾಜಘಾತಕ ಶಕ್ತಿಗಳು,ದೇಶದ್ರೋಹಿ ಶಕ್ತಿಗಳ ದೂರವಾಣಿಯನ್ನು ಕದ್ದಾಲಿಸುವುದು ಸಹಜ.ಆದರೆ ತಮ್ಮ ವಿರೋಧಿಗಳ ದೂರವಾಣಿಯನ್ನು ಕದ್ದಾಲಿಸುವುದು ಸರಿಯಲ್ಲ.ಹಾಗೆಯೇ ಸ್ಮಗ್ಲರ್‍ಗಳ ದೂರವಾಣಿಯನ್ನು ಕದ್ದಾಲಿಸುವಂತೆ ಆದಿಚುಂಚನಗಿರಿಯ ಶ್ರೀನಿರ್ಮಲಾನಂದ ಸ್ವಾಮಿಗಳ ದೂರವಾಣಿಯನ್ನು ಕದ್ದಾಲಿಸಿರುವುದು ಸರಿಯಲ್ಲ ಎಂದು ಹೇಳಿದರು.

   ದೂರವಾಣಿ ಕದ್ದಾಲಿಸಲು ನಮ್ಮಲ್ಲಿ ಅತ್ಯಾಧುನಿಕ ಉಪಕರಣಗಳಿವೆ.ಕದ್ದಾಲಿಸಿದ ಕರೆಗಳ ಪೈಕಿ ಎಷ್ಟು ಕಾಲದ ದಾಖಲೆಯನ್ನು ಅಳಿಸಲಾಗಿದೆ ಎಂಬುದರಿಂದ ಹಿಡಿದು ಎಷ್ಟು ಅವಧಿಯ ದೂರವಾಣಿ ಕರೆಗಳನ್ನು ಪೆನ್‍ಡ್ರೈವ್ ಮೂಲಕ ಡೌನ್‍ಲೋಡ್ ಮಾಡಿಕೊಳ್ಳಲಾಗಿದೆ ಎಂಬ ಕುರಿತು ಈಗ ವಿವಿಧ ರೀತಿಯ ಮಾಹಿತಿಗಳು ಲಭ್ಯವಾಗುತ್ತವೆ ಎಂದರು.ಈ ಹಿನ್ನೆಲೆಯಲ್ಲಿ ಸಿಬಿಐ ತನಿಖೆ ನಡೆಯುತ್ತಿದೆ.ಇದು ಮುಗಿಯಲು ಬಹಳ ಕಾಲವೇನೂ ಬೇಕಾಗಿಲ್ಲ.ತ್ವರಿತಗತಿಯಲ್ಲಿ ಇದರ ಎಲ್ಲ ಆಯಾಮಗಳ ಕುರಿತು ತನಿಖೆ ನಡೆಸಿ ಸಿಬಿಐ ವರದಿ ನೀಡಲಿದೆ ಎಂದು ವಿವರಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link