ಸಾರ್ವಜನಿಕರ ದಿಗ್ಬಂಧನದಿಂದ ಸರ್ಕಾರಕ್ಕೆ ಜ್ಞಾನೋದಯ : ಸರ್ಕಾರದ ವಿರುದ್ಧ ಪ್ರಿಯಾಂಕ್ ಖರ್ಗೆ ಟೀಕೆ

ಅಸಮರ್ಥ ಸರ್ಕಾರದ ವಿರುದ್ಧ ಜನಾಕ್ರೋಶ : 

ಬೆಂಗಳೂರು : ಬಿಜೆಪಿ ಮುಖಂಡ ಪ್ರವೀಣ್ ಅವರ ಸಾವಿನಿಂದ ತೀವ್ರವಾಗಿ ಮನನೊಂದು, ‘ಬಿಜೆಪಿ ಸರ್ಕಾರ ತನ್ನ ಒಂದು ವರ್ಷದ ಸಾಧನೆಯ ಜನೋತ್ಸವ ಕಾರ್ಯಕ್ರಮ ಮಾಡಲು ಮನಸ್ಸು ಒಪ್ಪುತ್ತಿಲ್ಲ ಎಂಬ ಕಾರಣ ಕೊಟ್ಟು ರದ್ದು ಮಾಡಲಾಗಿದೆ. ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ಬಿಜೆಪಿ ಸರ್ಕಾರದ ವಿರುದ್ಧ ಆರೋಪ ಮಾಡಿದರು.

ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು, ಆದರೆ ಸತ್ಯಾಂಶ ಏನೆಂದರೆ, ಪ್ರವೀಣ್ ಅವರ ಹತ್ಯೆಯಾಗಿದ್ದು ಜುಲೈ 23ರಂದು, ಮುಖ್ಯಮಂತ್ರಿಗಳ ಮನಸ್ಸು ಕರಗಿದ್ದು ಜುಲೈ 28 ಬೆಳಗಿನ ಜಾವ 12:30ಕ್ಕೆ. ಜನಾಕ್ರೋಶದಿಂದಾಗಿ ಜನೋತ್ಸವ ಕಾರ್ಯಕ್ರಮ ರದ್ದಾಗಿದೆ. ಅವರಿಗೆ ನಿಜವಾಗಿಯೂ ಜನರ ಬಗ್ಗೆ ಇಷ್ಟು ಕಾಳಜಿ ಇದ್ದಿದ್ದರೆ, ಅವರು ಗುಪ್ತಚರ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದು 27ರಂದು ಕಾರ್ಯಕ್ರಮವನ್ನು ರದ್ದು ಮಾಡಬಹುದಿತ್ತು ಎಂದು ಹೇಳಿದರು.

ಸಾರ್ವಜನಿಕರು ದಿಗ್ಬಂಧನದಿಂದ ಸರ್ಕಾರಕ್ಕೆ ಜ್ಞಾನೋದಯ :

ಸಚಿವರಾದ ಸುನಿಲ್ ಕುಮಾರ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಅವರಿಗೆ ಕಾರ್ಯಕರ್ತರು ಹಾಗೂ ಸಾರ್ವಜನಿಕರು ದಿಗ್ಬಂಧನ ಮಾಡಿದಾಗ ಸರ್ಕಾರಕ್ಕೆ ಈ ಜ್ಞಾನೋದಯವಾಗಿದೆ. ಬಿಜೆಪಿ ಯುವ ಮೋರ್ಚಾ ಹಾಗೂ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆಗೆ ನೀಡಲು ಮುಂತಾದಾಗ ಜ್ಞಾನೋದಯವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಕಾರ್ಯಕರ್ತರು ಗೃಹ ಮಂತ್ರಿಗಳು ಹಾಗೂ ಮುಖ್ಯಮಂತ್ರಿಗಳ ರಾಜೀನಾಮೆಗೆ ಪಟ್ಟು ಹಿಡಿದು, ಬಿಜೆಪಿ ಸರ್ಕಾರದಲ್ಲಿ ಹಿಂದೂ ಕಾರ್ಯಕರ್ತರಿಗೆ ರಕ್ಷಣೆ ಇಲ್ಲ ಎಂದಾದರೆ ಬಿಜೆಪಿ ಸರ್ಕಾರ ಇರಬೇಕೇ ಎಂದು ಜನ ಆಕ್ರೋಶದಿಂದ ಮಾತನಾಡಿದಾಗ ಅವರಿಗೆ ಜ್ಞಾನೋದಯವಾಗಿದೆ ಎಂದು ಲೇವಡಿ ಮಾಡಿದರು.

ಸರ್ಕಾರ ಅನುಕಂಪ ಹೆಸರಲ್ಲಿ ಯಾರ ಮೇಲೆ ಗೂಬೆಕೂರಿಸಲು ಪ್ರಯತ್ನಿಸುತ್ತಿದೆ? ಪ್ರವೀಣ್ ಅವರ ಪತ್ನಿಯೇ ಈ ಸರ್ಕಾರದಿಂದ ಯಾರಿಗೂ ನ್ಯಾಯ ಸಿಗುವುದಿಲ್ಲ ಎಂದು ಹೇಳಿದ್ದಾರೆ. ಸರ್ಕಾರ ಇನ್ನಾದರೂ ತನ್ನ ವೈಫಲ್ಯವನ್ನು ಒಪ್ಪಿಕೊಳ್ಳಬೇಕು. ರಾಜ್ಯದಲ್ಲಿ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ಇದ್ದಾರೆ ಎಂದು ಬಿಜೆಪಿ ಕಾರ್ಯಕರ್ತರಿಗೆ ಅನುಮಾನ ವ್ಯಕ್ತವಾಗುತ್ತಿದೆ. ಈ ಸರ್ಕಾರದ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದೆ ಎಂದು ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದರು.

ಶಿವಮೊಗ್ಗ ಬಿಜೆಪಿಯ ಕೇಂದ್ರ ಸ್ಥಾನವಾದರೂ ಹರ್ಷ ಕೊಲೆ ಪ್ರಕರಣದಲ್ಲಿ ಸರ್ಕಾರ ಸೆಕ್ಷನ್ 144 ಜಾರಿ ಮಾಡಿತ್ತು. ಅದನ್ನು ಉಲ್ಲಂಘನೆ ಮಾಡಿದ್ದು ಸಚಿವರಾಗಿದ್ದ ಈಶ್ವರಪ್ಪ ಹಾಗೂ ಸಂಸದರಾಗಿದ್ದ ರಾಘವೇಂದ್ರ. ಅವರದೇ ಪಕ್ಷದ ನಾಯಕರು ಅವರೇ ಪಕ್ಷದ ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ ಎಂದರೆ, ಗೃಹ ಸಚಿವರು ಹಾಗೂ ಮುಖ್ಯಮಂತ್ರಿಗಳಿಗೆ ಎಷ್ಟು ಬೆಲೆ ನೀಡುತ್ತಿದ್ದಾರೆ ಎಂದು ತಿಳಿಯುತ್ತದೆ. ಈಗಲೂ ಕೂಡ ದಕ್ಷಿಣ ಕನ್ನಡದಲ್ಲಿ ಸೆಕ್ಷನ್ 144 ಜಾರಿಯಾಗಿದ್ದು, ಈಗ ಪ್ರವೀಣ್ ಅವರಿಗೆ ನ್ಯಾಯ ಕೊಡಿಸಲು ಯಾಕೆ ಬಿಜೆಪಿ ನಾಯಕರು ಹೋಗುತ್ತಿಲ್ಲ? ಹರ್ಷ ಅವರಿಗೆ ನ್ಯಾಯ ಕೊಡಿಸಲು ಇರುವ ಕಾಳಜಿ ಪ್ರವೀಣ್ ಅವರಿಗೆ ನ್ಯಾಯ ಕೊಡಿಸಲು ಯಾಕೆ ಇಲ್ಲ. ಅಲ್ಲಿ ಒಂದು ನ್ಯಾಯ, ಇಲ್ಲಿ ಒಂದು ನ್ಯಾಯ ಯಾಕೆ? ಎಂದು ಪ್ರಶ್ನೆ ಮಾಡಿದರು.

ಅಸಮರ್ಥ ಸರ್ಕಾರದ ವಿರುದ್ಧ ಜನಾಕ್ರೋಶ : ನಿಮ್ಮ ಸಾಧನೆ ಏನೆಂದರೆ, ಕಾನೂನು ಸುವ್ಯವಸ್ಥೆ ಹಾಳಾಗಿರುವುದು, ಭೋವಿ ಅಭಿವೃದ್ಧಿ ನಿಗಮದಲ್ಲಿ 150 ಕೋಟಿ ಅಕ್ರಮ, ಗಂಗಾ ಕಲ್ಯಾಣ ಯೋಜನೆಯಲ್ಲಿ 451 ಕೋಟಿ ಪರಿಶಿಷ್ಟರ ಹಣ ನುಂಗುವುದು, ಪಿಎಸ್’ಐ ಹಗರಣ, ಪಿ ಡಬ್ಲ್ಯೂಡಿ, ಜೆ ಇ ಇ, ಆರ್ಟಿಕಲ್ಚರ್ ಇಲಾಖೆ, ಸಹಾಯಕ ಪ್ರಾಧ್ಯಾಪಕ ನೇಮಕಾತಿ ಸೇರಿದಂತೆ ಎಲ್ಲಾ ಇಲಾಖೆಗಳಲ್ಲಿ ಅಕ್ರಮ ನಡೆದಿರುವುದು. ಒಂದೇ ದಿನ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳು ಬಂಧನವಾಗಿದ್ದು ನಿಮ್ಮ ಸರ್ಕಾರದ ಸಾಧನೆ.

ರಾಜ್ಯದಲ್ಲಿ ಈ ಭ್ರಷ್ಟೋತ್ಸವ ನಿಲ್ಲಬೇಕಾದರೆ ನೀವು ರಾಜೀನಾಮೆ ನೀಡಬೇಕು. ಗೃಹ ಸಚಿವರು ಇಷ್ಟೆಲ್ಲಾ ಆದ ನಂತರ ರಾಜಕೀಯದಿಂದಲೇ ಸ್ವಯಂ ನಿವೃತ್ತಿರಿ ಪಡೆಯುವುದು ಉತ್ತಮ. ರಾಜ್ಯದ ಜನರ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ರಾಜೀನಾಮೆ ನೀಡಿ. ನೀವು ನಾಯಕತ್ವ ಬದಲಾಯಿಸಲು ಇಚ್ಛೆ ಇಲ್ಲ ಎಂದರೆ ಚುನಾವಣೆ ಎದುರಿಸೋಣ ಬನ್ನಿ. ನಾವು ಸಿದ್ಧರಿದ್ದೇವೆ. ಬಿಜೆಪಿ ಕಾರ್ಯಕರ್ತರೇ ನಿಮ್ಮ ಸಾಮಥ್ರ್ಯವನ್ನು ಪ್ರಶ್ನಿಸುತ್ತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ರಾಜೀನಾಮೆ ನೀಡುವುದು ಉತ್ತಮ.’ ಎಂದು ಟೀಕಿಸಿದ್ದಾರೆ.

ಬಿಜೆಪಿ ಸರ್ಕಾರಕ್ಕೆ ಕಾಂಗ್ರೆಸ್ ಪಕ್ಷದ ಮೂರು ಆಗ್ರಹಗಳು

1. ಪ್ರವೀಣ್ ಹತ್ಯೆ ಪ್ರಕರಣದ ತನಿಖೆ ಮುಕ್ತ ಹಾಗೂ ಪಾರದರ್ಶಕವಾಗಬೇಕು.

2.ಇದುವರೆಗೂ ಆಗಿರುವ ಕೋಮುಗಲಭೆ ಹಾಗೂ ಕೋಮುಹತ್ಯೆಯ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕು.

3.ನಮ್ಮ ಸಮಾಜದಲ್ಲಿ ಕೋಮು ವಿಷ ಬೀಜ ಬಿತ್ತುತ್ತಿರುವ ಎಲ್ಲಾ ಸಮುದಾಯಗಳ ಸಂಘಟನೆಗಳನ್ನು ನಿಷೇಧಿಸಬೇಕು. ಇದಕ್ಕೆ ನಾವು ಬೆಂಬಲಿಸುತ್ತೇವೆ.

ತೇಜಸ್ವಿ ಸೂರ್ಯ ಅವರು ದೂರವಾಣಿ ಸಂಭಾಷಣೆಯಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಿದ್ದರೆ ಬೀದಿಗಿಳಿದು ಕಲ್ಲು ಹೊಡೆಸಬಹುದಿತ್ತು ಎಂದು ಹೇಳಿದ್ದಾರೆ. ಸಂಸದರಾಗಿ ಇಂತಹ ಹೇಳಿಕೆ ನೀಡಲು ಸಾಧ್ಯವೇ. ರಾಜ್ಯದಲ್ಲೂ ಉತ್ತರ ಪ್ರದೇಶ ಆಡಳಿತ ಮಾದರಿ ಎಂದು ಹೇಳುತ್ತೀರಿ. ಸಾರ್ವಜನಿಕ ಆಸ್ತಿ ನಾಶ ಮಾಡಿದರೆ ನಿಮ್ಮ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ನಿಮ್ಮ ಮನೆಗಳ ಮೇಲೆ ಬುಲ್ಡೋಜರ್ ಹತ್ತಿಸಬಹುದೇ? ದೆಹಲಿಯಲ್ಲಿ ನಿಮ್ಮ ಮೇಲೆ ಸಾರ್ವಜನಿಕ ಆಸ್ತಿ ನಾಶದ ಪ್ರಕರಣ ದಾಖಲಾಗಿದ್ದು ಬೊಮ್ಮಾಯಿ ಅವರಿಗೆ ಹೇಳಿ ನೀವೇ ನಿಮ್ಮ ಮನೆ ಮೇಲೆ ಬುಲ್ಡೋಜರ್ ಹತ್ತಿಸುತ್ತಿರೋ ಅಥವಾ ನಾವು ಬರಬೇಕೋ? ಎಂದು ಪ್ರಶ್ನೆ ಮಾಡಿದರು.

Recent Articles

spot_img

Related Stories

Share via
Copy link
Powered by Social Snap