ವಾಷಿಂಗ್ಟನ್:
ಹೈದರಾಬಾದ್ ಮೂಲದ 26 ವರ್ಷದ ವಿದ್ಯಾರ್ಥಿಯನ್ನು ಅಮೆರಿಕದ ವಾಷಿಂಗ್ಟನ್‌ನ ಪೆಟ್ರೋಲ್ ಸ್ಟೇಶನ್ ಬಳಿ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿರುವ ದಾರುಣ ಘಟನೆ ನಡೆದಿದೆ.
ಮೃತ ವಿದ್ಯಾರ್ಥಿಯನ್ನು ಕೆ ರವಿತೇಜ ಎಂದು ಗುರುತಿಸಲಾಗಿದ್ದು, ಅವರು ಹೈದರಾಬಾದ್‌ನ ಚೈತನ್ಯಪುರಿ ಪ್ರದೇಶದ ಆರ್‌ಕೆ ಪುರಂನವರು ಎಂದು ಮೂಲಗಳು ತಿಳಿಸಿವೆ. ಸ್ನಾತಕೋತ್ತರ ಪದವಿಗಾಗಿ ಅಮೆರಿಕಕ್ಕೆ ಹೋಗಿದ್ದ ರವಿತೇಜ ಇತ್ತೀಚೆಗಷ್ಟೇ ಕೋರ್ಸ್ ಮುಗಿಸಿದ್ದು,ಉದ್ಯೋಗದ ಹುಡುಕಾಟದಲ್ಲಿದ್ದರು ಎನ್ನಲಾಗಿದೆ.
ಶಂಕಿತ ದುಷ್ಕರ್ಮಿಗಳು ರವಿತೇಜ ಅವರ ಮೇಲೆ ದೂರದಿಂದ ಗುಂಡು ಹಾರಿಸಿದ್ದು,ಹತ್ಯೆಯ ಹಿಂದಿನ ಕಾರಣ ಈವರೆಗೆ ತಿಳಿದು ಬಂದಿಲ್ಲ. ಭೀಕರ ಗುಂಡಿನ ದಾಳಿಗೆ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಅವರ ಪೋಷಕರು ಮಗನನ್ನು ಕಳೆದುಕೊಂಡ ದುಃಖದಲ್ಲಿದ್ದಾರೆ. ರವಿತೇಜ ತಂದೆ ಮಗನ ಸಾವಿನ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ್ದು “ನನಗೆ ಮಾತನಾಡಲು ಆಗುತ್ತಿಲ್ಲ.ಯಾವ ತಂದೆಗೂ ಇಂಥ ಸ್ಥಿತಿ ಬರಬಾರದು. ಅವನು ಹೇಗೆ ಹೋಗಿದ್ದ ಮತ್ತು ಹೇಗೆ ಹಿಂದಿರುಗಿದ್ದಾನೆ ನೋಡಿ” ಎಂದು ಕೆ. ಚಂದ್ರಮೌಳಿ ಹೇಳಿದ್ದಾರೆ.
ಸದ್ಯ ಸ್ಥಳೀಯ ಪೊಲೀಸರು ಈ ದಾಳಿಯ ಹಿಂದಿನ ಕಾರಣವನ್ನು ತನಿಖೆ ನಡೆಸುತ್ತಿದ್ದು, ದುಷ್ಕರ್ಮಿಗಳನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
