ಬಳ್ಳಾರಿ
ಗಣೇಶ ಚತುರ್ಥಿ ಅಂಗವಾಗಿ ಈ ಬಾರಿ ಎಂಎಂಟಿಸಿ ಕಾಲೋನಿಯ ಉದ್ಯಾನವನದಲ್ಲಿ ಗಂಗಾವತಿ ಪ್ರಾಣೇಶ್ ಅವರಿಂದ ಹಾಸ್ಯದ ಮೂಲಕ ಸಾಮಾಜಿಕ ಹಾಗೂ ಸಾಂಸ್ಕ್ರತಿಕ ಪ್ರಜ್ಞೆ ಮೂಡಿಸಲು ಸೆ.13ರಂದು ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ.
ಈ ಕುರಿತು ಇಂದು ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಯುವ ಧುರೀಣ ಕೆಎಸ್ ಅಶೋಕ್ ಕುಮಾರ್ ಅವರು, ಸಂಜೆ 6-15ರಿಂದ ರಾತ್ರಿ 10 ಗಂಟೆಯವರೆಗೆ ಸತ್ಯನಾರಾಯಣಪೇಟೆ ಮತ್ತು ಸಮಸ್ತ ಬಳ್ಳಾರಿ ನಾಗರಿಕರಿಗಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರಾಣೇಶ್, ನರಸಿಂಹ ಜೋಷಿ, ಮಹಾಮನಿ ಅವರಿಂದ ಕೇವಲ ಹಾಸ್ಯ ಕಾರ್ಯಕ್ರಮ ಮಾತ್ರವಲ್ಲ.
ಅವರಿಂದಲೇ ಜನರಲ್ಲಿ ಹಸಿರೇ-ಉಸಿರು, ಸ್ವಚ್ಛ ಮನ-ಸ್ವಚ್ಛ ಮನೆ ಎಂಬ ಸದಾಶಯದೊಂದಿಗೆ ವೃಕ್ಷ ದಾನ, ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ನಮ್ಮ ದೇಶವನ್ನು ಕಾಯುವ ಯೋಧರಿಗಾಗಿ ಮತ್ತು ಸಕಲ ಜೀವರಾಶಿಗಳಿಗೆ ಪ್ರತ್ಯಕ್ಷ, ಅಪರೋಕ್ಷವಾಗಿ ಆಹಾರ ಧಾನ್ಯಗಳನ್ನು ಒದಗಿಸುತ್ತಿರುವ ಅನ್ನದಾತರಿಗೆ ಕೃತಜ್ಞತೆಯೊಂದಿಗೆ ಗೌರವ ನೀಡುವುದು ಪ್ರತಿಯೊಬ್ಬರ ಕರ್ತವ್ಯವಾಗಿರುವುದನ್ನು ಬಿಂಬಿಸಲಾಗುತ್ತಿದೆ. ಇಂದು ಅನೇಕ ರೀತಿಯಲ್ಲಿ ನಮ್ಮ ಭಾರತ ಕಲುಷಿತಗೊಂಡಿದೆ. ಈ ಪೈಕಿ ಪ್ಲಾಸ್ಟಿಕ್ ನಿಂದ ಕಾಮಧೇನು ಸ್ವರೂಪಿಯಾಗಿರುವ ಹಸುಗಳು ಸಹ ಸಾವಿಗೀಡಾಗುತ್ತಿವೆ. ಪ್ಲಾಸ್ಟಿಕ್ ಮುಕ್ತ ಭಾರತವನ್ನಾಗಿಸಲು ಪ್ರತಿಯೊಬ್ಬರೂ ಏನೇನು ಮಾಡಬೇಕೆನ್ನುವುದನ್ನು ಹಾಸ್ಯ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳ ಮೂಲಕ ಪ್ರಾಣೇಶ್ ಮತ್ತು ತಂಡದವರು ಮನವರಿಕೆ ಮಾಡಿಕೊಡಲಿದ್ದಾರೆ.
ಇದೆಲ್ಲಕ್ಕಿಂತ ಮುಖ್ಯವಾಗಿ ಇಂದು ಮೊಬೈಲ್ ಮೇನಿಯಾದ ಸುಳಿಗೆ ಸಿಲುಕಿರುವ ಜನತೆ ಆರೋಗ್ಯದ ಕಡೆ ಗಮನ ಹರಿಸುವುದನ್ನೇ ಮರೆತು ಹೋಗುತ್ತಿದ್ದಾರೆ. ವಾಟ್ಸಪ್, ಫೇಸ್ ಬುಕ್ ಮೊದಲಾದ ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆ ಮತ್ತು ಅದರಲ್ಲೇ ಲೀನವಾಗಿರುವ ಜನತೆಗೆ ವ್ಯಾಯಾಮ, ಪ್ರಾರ್ಥನೆ, ಯೋಗದ ಕುರಿತು ಅರಿವು ಮೂಡಿಸಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಮೊಳಕಾಲ್ಮೂರು ಶಾಸಕ ಬಿ.ಶ್ರೀರಾಮುಲು, ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ್ ರೆಡ್ಡಿ, ಮಾಜಿ ಶಾಸಕರಾದ ಟಿಎಚ್ ಸುರೇಶ್ ಬಾಬು, ಮಾಜಿ ಸಂಸದರಾದ ಸಣ್ಣ ಫಕ್ಕಿರಪ್ಪ, ಸಂಡೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡ ಕೆಎಸ್ ದಿವಾಕರ್ ಕೂಡ ಆಗಮಿಸಲಿದ್ದಾರೆ. ಎಲ್ಲರೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೆಎಸ್ ಅಶೋಕ್ ಕೋರಿದ್ದಾರೆ.
ಈ ಸಂದರ್ಭದಲ್ಲಿ ಯುವ ಮುಖಂಡರಾದ ಹುಂಡೇಕಾರ್ ರಾಜೇಶ್, ಹೊಸಮಠ, ಬಸವರಾಜ, ಮಧು ಇನ್ನಿತರರು ಇದ್ದರು.