ಸೆ.2ರಂದು ಸೌಹಾರ್ದತೆಗಾಗಿ ಸಾಹಿತ್ಯ ಸಮ್ಮೇಳನ

 ದಾವಣಗೆರೆ:

      ಧರ್ಮ-ಧರ್ಮಗಳ ನಡುವಿನ ಹಿಂಸೆಯಿಂದ ಸಮಾಜ ನಲುಗಿಹೋಗಿದ್ದು, ಸಮಾಜದಲ್ಲಿ ಸಾಮರಸ್ಯ ಸ್ಥಾಪಿಸುವ ಉದ್ದೇಶದಿಂದ ದಕ್ಷಿಣಾಯಣ ಮತ್ತು ಗಾಂಧಿವಾದಿ ಪ್ರಸನ್ನ ಅವರ ಗ್ರಾಮ ಸೇವಾ ಸಂಸ್ಥೆಯ ಆಶ್ರಯಲ್ಲಿ ಸೆ.2ರಂದು ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಸೆನೆಟ್ ಸಭಾಂಗಣದಲ್ಲಿ ಸೌರ್ಹಾದತೆಗಾಗಿ ಸಾಹಿತ್ಯ ಸಮ್ಮೇಳನ ಏರ್ಪಡಿಸಲಾಗಿದೆ ಎಂದು ಚಿಂತಕ ರಾಜೇಂದ್ರ ಚೆನ್ನಿ ತಿಳಿಸಿದರು.

      ಹರಿಹರದ ಮೈತ್ರಿವನದ ಪ್ರೊ.ಬಿ.ಕೃಷ್ಣಪ್ಪ ಸಾಂಸ್ಕೃತಿಕ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 11 ಗಂಟೆಗೆ ಸಮ್ಮೇಳನವನ್ನು ಹಿರಿಯ ಸ್ವಾತಂತ್ರ್ಯ ಹೋರಾಟಗಾರರು, ನೇಕಾರರೂ ಆಗಿರುವ ಸಂಗಪ್ಪ ಮಂಟೆ ಸಮ್ಮೇಳನವನ್ನು ಉದ್ಘಾಟಿಸುವರು. ಸಮ್ಮೇಳನದಲ್ಲಿ ಕರ್ನಾಟಕದ ಪ್ರಮುಖ ಬರಹಗಾರರ ಜೊತೆಗೆ ದೆಹಲಿಯ ಗೀತಾ ಹರಿಹರನ್, ಅಜ್ಜುಂ ನಹಬಲಿ, ರಾಮಚಂದ್ರ ಗುಹಾ, ಸಂಜೀವ್ ಕಂಡೆಕರ್, ಶ್ರೀನಿವಾಸ್ ಜೈನ್ ಮತ್ತಿತರರು ಭಾಗವಹಿಸಲಿದ್ದಾರೆಂದು ಹೇಳಿದರು.

      ಸಮಾಜದಲ್ಲಿ ನಮ್ಮ ಸುತ್ತಮುತ್ತಲಿನ ಪರಿಸ್ಥಿತಿ ನೋಡಿದರೆ, ಆತಂಕ ಉಂಟಾಗುತ್ತಿದೆ. ಜಾಗತೀಕರಣ ಹಾಗೂ ನಗರೀಕರಣದ ಪ್ರಭಾವದಿಂದ ಆರ್ಥಿಕ ಏರುಪೇರು ಉಂಟಾಗಿ, ಉಲ್ಬಣಗೊಳ್ಳುತ್ತಿರುವ ಸಮಸ್ಯೆಗಳಿಗೆ ಧಾರ್ಮಿಕ ಸಂಘರ್ಷದ ವೇಷ ತೊಡಿಸಲಾಗುತ್ತಿದೆ. ಆದರೆ, ನಮ್ಮ ಸಂಖ ಪರಂಪರೆ ಹಾಗೂ ದೇಶದಲ್ಲಿರುವ ಎಲ್ಲಾ ಧರ್ಮಗಳು ಸಾಮರಸ್ಯವನ್ನು ಸಾರಿಕೊಂಡು ಬಂದಿವೆ. ಆದರೂ ಕೆಲವರ ನಡುವಳಿಕೆಯಿಂದ ಸಮಾಜದಲ್ಲಿ ಅಸಹಿಷ್ಣುತೆ ಏರ್ಪಟ್ಟಿದ್ದು, ಈ ಅಸಹಿಷ್ಣುತೆಯನ್ನು ಜಾತ್ಯಾತೀತ ವಾದದಿಂದ ಶಮನ ಮಾಡಬಹುದೇ ಎಂಬುದರ ಬಗ್ಗೆ ಈ ಸಮ್ಮೇಳದಲ್ಲಿ ಚರ್ಚೆ ನಡೆಸಲಾಗುವುದು ಎಂದರು.

      ಸಮ್ಮೇಳನದಲ್ಲಿ ಭಾಗವಹಿಸುವ 400 ಜನ ಬರಹಗಾರರು ಜನರ ಸಂಸತ್ ರೂಪದಲ್ಲಿ ಗ್ರಾಮ ಸ್ವರಾಜ್ಯ, ಎಲ್ಲಾ ಬಗೆಯ ಉಗ್ರವಾದವನ್ನು ಶಮನ ಮಾಡುವುದು ಹೇಗೆ? ಜಾತ್ಯಾತೀತವಾದದ ಪಾತ್ರವೇನು ಎಂಬುದರ ಬಗ್ಗೆ ಚರ್ಚೆ ನಡೆಸಿ, ಎಲ್ಲರ ಅಭಿಪ್ರಾಯದ ಆಧಾರದ ಮೇಲೆ ಠರಾವು ಕೈಗೊಂಡು ಮುಂದಿನ ರೂಪುರೇಷೆಯನ್ನು ರೂಪಿಸಲಾಗುವುದು ಎಂದರು.

      ಇನ್ನೋರ್ವ ಚಿಂತಕ ರಹಮತ್ ತರೀಕೆರೆ ಮಾತನಾಡಿ, ಎಲ್ಲರನ್ನೂ ಒಗ್ಗೂಡಿಸುವ ಚಳವಳಿಯಲ್ಲಿ ಕನ್ನಡದ ಲೇಖಕರು ಭಾರತದ ಲೇಖಕರೊಂದಿಗೆ ಕೆಲಸ ಮಾಡಿ, ಸಮಾಜದಲ್ಲಿ ಉಂಟಾಗಿರುವ ದ್ವೇಷ ಶಮನ ಮಾಡಲು ಪ್ರಯತ್ನಿಸುವುದರ ಜೊತೆಗೆ, ಬಹುತ್ವದ ಭಾರತವನ್ನು ಹೇಗೆ ಉಳಿಸಬೇಕೆಂಬುದರ ಬಗ್ಗೆ ಚರ್ಚಿಸಲು ಈ ಸಮ್ಮೇಳನ ಆಯೋಜಿಸಲಾಗಿದೆ ಎಂದು ಹೇಳಿದರು.

      ಈ ಸಂದರ್ಭದಲ್ಲಿ ದಕ್ಷಿಣಾಯಣದ ಗಣೇಶ್ ಎನ್. ದೇವಿ, ಸಾಹಿತಿಗಳಾದ ಎಂ.ಡಿ.ವಕ್ಕುಂದ, ಪೀರ್ ಭಾಷಾ, ಅಕ್ಷತಾ ಮತ್ತಿತರರು ಹಾಜರಿದ್ದರು.

Recent Articles

spot_img

Related Stories

Share via
Copy link