ಜಗಳೂರು
ಆಸ್ಪತ್ರೆಗೆ ಬರುವ ರೋಗಗಿಳಿಗೆ ಬಡವ ಸಿರಿವಂತ ಎನ್ನುವ ತಾರತಮ್ಯ ಮಾಡದೇ ಉತ್ತಮ ಚಿಕಿತ್ಸೆ ನೀಡುವ ಮೂಲಕ ಸೇವಾ ಮನೋಭಾವದ ಗುಣವನ್ನು ಹೊಂದಬೇಕೆಂದು ದಾವಣಗೆರೆ ವಿರಕ್ತ ಮಠದ ಬಸವಪ್ರಭು ಸ್ವಾಮಿಗಳು ಹೇಳಿದರು.
ಪಟ್ಟಣದ ವಾಲ್ಮೀಕಿ ಬಡಾವಣೆಯಲ್ಲಿ ನೂತನವಾಗಿ ಆರಂಭಗೊಂಡ ನಿರ್ಮಲ ನರ್ಸಿಂಗ್ ಹೋಮ್ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಆರ್ಥಿಕವಾಗಿ ಹಿಂದುಳಿದ ತಾಲೂಕಿನ ಜನರು ವಿವಿಧ ಖಾಯಿಲೆಗಳನ್ನು ಗುಣಪಡಿಸಿಕೊಳ್ಳಲು ಜಗಳೂರಿನಲ್ಲಿ ಎಲ್ಲಾ ಸೌಲಭ್ಯವುಳ್ಳ ಆಸ್ಪತ್ರೆಗಳಿಲ್ಲದೇ ದಾವಣಗೆರೆ, ಮಣಿಪಾಲ್, ಮಂಗಳೂರಿನ ಯೆನಪೋಯ ಆಸ್ಪತ್ರೆಗಳಿಗೆ ಸಾಲ ಸೂಲ ಮಾಡಿಕೊಂಡು ಹೋಗುವ ಬದಲಾಗಿ ಸ್ಥಳೀಯವಾಗಿ ಸುಮಾರು 8 ನುರಿತ ವೈದ್ಯರಿಂದ ಹಲವಾರು ಖಾಯಿಲೆಗಳಿಗೆ ಸೂಕ್ತ ಚಿಕಿತ್ಸೆ ಮತ್ತು ಶಸ್ತ್ರ ಚಿಕಿತ್ಸೆ ಸಿಗಲು ಸಹಕಾರಿಯಾಗಿದ್ದು ಆಸ್ಪತ್ರೆಗೆ ಬರುವ ರೋಗಿಗಳನ್ನು ಕಡಿಮೆ ಧರದಲ್ಲಿ ಉತ್ತಮವಾದ ಚಿಕಿತ್ಸೆಯನ್ನು ನೀಡುವ ಮೂಲಕ ಸೇವೆ ಸಲ್ಲಿಸಿ ಜನರ ಆರೋಗ್ಯವನ್ನು ಕಾಪಾಡಲು ಮುಂದಾಗಬೇಕೆಂದು ಸಲಹೆ ನೀಡಿದರು.
ಸಿಪಿಐ ಮುಖಂಡ ಕಾಂ|| ಎಚ್.ಕೆ.ರಾಮಚಂದ್ರಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಖಾಯಿಲೆಯಿಂದ ಬಳಲುವ ರೋಗಿಗಳ ಜೀವ ಉಳಿಸುವ ವೈದ್ಯರು ದೇವರಿದ್ದಂತೆ. ಎಲ್ಲಾ ವರ್ಗದ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಿ ಗುಣಮುಖರನ್ನಾಗಿ ಮಾಡಿ ಇಡೀ ರಾಜ್ಯದ ಜನರ ಗಮನ ಸೆಳೆಯುವ ಶಕ್ತಿ ಜಗಳೂರಿನವರೇ ಆದ ಡಾ.ಪ್ರಸನ್ನಕುಮಾರ್ ಕೈಯಲ್ಲಿದ್ದು, ಈ ಭಾಗದ ಜನರ ಸಮಸ್ಯೆಗಳನ್ನು ಅರಿತವರಾಗಿದ್ದು ಬಹು ದಿನಗಳಿಂದ ಶ್ರಮವಹಿಸಿ ತನ್ನ ತಾಯಿಯ ಹೆಸರಿನಲ್ಲಿ ಸುಸಜ್ಜಿತವಾದ ಎಲ್ಲಾ ಸೌಲಭ್ಯಗಳನ್ನೊಳಗೊಂಡ ಆಸ್ಪತ್ರೆಯನ್ನು ಆರಂಭಿಸಿ ಸೇವಾ ಮನೋಭಾವದಿಂದ ರೋಗಿಗಳಿಂದ ಹೆಚ್ಚು ಹಣವನ್ನು ನಿರೀಕ್ಷಿಸದೇ ಉತ್ತಮವಾದ ಚಿಕಿತ್ಸೆಯನ್ನು ನೀಡಿ ಹುಟ್ಟೂರಿನ ಜನರ ಹಿತ ಕಾಪಾಡ ಬೇಕೆಂದರು.
ಈ ಸಂದರ್ಭದಲ್ಲಿ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಮಹಾಸ್ವಾಮೀಜಿ, ಆಸ್ಪತ್ರೆಯ ಮ್ಯಾನೇಜಿಂಗ್ ಡೈರೆಕ್ಟರ್ ನಿರ್ಮಲ ನಿಂಗಪ್ಪ, ಡಾ.ಪ್ರಸನ್ನಕುಮಾರ್, ಡಾ.ಮಂಜುನಾಥಗೌಡ, ತಾಲೂಕು ವೈದ್ಯಾಧಿಕಾರಿ ಡಾ.ನಾಗರಾಜ್, ಕೆಎಸ್‍ಎಪ್‍ಸಿ ಬ್ಯಾಂಕಿನ ಅಧಿಕಾರಿ ರಂಗಸ್ವಾಮಿ, ಪ್ರೇರಣಾ ಸಮಾಜ ಸೇವಾ ಸಂಸ್ಥೆಯ ಫಾದರ್ ವಿಲಿಯಂ ಮಿರಾಂದ, ಹಿರಿಯ ನಾಗರೀಕರ ಸಂಘದ ಅಧ್ಯಕ್ಷ ವಿಠಲಶ್ರೇಷ್ಠಿ, ಜೆಡಿಎಸ್ ಮುಖಂಡ ದೇವೆಂದ್ರಪ್ಪ, ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಅರವಿಂದನ್ ಸೇರಿದಂತೆ ಮತ್ತಿತರರು ಹಾಜರಿದ್ದರು.
