ಸ್ತ್ರೀಯರಿಗೆ ದೇಗುಲ ಪ್ರವೇಶ ನಿರ್ಬಂಧ ದುರಂತ

 ದಾವಣಗೆರೆ :

      ಮಹಿಳೆಯರಿಗೆ ಇಂದಿಗೂ ಕೆಲ ದೇವಸ್ಥಾನಗಳ ಪ್ರವೇಶ ನಿಬರ್ಂಧಿಸಿರುವುದು ನಿಜಕ್ಕೂ ದುರಂತ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಬಸವರಾಜ ಸಾದರ ವಿಷಾಧ ವ್ಯಕ್ತಪಡಿಸಿದರು.

      ನಗರದ ಶಾಮನೂರು ಶಿವಶಂಕಕರಪ್ಪ ಪಾರ್ವತಮ್ಮ ಕಲ್ಯಾಣ ಮಂಟಪ್ಪದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕದಳಿ ಮಹಿಳಾ ವೇದಿಕೆಯ ದಶಮಾನೋತ್ಸವ ಸಮಾರಂಭದಲ್ಲಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ನಮ್ಮ ಭಾರತ ದೇಶದಲ್ಲಿ ಈಗ ಜನಗಣತಿ ನಡೆಸುತ್ತಿರುವಂತೆ, ಮೊದಲು ದೇವರ ಗಣತಿ ನಡೆದಿತ್ತು. ಆ ಗಣತಿಯ ಪ್ರಕಾರ 33 ಕೋಟಿ ದೇವರುಗಳಿದ್ದು, ಅದರಲ್ಲಿ ಅರ್ಧ ಸಂಖ್ಯೆಯಷ್ಟು ಸ್ತ್ರೀ ದೇವತೆಗಳಿದ್ದಾರೆ. ಇಷ್ಟೊಂದು ಸಂಖ್ಯೆಯಲ್ಲಿರುವ ಜನ್ಮದಾತೆ ಸ್ತ್ರೀಯರಿಗೆ ಕೆಲ ದೇವಾಲಯಗಳಿಗೆ ಪ್ರವೇಶ ನಿರಾಕರಿಸಿರುವುದು ನಿಜಕ್ಕೂ ಶೋಚನೀಯವಾಗಿದೆ ಎಂದರು.

      21 ನೇ ಶತಮಾನದಲ್ಲಿರುವ ನಾವು ಇಂದಿಗೂ ಮಹಿಳೆಯರ ಅಸ್ತಿತ್ವಕ್ಕಾಗಿ ಹೋರಾಟ ನಡೆಸಬೇಕಾಗಿದೆ ಪರಿಸ್ಥಿತಿ ಇರುವುದು ವಿಪರ್ಯಾಸವಾಗಿದೆ. ಮಹಿಳೆಯರಿಗೆ ಸಿಕ್ಕಿರುವ ಸ್ವಾತಂತ್ರ ಹಾಗೂ ಅಸ್ಮಿತೆಯನ್ನು ಸ್ವೀಕರಿಸುವ ಮನಸ್ಸು ಇಲ್ಲವಾಗಿರುವುದು ನೋವಿನ ಸಂಗತಿಯಾಗಿದೆ ಎಂದರು.

      ಕಲ್ಲಿನ ದೇವರಿಗೆ ಹಸಿದು ಬಂದವರಿಗೆ ಒಂದು ತುತ್ತು ಅನ್ನ ನೀಡುವ ಸಾಮರ್ಥ್ಯವಿಲ್ಲ. ಆದರೆ, ನನ್ನಲ್ಲಿರುವ ದೇವರು ನಿಜವಾದುದು. ಅದನ್ನು ಮೊದಲು ಗುರುತಿಸಿಕೊಳ್ಳಬೇಕೆಂದು ವಚನಕಾರರಾದ ಅಲ್ಲಮಪ್ರಭುಗಳು ಅಂದೇ ತಮ್ಮ ವಚನಗಳ ಮೂಲಕ ತಿಳಿಹೇಳಿದ್ದರು. ಇದು ಸತ್ಯವು ಹೌದು. ಇದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕಿದೆ ಎಂದು ಕಿವಿಮಾತು ಹೇಳಿದರು.

      ಸಾವಿರಾರು ಮೈಲಿಗಟ್ಟಲೇ ತೆರಳಿ ದೇವರ ದರ್ಶನ ಪಡೆಯುವುದು ಒಂದು ಧರ್ಮದ ಉದ್ಯಮ ಬೆಳೆಸಿದಂತೆ. ಇಂದಿನ ದಿನಗಳಲ್ಲಿ ಧರ್ಮೋದ್ಯಮವೇ ಎಲ್ಲೆಡೆ ನಡೆಯುತ್ತಿದೆ ಎಂದ ಅವರು, ಜಗತ್ತಿನ ಎಲ್ಲಾ ಜ್ಞಾನ, ಶಿಸ್ತುಗಳು ವಚನ ಸಾಹಿತ್ಯದೊಳಗೆ ಅಡಗಿವೆ. ಜಗತ್ತಿನ ತತ್ವಜ್ಞಾನಿ ಎಂದರೆ ಅದು ಅಲ್ಲಮಪ್ರಭುಗಳು. ವಚನ ಸಾಹಿತ್ಯದಲ್ಲಿ ಅನೇಕ ಸಾಹಿತ್ಯ ರತ್ನಗಳಿದ್ದರು ಅವರ ವಚನಗಳ ಮೂಲಕ ಕ್ರಾಂತಿಯನ್ನುಂಟು ಮಾಡಿದ್ದಾರೆ ಎಂದು ವಿಶ್ಲೇಷಿಸಿದರು.

      ವಚನ ಸಾಹಿತ್ಯ ತಾಯಂದಿರನ್ನು ಒಳಗೊಂಡಿರುವುದು. ಅದು ಪ್ರಾರಂಭವಾದದ್ದೆ ಮಹಿಳೆಯರಿಂದ. ಅಂದು ಬಸಣ್ಣನವರು ಜನಿವಾರ ಧಾರಣೆಯ ವಿರೋಧಿಯಾಗಿದ್ದರು. ಹೆಣ್ಣು ಮಕ್ಕಳಿಗೂ ಸಹ ಜನಿವಾರ ಯಾಕೆ ಕಟ್ಟಬಾರದು ಎಂದಿದ್ದರು. ಆ ಪ್ರತಿಭಟನೆಯೇ ಶರಣ ಕ್ರಾಂತಿಯ ಆರಂಭಕ್ಕೆ ಮುನ್ನಡಿ ಬರೆಯಿತು ಎಂದರು.

      ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು. ವೇದಿಕೆಯಲ್ಲಿ ಶರಣ ಸಾಹಿತ್ಯ ಪರಿಷತ್‍ನ ಜಿಲ್ಲಾಧ್ಯಕ್ಷ ಚಿಕ್ಕೋಳ್ ಈಶ್ವರಪ್ಪ, ವೇದಿಕೆಯ ಗೌರವಾಧ್ಯಕ್ಷೆ ಸುಲೋಚನಮ್ಮ ರಾಜಶೇಖರ್, ಗಿರಿಜಮ್ಮ ಸೋಮಶೇಖರಗೌಡ, ಪ್ರಮಿಳಾ ನಟರಾಜ್, ಯಶಾ ದಿನೇಶ್ ಮತ್ತಿತರರು ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap