ಹಾವೇರಿ
ಸ್ತ್ರೀ-ಪುರುಷರು ಸಮಾನರು ಎಂಬ ಮನೋಭಾವ ಬೆಳೆಸಿಕೊಳ್ಳಬೇಕು. ಎಲ್ಲಿ ಹೆಣ್ಣನ್ನು ಪೂಜಿಸುತ್ತಾರೋ ಅಲ್ಲಿ ದೇವತೆಗಳು ವಾಸವಾಗಿರುತ್ತಾರೆ. ಯಾವ ಮನೆಯಲ್ಲಿ ಹೆಣ್ಣು ಸುಖದಿಂದ ಇರುತ್ತಾಳೋ ಅಲಿ ಸುಖ, ಸಮೃದ್ಧಿ ತುಂಬಿರುತ್ತದೆ, ಹೆಣ್ಣನ್ನು ಹಿಂಸಿಸುವ ಮನೆಯಲ್ಲಿ ಅಶಾಂತಿ ತಾಂಡವಾಡುತ್ತದೆ, ಅಭಿವೃದ್ಧಿ ಕುಂಠಿತವಾಗುತ್ತದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಸ್.ಕೆ.ಕರಿಯಣ್ಣನವರ ಅವರ ಹೇಳಿದರು.
ಇಂದು ನಗರದ ಡಿ.ದೇವರಾಜ ಅರಸು ಭವನದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಜರುಗಿದ ಹೆಣ್ಣು ಮಗುವನ್ನು ರಕ್ಷಿಸಿ, ಹೆಣ್ಣು ಮಗುವನ್ನು ಓದಿಸಿ (ಬೇಟಿ ಬಚಾವೋ ಬೇಟಿ ಪಡಾವೋ) ಸಪ್ತಾಹದ ಸಮಾರೋಪ ಹಾಗೂ ಜಿಲ್ಲೆಯ ಮಹಿಳಾ ಸಾಧಕಿಯರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪುರಾಣ ಮತ್ತು ಹರಿಕಥೆಗಳಲ್ಲಿ ಸ್ತ್ರೀಯರಿಗೆ ಪೂಜ್ಯ ಸ್ಥಾನ ನೀಡಲಾಗಿದೆ.
ಗಂಡು ಮಕ್ಕಳ ವ್ಯಾಮೋಹದಲ್ಲಿ ಹೆಣ್ಣು ಭ್ರೂಣ ಹತ್ಯೆ ಹೆಚ್ಚಾಗಿದ್ದು, ಲಿಂಗಾನುಪಾತದಲ್ಲಿ ವ್ಯತ್ಯಾಸ ಉಂಟಾಗಿ, ಸಮಾಜದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ದೌರ್ಜನ್ಯಗಳು ನಡೆಯುತ್ತಿವೆ. ಭಾರತ ಸಂವಿಧಾನ ಎಲ್ಲರಿಗೂ ಸಮಾನ ಹಕ್ಕು ನೀಡಿದೆ. ಇಂದು ಹೆಣ್ಣು ಮಕ್ಕಳು ಎಲ್ಲ ರಂಗಗಳಲ್ಲೂ ಮುಂಚೂಣಿಯಲ್ಲಿದ್ದಾರೆ. ಮಹಿಳಾ ಅಧಿಕಾರಿಗಳಿದ್ದಲ್ಲಿ ಶೇ.70 ರಷ್ಟು ಲಂಚಾವತಾರ ಇರುವುದಿಲ್ಲ, ಕಡತಗಳ ವಿಲೇವಾರಿ ಬೇಗನೆಯಾಗುತ್ತದೆ ಹಾಗೂ ಅವರು ಇತತರೊಂದಿಗೆ ಸೌಜನ್ಯದಿಂದ ವರ್ತಿಸುತ್ತಾರೆ. ಹೆಣ್ಣು-ಗಂಡೆಂಬ ಬೇದ-ಭಾವ ತೊಡೆದುಹಾಕಿ ವಿಶಾಲ ಮನೋಭಾವದಿಂದ ಹೆಣ್ಣುಮಕ್ಕಳನ್ನು ಓದಿಸಿ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರು ಮಾತನಾಡಿ, ಜೀವನದಲ್ಲಿ ಸಾಧನೆ ಮಾಡಿದಾಗ ಪ್ರಶಸ್ತಿ ಹಾಗೂ ಬಹುಮಾನಗಳು ದೊರೆಯಲು ಸಾಧ್ಯ. ಹೆಣ್ಣು ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಸಂರಕ್ಷಣೆ, ಶಿಕ್ಷಣ ನೀಡಿ ಸಾಧನೆ ಮಾಡಲು ತಂದೆ-ತಾಯಿ ಹಾಗೂ ಶಿಕ್ಷಕರು ಅಪಾರ ಕೊಡುಗೆ ನೀಡಿದ್ದಾರೆ. ಪೂರಕ ವಾತಾವರಣವಿದ್ದಲ್ಲಿ ಕುಗ್ರಾಮದ ಮಹಿಳೆಯೂ ಸಹ ಸಾಧನೆ ಮಾಡಲು ಸಾಧ್ಯ ಎಂದರು.
ಭೂಮಿ ಹಾಗೂ ನೀರನ್ನು ಮಹಿಳೆ ಎಂದು ಭಾವಿಸಲಾಗುತ್ತದೆ. ಆದರೆ ಹೆಣ್ಣು ಮಗು ಜನಿಸಿದಾಗ ಸಾಮಾನ್ಯವಾಗಿ ಸಂಭ್ರಮಪಡುವು ಕಡಿಮೆ. ರಾಜ್ಯದಲ್ಲಿ 972 ಲಿಂಗಾನುಪಾತವಿದ್ದರೆ ಜಿಲ್ಲೆಯಲ್ಲಿ 2011ರ ಜನಗತಿ ಅನುಸಾರ ಲಿಂಗಾನುಪಾತ 941 ಇದ್ದು ಈಗ 957 ಆಗಿರುತ್ತದೆ. ಶೋಷಣೆ, ಉದಾಸೀನತೆ ಒಂದು ಸಮಸ್ಯೆಯಾಗಿದೆ ಎಂದು ಸಿಂಹಾವಲೋಕನದಿಂದ ತಿಳಿಯುತ್ತದೆ. ಹೆಣ್ಣು ಮಕ್ಕಳಿಗೆ ಸಮಾನ, ಸುಗಮ ಅವಕಾಶ ನೀಡಿದಾಗ ಸಾಧನೆ ಮಾಡುತ್ತಾರೆ. ಇದಕ್ಕೆ ಇಂದು ಸನ್ಮಾನ ಸ್ವೀಕರಿಸಿದವರೇ ಸಾಕ್ಷಿ. ಪ್ರಮುಖವಾಗಿ ಗರ್ಭಿಣಿಯರು ಪೌಷ್ಠಿಕಾಂಶ ಆಹಾರವನ್ನು ಸೇವಿಸಬೇಕು. ಕಾರಣ ಮಾತೃಪೂರ್ಣ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು. ಪ್ರತಿ ಮಗುವನ್ನು ಶಾಲೆಗೆ ಕಳುಹಿಸಿ ಹಾಗೂ ತಂದೆ-ತಾಯಿ ಶಿಕ್ಷಕರು ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಸ್ಪಂದಿಸಬೇಕು ಎಂದು ಹೇಳಿದರು.
21ನೆಯ ಶತಮಾನದಲ್ಲಿ ಜಾಗತಿಕರಣ ವ್ಯವಸ್ಥೆಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆಯನ್ನು ಎದುರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ಹೆಚ್ಚಿನ ಶಿಕ್ಷಣ ಹಾಗೂ ಕೌಶಲ್ಯ ನೀಡಬೆಕು. ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರಿಗೆ ಮೀಸಲಾತಿ ಕಲ್ಪಿಸಲಾಗಿದೆ ಹಾಗೂ ವಿಫುಲವಾದ ಉದ್ಯೋಗಾವಕಾಶಗಳಿವೆ. ಈ ಕಾರ್ಯಕ್ರಮ ಪ್ರತಿ ಮನೆ ಮನೆಗೂ ಹಾಗೂ ಗ್ರಾಮಕ್ಕೆ ಮುಟ್ಟಲಿ, ಪ್ರತಿ ಹೆಣ್ಣು ಮಗುವಿನ ಜನನ ಸಂಭ್ರಮದ ವಾತಾವರಣ ನಿರ್ಮಾಣವಾಗಲಿ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಕೆ.ಲೀಲಾವತಿ ಅವರು ಮಾತನಾಡಿ, ಸ್ತ್ರೀ ಮತ್ತು ಪುರುಷರು ಸಮಾಜದಲ್ಲಿ ತಮ್ಮದೇ ಆದ ಸ್ಥಾನಮಾನಹೊಂದಿದ್ದಾರೆ. ಇಲ್ಲಿ ಯಾರೂ ಹೆಚ್ಚು ಯಾರೂ ಕಡಿಮೆಯೂ ಅಲ್ಲ. ಆದರೆ ಲಿಂಗಾನುಪಾತದಲ್ಲಿ ವ್ಯತ್ಯಾಸವಾದಲ್ಲಿ ಸಮಾಜದಲ್ಲಿ ಕೆಲಸವು ಸಮಸ್ಯೆಗಳು ಉದ್ಭವಿಸುತ್ತವೆ. ಮಹಿಳೆಯರೂ ಸಂಸಾರ ನಿರ್ವಹಣೆ ಸೇರಿದಂತೆ ವ್ಯವಸಾಯದಲ್ಲೂ ಮುಂಚೂಣಿಯಲ್ಲಿದ್ದಾರೆ ಮತ್ತು ಸಂಸಾರದಲ್ಲಿ ಎದುರಾಗುವ ಕಷ್ಟಗಳನ್ನು ಧೈರ್ಯದಿಂದ ಎದುರಿಸುತ್ತಾರೆ.
ಆದರೆ ಅವರು ಉನ್ನತ ಶಿಕ್ಷಣದಲ್ಲಿ ಮಾತ್ರ ಸ್ವಲ್ಪ ಹಿಂದಿದ್ದಾರೆ. ಸಮಾಜದಲ್ಲಿ ಗೌರವದಿಂದ ಜೀವನ ನಡೆಸಲು ಹಾಗೂ ಮೋಸಹೋಗಬಾರದೆಂಬ ತಿಳುವಳಿಕೆ ಮೂಡಲು ಎಲ್ಲರೂ ಓದಬೇಕು. ಆರ್ಥಿಕವಾಗಿ ಸದೃಢರಾಗಲು ಹಾಗೂ ಸ್ವತಂತ್ರರಾಗಿ ಬದುಕಲು ಹೆಣ್ಣಾಗಲಿ ಗಂಡಾಗಲಿ ಜ್ಞಾನವಿರಬೇಕು ಎಂದು ಹೇಳಿದರು.
ಆರ್ಥಿಕವಾಗಿ ಸದೃಢರಾಗಲು ಹಾಗೂ ಒಳ್ಳೆಯ ಸ್ಥಾನಮಾನ ಹೊಂದಲು ಶಿಕ್ಷಣ ಅತ್ಯವಶ್ಯ. ಶಿಕ್ಷಣ ಜೊತೆಗೆ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು. ಬೇರೆ ರಾಜ್ಯಗಳಲ್ಲಿ ಲಿಂಗಾನುಪಾತದಲ್ಲಿ ವ್ಯತ್ಯಾವಾಗಿ ಸ್ವಲ್ಪ ಸಮಸ್ಯೆಗಳಿವೆ. ಆದರೆ ನಮ್ಮ ರಾಜ್ಯದಲ್ಲಿ ಮಹಿಳೆಯರನ್ನು ಗೌರವದಿಂದ ಕಾಣುತ್ತಾರೆ ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪಿ.ವೈ.ಶೆಟ್ಟೆಪ್ಪನವರ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಂದಾನೆಪ್ಪ ವಡಗೇರಿ ಅವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ಜಿಲ್ಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಸನ್ಮಾನಿಸಲಾಯಿತು ಹಾಗೂ ಬೀದಿನಾಟಕಕ್ಕೆ ಚಾಲನೆ ನೀಡಲಾಯಿತು
ಕಾರ್ಯಕ್ರಮದಲ್ಲಿ ಜಿ.ಪಂ.ಉಪಾಧ್ಯಕ್ಷೆ ಶ್ರೀಮತಿ ದೀಪಾ ಅತ್ತಿಗೇರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಎಸ್.ರಾಘವೇಂದ್ರಸ್ವಾಮಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಎಚ್.ಎಸ್.ಮಜೀದ್, ಕಾಣೆಯಾದ ಮಕ್ಕಳ ಬ್ಯೂರೋದ ಮುತ್ತುರಾಜ ಮಾದರ ಇತರರು ಉಪಸ್ಥಿತರಿದ್ದರು.
ಸಿಡಿಪಿಒ ಉಮಾ ಕೆ. ಸ್ವಾಗತಿಸಿದರು. ಶ್ರೀಮತಿ ಮಂಗಳಾ ಅಳಗುಂಡಿ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಲ್ಲಿಕಾರ್ಜುನ ಮಠದ ವಂದಿಸಿದರು.
ಸನ್ಮಾನಿತರ ವಿವರ: ಕ್ರೀಡೆಯಲ್ಲಿ ಸಾಧನೆಮಾಡಿದ ಸವಣೂರ ತಾಲೂಕು ಯಲವಿಗಿ ಗ್ರಾಮದ ಸುಮಂಗಲಾ ಅತ್ತಿಗೇರಿ, ರಾಣೇಬೆನ್ನೂರ ನಗರದ ಪೂಜಾ ಶಿಡೇನೂರ, ಬಿಸ್ಮಿಲ್ಲಾ ಮುಲ್ಲಾ, ಜಾನಪದ ಕ್ಷೇತ್ರದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕತೆ ಕ್ಯಾಲಕೊಂಡ ಗ್ರಾಮದ ಶ್ರೀಮತಿ ಗೌರಮ್ಮ ತಿರಕಪ್ಪ ಶಿಗ್ಗಾಂವಿ, ರಂಗಭೂಮಿ ಕಲಾವಿದೆ ಕೋಡಿಯಲ ಗ್ರಾಮದ ಶ್ರೀಮತಿ ಪಿ.ಪಾರ್ವತೆಮ್ಮ, ರಂಗಗೀತೆಯಲ್ಲಿ ಬ್ಯಾಡಗಿ ಪಟ್ಟಣದ ಶ್ರೀಮತಿ ಚಂದ್ರಕಲಾ ಗುರಮ್ಮನವರ, ಪಿ.ಯು.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಪಡೆದ ಹಿರೇಕೆರೂರಿನ ತಹಶೀನಬಾನು ಸೈಕಲ್‍ಗಾರ, ಹಾವೇರಿಯ ಸುಧಾ ಮಲ್ಲಾಡದ, ಕುಮಾರಪಟ್ಣಂನ ಸೇಜಾಲ್ ಜೈನ್, ರಾಣೇಬೆನ್ನೂರಿನ ನೇಹಾ ಎನ್.ಎಚ್. ಹಾಗೂ ಮಾಧ್ಯಮವಾರು ಅತಿ ಹೆಚ್ಚು ಅಂಕಗಳಿಸಿದ ಬ್ಯಾಡಗಿಯ ಪಲ್ಲವಿ ಅಂಗಡಿ, ಸವಣೂರಿನ ಸುಮಾ ರಾಶಿನಕರ ಹಾಗೂ ಶಿಗ್ಗಾಂವಿಯ ಜಾಶ್ಮೀನ್ ಬಿ.ಡಿ,, 24ನೇ ವಯಸ್ಸಿನಲ್ಲಿ ನ್ಯಾಯಾಧೀಶರಾದ ಪೂಜಾರ ಬೆಳಕೇರಿ, ಚಳಗೇರಿ ಗ್ರಾ.ಪಂ.ಅಧ್ಯಕ್ಷರನ್ನು ಸನ್ಮಾನಿಸಲಾಯಿತು. ಕೆಲ ಸಾಧಕಿಯರು ಅನಿವಾರ್ಯಕಾರಣಗಳಿಂದ ಈ ಕಾರ್ಯಕ್ರಮಕ್ಕೆ ಆಗಮಿಸದ ಹಿನ್ನೆಲೆಯಲ್ಲಿ ಅವರ ಪೋಷಕರನ್ನು ಸನ್ಮಾನಿಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ