ತುಮಕೂರು
ವಿಶೇಷ ವರದಿ ರಾಕೇಶ್.ವಿ.
ಸ್ಮಾರ್ಟ್ ಸಿಟಿ ಕಾಮಗಾರಿಗಳಲ್ಲಿ ಒಂದಾದ ತುಮಕೂರು ವಿವಿಯ ಹೆಲಿಪ್ಯಾಡ್ ಆವರಣದ ಅಭಿವೃದ್ಧಿಗೆ ಬರೊಬ್ಬರಿ 61 ಲಕ್ಷ ರೂಗಳನ್ನು ಖರ್ಚು ಮಾಡಲಾಗಿದ್ದು, ಇದೀಗ ಅಷ್ಟು ಹಣ ವ್ಯರ್ಥವಾಗಿ ನೀರುಪಾಲು ಆದಂತಾಗಿದೆ.
ಕಳೆದ ವರ್ಷ ಸೆಪ್ಟಂಬರ್ ತಿಂಗಳಂತ್ಯದಲ್ಲಿ ಪೂರ್ಣಗೊಂಡ ಹೆಲಿಪ್ಯಾಡ್ ಆವರಣದ ಕಾಮಗಾರಿಯ ನಿರ್ವಹಣೆಯು ಒಂದು ವರ್ಷದತನಕ ಗುತ್ತಿಗೆದಾರರದ್ದೇ ಜವಾಬ್ದಾರಿಯಾಗಿದ್ದು, ಇನ್ನೂ ಒಂದು ವರ್ಷ ಪೂರ್ಣಗೊಳ್ಳುವ ಮುಂಚೆಯೇ ಈ ಕಾಮಗಾರಿ ನಿಷ್ಪ್ರಯೋಜವಾಗಿರುವುದೇ ಸ್ಮಾರ್ಟ್ ಸಿಟಿ ಎಂಬ ಹೆಸರಿಗೆ ಕಳಂಕವಾಗಿದೆ.
ಕಾಮಗಾರಿಯ ಅವಧಿ
ತುಮಕೂರು ವಿವಿಯ ಹೆಲಿಪ್ಯಾಡ್ ಪ್ರದೇಶದಲ್ಲಿ ನಿತ್ಯ ಅನೇಕ ಜನ ವಾಕಿಂಗ್ ಮಾಡಲು ಬರುತ್ತಾರೆ. ಅವರಿಗೆ ಅನುಕೂಲವಾಗಲೆಂಬ ಉದ್ದೇಶದಿಂದ ಉದ್ಯಾನವನದಂತೆ ಅಭಿವೃದ್ಧಿ ಪಡಿಸಲು ಸ್ಮಾರ್ಟ್ ಸಿಟಿ ಕಂಪನಿಯು ಮುಂದಾಯಿತು. 2018ರ ಫೆಬ್ರುವರಿ ತಿಂಗಳಲ್ಲಿ ಆರಂಭವಾದ ಕಾಮಗಾರಿ ಸೆಪ್ಟಂಬರ್ ತಿಂಗಳಂತ್ಯಕ್ಕೆ ಪೂರ್ಣಗೊಂಡು ಸಣ್ಣ ಪುಟ್ಟ ಕೆಲಸಗಳನ್ನು ಅಕ್ಟೋಬರ್ ವೇಳೆ ಪೂರ್ಣ ಮಾಡಲಾಗಿತ್ತು.
ಅಭಿವೃದ್ಧಿ ಕೆಲಸಗಳು
ಹೆಲಿಪ್ಯಾಡ್ ಆವರಣದಲ್ಲಿ ಜನರು ಓಡಾಡಲೆಂದು ಫುಟ್‍ಪಾತ್ ವ್ಯವಸ್ಥೆ (ವಾಕಿಂಗ್ ಟ್ರ್ಯಾಕ್) ನಿರ್ಮಾಣ ಮಾಡಲಾಯಿತು. ಅದರ ಸುತ್ತಲೂ ಬೆಳಕಿನ ಸೌಲಭ್ಯಕ್ಕಾಗಿ ವಿದ್ಯುತ್ ದೀಪಗಳನ್ನು ಅಳವಡಿಕೆ ಮಾಡಲಾಯಿತು. ಎರಡು ಕಡೆಗಳಲ್ಲಿ ಆಸನದ ವ್ಯವಸ್ಥೆ ಮಾಡಲಾಯಿತು. ಕ್ರೀಡಾಂಗಣದ ಕಡೆಯಲ್ಲಿರುವ ಮರಗಳಿಗೆ ಬಣ್ಣ ಬಣ್ಣದ ಬಲ್ಬ್‍ಗಳನ್ನು ಅಳವಡಿಸಲಾಗಿತ್ತು. ಅದೇ ರೀತಿ ಮಹಾತ್ಮಗಾಂಧಿ ಕ್ರೀಡಾಂಗಣ ರಸ್ತೆಯ ಭಾಗದಲ್ಲಿ ಕಮಾನಿನ ರೀತಿಯಲ್ಲಿ ಬಂಡೆಗಳನ್ನು ಅಳವಡಿಸಿ ಅಲ್ಲಿಯೂ ಬಣ್ಣದ ಲೈಟ್‍ಗಳನ್ನು ಅಳವಡಿಕೆ ಮಾಡಲಾಯಿತು. ಒಂದು ಕಡೆಯಲ್ಲಿ ಗೋಡೆಯ ಮೇಲೆ ಸ್ಮಾರ್ಟ್‍ಸಿಟಿಯ ಚಿತ್ರಣ, ಇನ್ನೊಂದು ಭಾಗದಲ್ಲಿ ಕರ್ನಾಟಕ ಕಲಾಕೃತಿಗಳ ಚಿತ್ರಣ ಮೂಡಿಸಿ ಅದಕ್ಕೂ ಲೈಟಿಂಗ್ ವ್ಯವಸ್ಥೆ ಮಾಡಲಾಗಿತ್ತು.
ಮಾಡಿದ ಅಭಿವೃದ್ಧಿ ಕೆಲಸ ನೀರು ಪಾಲು
ಲಕ್ಷಾಂತರ ರೂ ವೆಚ್ಚ ಮಾಡಿ ನಡೆಸಿದ ಕಾಮಗಾರಿ ಇದೀನ ನೀರುಪಾಲು ಆದಂತಾಗಿದೆ. ಹೆಲಿಪ್ಯಾಡ್ ಆವರಣದಲ್ಲಿ ಹಾಕಲಾದ ಬಲ್ಬ್‍ಗಳು ಬೆಳಗುತ್ತಿಲ್ಲ. ಮರಗಳ ಮೇಲೆ ಜೋಡಿಸಲಾದ ಲೈಟುಗಳು ಇಲ್ಲವೇ ಇಲ್ಲ. ಕುಳಿತುಕೊಳ್ಳಲು ಮಾಡಲಾದ ಆಸನದ ವ್ಯವಸ್ಥೆಗೆ ಅಳವಡಿಸಲಾಗಿದ್ದ ಮಾರ್ಬಲ್ ಸ್ಲಾಬ್‍ಗಳು ಕಿತ್ತುಹೋಗಿವೆ. ಸೆಲ್ಫಿವಾಲ್ ಅಂತೂ ಕಸದಿಂದ ತುಂಬಿಕೊಂಡಿದೆ. ಕಸದ ತೂಗು ಬುಟ್ಟಿಗಳು ತುಂಬಿ ಕೊಳಕು ನಾರುತ್ತಿದ್ದರೂ ಅದನ್ನು ಸ್ವಚ್ಛ ಮಾಡುವವರಿಲ್ಲ.
ಎಂಜಿನಿಯರ್‍ಗಳ ಅವಿವೇಕದಿಂದ ನಷ್ಟ..!
ಸ್ಮಾರ್ಟ್ ಸಿಟಿ ಕಂಪನಿಯಲ್ಲಿ ನೂರಾರು ಮಂದಿ ಕೆಲಸಗಾರರು ಇದ್ದಾರೆ. ಅದರಲ್ಲಿ ಎಂಜಿನಿಯರ್‍ಗಳು ಸಾಕಷ್ಟು ಮಂದಿ ಇದ್ದಾರೆ. ಸ್ಮಾರ್ಟ್ ಸಿಟಿಯ ಕಾಮಗಾರಿಗಳಲ್ಲಿ ಒಂದೊಂದು ಕಾಮಗಾರಿಯನ್ನೊ ಒಬ್ಬೊಬ್ಬ ಎಂಜಿನಿಯರ್ ನೋಡಿಕೊಳ್ಳುತ್ತಾರೆ. ಅದರ ಖರ್ಚು ವೆಚ್ಚ ಅಂದಾಜು ಮಾಡುವವರು ಅವರೇ ಆಗಿರುತ್ತಾರೆ. ಆದರೆ ಯಾವ ಮಾನದಂಡಗಳನ್ನು ಇಟ್ಟುಕೊಂಡು ಅಂದಾಜು ಮಾಡುತ್ತಾರೆ ಎಂಬುದು ತಿಳಿಯುತ್ತಿಲ್ಲ. ಇದರಿಂದ ಸ್ಮಾರ್ಟ್ ಸಿಟಿ ಬೊಕ್ಕಸಕ್ಕೆ ನಷ್ಟ ಉಂಟಾಗುತ್ತಿದೆ.
ಗುತ್ತಿಗೆದಾರರಿಗೆ ಲಾಭವಾಯಿತೇ….?
ವಿವಿ ಆವರಣದಲ್ಲಿ ಮಾಡಲಾದ ಕಾಮಗಾರಿಗೆ 61 ಲಕ್ಷ ರೂ ವೆಚ್ಚವಾಯಿತೆಂದರೆ ಅದು ನಂಬಲು ಅಸಾಧ್ಯವಾಗಿದೆ. ಈ ಕಾಮಗಾರಿ ಮಾಡಲು ಮೂವತ್ತರಿಂದ ನಲವತ್ತು ಲಕ್ಷದ ವರೆಗೆ ಖರ್ಚು ಆಗಿದೆ ಎಂದರೆ ನಂಬಬಹುದು. ಆದರೆ ಬರೊಬ್ಬರಿ 61 ಲಕ್ಷ ಎಂದರೆ ಇದರಲ್ಲಿ 20ಲಕ್ಷದ ವರೆಗೆ ಗುತ್ತಿಗೆದಾರರಿಗೆ ಲಾಭವಾಗಿದೆ ಎಂಬ ಸಂಶಯ ಮೂಡುತ್ತದೆ. ಒಂದು ವರ್ಷದ ವರೆಗೆ ಹೆಲಿಪ್ಯಾಡ್ ಅಭಿವೃದ್ಧಿಯ ನಿರ್ವಹಣೆ ಜವಾಬ್ದಾರಿ ಗುತ್ತಿಗೆದಾರರಿಗೆ ಸೇರಿದ್ದು, ಈ ವೇಳೆ ಯಾವುದೇ ವಸ್ತುಗಳು, ಅಥವಾ ಅಳವಡಿಸಲಾದ ಸಾಮಗ್ರಿಗಳು ಕಳಪೆಯಾಗಿದ್ದರೆ ಅದರ ಬದಲಾವಣೆಗೆಂದು ಇನ್ನೂ 6 ಲಕ್ಷ ರೂಗಳನ್ನು ಕಂಪನಿ ಬಳಿಯಲ್ಲಿಯೇ ಇಟ್ಟುಕೊಳ್ಳಲಾಗಿದೆ ಎಂಬ ಮಾಹಿತಿ ಇದ್ದರೂ 20 ಲಕ್ಷದಲ್ಲಿ 6 ಲಕ್ಷ ಬಿಟ್ಟರೂ ಇನ್ನೂ 14 ಲಕ್ಷ ಲಾಭವೇ ಇರುವುದನ್ನು ಕಾಣಬಹುದು.
ಕಡಿಮೆ ಕೆಲಸಕ್ಕೆ ಹೆಚ್ಚಿನ ಬಿಲ್..?
ಕಾಮಗಾರಿಯ ವೇಳೆ ಕೆಲಸ ಮುಗಿದ ನಂತರ ನೀಡಲಾಗುವ ಬಿಲ್‍ಗಳನ್ನು ಮನಸೋಇಚ್ಛೆ ನೀಡಿ ಹಣ ಪಡೆದಂತೆ ಕಾಣುತ್ತಿದ್ದು, ಈ ಕಾಮಗಾರಿಗೆ ಆಗುವ ಖರ್ಚಿಗಿಂತ ಹೆಚ್ಚಿನ ಬಿಲ್ ಪಡೆಯಲಾಗಿರುವ ಸಂಶಯಗಳು ಎದ್ದುಕಾಣುತ್ತಿವೆ. ಮಾಡಿದಂತಹ ಕಾಮಗಾರಿಗಳಿಗೂ ಅವರು ತೋರಿಸುವ 61ಲಕ್ಷದ ವೆಚ್ಚಕ್ಕೂ ಯಾವುದೇ ಸಂಬಂಧ ಇಲ್ಲವೆಂಬಂತೆ ಇದೆ.
ಒಟ್ಟಾರೆಯಾಗಿ ಸ್ಮಾರ್ಟ್‍ಸಿಟಿಯ ಕಾಮಗಾರಿಗಳು ನಡೆಯುತ್ತಿರುವುದು ವಿಳಂಭ. ಇದರ ಜೊತೆಯಲ್ಲಿ ಕಳಪೆಯಾಗುತ್ತಿರುವುದು ಸ್ಮಾರ್ಟ್ ಸಿಟಿಗೆ ಕಪ್ಪು ಚುಕ್ಕೆ ಇಟ್ಟಂತಾಗುತ್ತಿದೆ. ಈಗಲಾದರೂ ಯೋಜನೆ ರೂಪಿಸುವ ಅಭಿಯಂತರರು ಜಾಗರೂಕತೆಯಿಂದ ಅಲೋಚನೆ ಮಾಡಿ ಸರಿಯಾದ ರೀತಿಯಲ್ಲಿ ಬಳಕೆಯಾಗುವಂತೆ ಮಾಡಿ, ತುಮಕೂರು ನಗರವನ್ನು ಸ್ಮಾರ್ಟ್ ಸಿಟಿಯನ್ನಾಗಿಸುವ ಪ್ರಾಮಾಣಿಕ ಪ್ರಯತ್ನ ನಡೆಸಿ, ಕಾಮಗಾರಿಗಳು ಕಳಪೆಯಾಗದಂತೆ ನೋಡಿಕೊಳ್ಳಲಿ.
ರೂ.61 ಲಕ್ಷದಲ್ಲಿ 55 ಲಕ್ಷ ಹಣ ನೀಡಲಾಗಿದೆ. ಇನ್ನೂ 6 ಲಕ್ಷ ರೂಗಳು ಬಾಕಿ ಇದ್ದು, ಕಳಪೆ ಕಾಮಗಾರಿಯಿಂದ 15-20 ಲಕ್ಷ ರೂಗಳ ಲಾಭಗಳಿಸಿರುವ ಗುತ್ತಿಗೆದಾರ 6 ಲಕ್ಷ ರೂಗಳನ್ನು ಗಣನೆಗೆ ತೆಗೆದುಕೊಳ್ಳುತ್ತಾನೆಯೇ..? 6 ಲಕ್ಷ ಹೋದರೆ ಹೋಗಲಿ ಎಂದು ಸರಿಪಡಿಸುವ ಗೋಜಿಗೆ ಹೋಗಲಾರ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ