ಬ್ಯಾಡಗಿ:
ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವುದು ದೇಶ ಸೇವೆಗೆ ಸಮಾನವಾದ ಪ್ರಕ್ರಿಯೆ, ರಕ್ತದಾನದಿಂದ ಮಾತ್ರ ವೈದ್ಯಕೀಯ ಲೋಕ ಬಹಳಷ್ಟು ವರ್ಷಗಳ ಕಾಲ ಭದ್ರವಾಗಿರಲು ಸಾಧ್ಯವೆಂದು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಪುಟ್ಟರಾಜು ಅಭಿಪ್ರಾಯ ವ್ಯಕ್ತಪಡಿಸಿದರು.
ಬೆಂಗಳೂರಿನ ಕರುನಾಡ ಮಹಿಳಾ ಸಂರಕ್ಷಣಾ ಸಮಿತಿಯು ಪಟ್ಟಣದ ತಾಲೂಕಾ ಆಸ್ಪತ್ರೆಯ ಆವರಣದಲ್ಲಿ ಏರ್ಪಡಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮನುಷ್ಯನ ದೇಹದಲ್ಲಿ ಮಾತ್ರ ಉತ್ಪತ್ತಿ: ವೈದ್ಯಕೀಯ ಲೋಕದಲ್ಲಿ ತಂತ್ರಜ್ಞಾನ ಬಹಳಷ್ಟು ಕೆಲಸ ಮಾಡುತ್ತಿದೆ, ಆದರೆ ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ ಸಹ ಇಂದಿಗೂ ರಕ್ತವನ್ನು ಸಿದ್ಧಪಡಿಸುವಂತಹ ಪ್ರಕ್ರಿಯೆಯಲ್ಲಿ ಯಶಸ್ವಿಯಾಗಲು ಸಾಧ್ಯವಾಗಿಲ್ಲ, ಹೀಗಾಗಿ ರಕ್ತವು ಒಬ್ಬರಿಂದ ಇನ್ನೊಬ್ಬರ ದೇಹಕ್ಕೆ ವರ್ಗಾವಣೆಯಾಗಲೇಬೇಕಾಗಿದೆ ಎಂದರು.
ರಕ್ತದಾನಕ್ಕೆ ಯುವಕರು ಮುಂದಾಗಬೇಕು: ಮನುಷ್ಯನ ವಯಸ್ಸು ರಕ್ತದ ಶುದ್ಧತೆಯ ಮಾನದಂಡವಾಗಿದ್ದು ವಯೋವೃದ್ದರ ದೇಹದಿಂದ ರಕ್ತವನ್ನು ಪಡೆದರೂ ಸಹ ಹೆಚ್ಚು ಪ್ರಯೋಜನಕ್ಕೆ ಬರುವುದಿಲ್ಲ, ಅಷ್ಟಕ್ಕೂ ವಯೋವೃದ್ಧರ ದೇಹದಲ್ಲಿ ಅದಾಗಲೇ ರಕ್ತ ಸಂಬಂಧಿ ಕಾಯಿಲೆಗಳು ಸಾಮಾನ್ಯವಾಗಿ ತಗುಲಿರುತ್ತವೆ ಹೀಗಾಗಿ ಅವರಲ್ಲಿ ರಕ್ತದ ಉತ್ಪದನಾ ಸಾಮಥ್ರ್ಯವೂ ಕೂಡ ಕಡಿಮೆಯಾಗಿರುತ್ತದೆ ಇದರಿಂದ ರೋಗಿಯ ದೇಹಕ್ಕೆ ಹಾಕಲು ಅಷ್ಟೊಂದು ಸೂಕ್ತವಾಗಿರುವುದಿಲ್ಲ ಈ ಎಲ್ಲ ಕಾರಣಗಳಿಂದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನಕ್ಕೆ ಮುಂದಾಗುವಂತೆ ಕರೆ ನೀಡಿದರು.
ಜನರಲ್ಲಿ ಅರಿವು ಮೂಡಿಸಬೇಕಿದೆ:ಬಹುತೇಕ ಜನರಲ್ಲಿ ರಕ್ತ ಕುರಿತಾಗಿ ವಿವರವಾದ ಮಾಹಿತಿ ಇಲ್ಲ, ಹೀಗಾಗಿ ಹಣ ಕೊಟ್ಟರೆ ಸಿಗುವಂತಹ ವಸ್ತು ಎಂಬ ಭಾವನೆ ಬಹುತೇಕ ಜನರ ಮನಸ್ಸಿನಲ್ಲಿದೆ, ಹಣ ಕೊಟ್ಟ ಪಡೆದ ರಕ್ತವು ಸಹ ಇನ್ನೊಬ್ಬರ ದೇಹದಿಂದ ಬಂದ ದೇಣಿಗೆ ಎಂಬ ಬಗ್ಗೆ ವಿವರವಾದ ಮಾಹಿತಿಗಳು ಸಾರ್ವಜನಿಕರಲ್ಲಿ ರವಾನೆಯಾಗಬೇಕಾಗಿದೆ ಎಂದರು.
ಸಾರ್ವಜನಿಕ ಸಹಭಾಗಿತ್ವ:ರಕ್ತದಾನ ಶಿಬಿರಗಳೆಂದರೆ ಪ್ರಚಾರ ಗಿಟ್ಟಿಸಿಕೊಳ್ಳುವಂತಹ ಕಾರ್ಯಕ್ರಮ ಎಂದು ಭಾವಿಸಿಕೊಳ್ಳಬೇಡಿ, ಮನುಷ್ಯನ ಆರೋಗ್ಯದ ಎಲ್ಲ ಸಮಸ್ಯೆಗಳಿಗೆ ವೈದ್ಯರಿಂದಲೇ ಪರಿಹಾರ ಸಿಗುತ್ತದೆ ಎನ್ನುವುದು ತಪ್ಪು. ಮೂತ್ರಪಿಂಡ, ರಕ್ತ, ಕಣ್ಣು ಹೃದಯ ಇನ್ನಿತರ ಭಾಗಗಳನ್ನು ಇನ್ನೊಬರ ದೇಹಕ್ಕೆ ವರ್ಗಾವಣೆ ಮಾಡಬಹುದಾಗಿದ್ದು ಅವುಗಳನ್ನು ದಾನರೂಪವಾಗಿ ನೀಡುವುದು ಪುಣ್ಯದ ಕೆಲಸ, ಈ ಕುರಿತು ಸಂಘ ಸಂಸ್ಥೆಗಳ ಸಹಕಾರ ವೈದ್ಯರಿಗೆ ಮತ್ತು ಆಸ್ಪತ್ರೆಗಳಿಗೆ ಅವಶ್ಯವಿದೆ, ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲು ಯಾರೇ ಮುಂದಾದರೂ ಸಹ ಅದಕ್ಕೆ ನಮ್ಮ ಸಮುದಾಯ ಆರೋಗ್ಯ ಕೇಂದ್ರದಿಂದ ಸಂಪೂರ್ಣ ಸಹಕಾರ ಲಭಿಸಲಿದೆ ಎಂದರು.
ಇದೇ ಸಂದರ್ಭದಲ್ಲಿ ಇಂಜಿನಿಯರ್ ದಿನಾಚರಣೆ ಅಂಗವಾಗಿ ದಿವಂಗತ ಸರ್ ಎಂ.ವಿಶ್ವೇಶ್ವರಯ್ಯ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಕರುನಾಡು ಮಹಿಳಾ ಸಂರಕ್ಷಣಾ ಸಮಿತಿಯ ಸಂಸ್ಥಾಪಕ ರಾಜ್ಯಾಧ್ಯಕ್ಷೆ ಪದ್ಮ ವರ್ತೂರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ವೇದಿಕೆಯಲ್ಲಿ ಮಾಜಿ ಸೈನಿಕ ಮಲ್ಲೇಶ ಚಿಕ್ಕಣ್ಣನವರ, ಜಿಲ್ಲಾಧ್ಯಕ್ಷ ಹೊನ್ನೇಶ್ವರ ತಗಡಿಮನಿ, ಜಯಪ್ಪ ಹುಣಶೀಮರದ, ಉಪನ್ಯಾಸಕಿ ಪ್ರೇಮ ಬಿನ್ನಾಳ, ವಿದ್ಯಾಶೆಟ್ಟಿ, ತಾರಾ ಗುತ್ತೆಮ್ಮ, ಫರೀದಾಬಾನು ನದೀಮುಲ್ಲಾ, ರೈತ ಮುಖಂಡ ನಾಯಕ್, ಪೀರಾಂಬಿ ಗುತ್ತೆಮ್ಮ ಹಾಗೂ ಇನ್ನಿತರರು ಉಪಸ್ಥಿತರಿದ್ದರು.