ಸ್ವಾತಂತ್ರ ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ :ಇಕ್ಬಾಲ್ ಅಹಮದ್

ತುಮಕೂರು:

       ಹಲವಾರು ಜನರ ತ್ಯಾಗ ಬಲಿದಾನದಿಂದ ಪಡೆದಿರುವ ಸ್ವಾತಂತ್ರವನ್ನು ಉಳಿಸಿಕೊಂಡು ಹೋಗುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಅಹಮದ್ ತಿಳಿಸಿದ್ದಾರೆ.

      ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ 76ನೇ ಸ್ವಾತಂತ್ರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,ಸ್ವಾತಂತ್ರದ ಹಿಂದಿನ ಹಲವಾರು ಹೋರಾಟಗಳಿಗೆ ಬೆಲೆ ಸಿಗಬೇಕಾದರೆ ಹಲವಾರು ಧರ್ಮ, ಜಾತಿ, ಭಾಷೆಗಳು ಸೇರಿ ನಿರ್ಮಾಣವಾಗಿರುವ ಭಾರತದಲ್ಲಿ ಅಹಿಂಸೆಗೆ ಹೆಚ್ಚು ಪ್ರಾಧ್ಯಾನತೆ ನೀಡಿ,ಜನರು ನೆಮ್ಮದಿ, ಶಾಂತಿಯಿಂದ ಬದುಕುವಂತಹ ವಾತಾವರಣ ನಿರ್ಮಿಸಬೇಕಿದೆ ಎಂದರು.

     ಕೆಲ ರಾಜಕೀಯ ಪಕ್ಷಗಳು ಅಧಿಕಾರಕ್ಕಾಗಿ ವಿವಿಧೆತೆಯಲ್ಲಿ ಏಕತೆಯನ್ನು ಹೊಂದಿರುವ ಭಾರತದಲ್ಲಿ ಜಾತಿ ಜಾತಿಗಳ ನಡುವೆ, ಧರ್ಮ, ಧರ್ಮಗಳ ನಡುವೆ ವೈಷಮ್ಯ ಬಿತ್ತಿ, ಒಬ್ಬರ ಮೇಲೆ, ಮತ್ತೊಬ್ಬರನ್ನು ಎತ್ತಿ ಕಟ್ಟುವ ಮೂಲಕ ರಾಜಕೀಯ ಅಧಿಕಾರದಲ್ಲಿ ಮುಂದುವರೆಯಲು ಪ್ರಯತ್ನಿಸುತ್ತಿವೆ.ಇದಕ್ಕೆ ಇತ್ತೀಚಗೆ ಮಣಿಪುರ ರಾಜ್ಯದಲ್ಲಾಗುತ್ತಿರುವ ಕೊಲೆ,ಸುಲಿಗೆ, ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ, ಬೆತ್ತಲೆ ಮೆರವಣಿಗೆಯಂತಹ ಪ್ರಕರಣಗಳೇ ಸಾಕ್ಷಿಯಾಗಿವೆ.

      ಹಾಗಾಗಿ ದ್ವೇಷರಹಿತ, ನೆಮ್ಮದಿಯ ಜೀವನಕ್ಕೆ ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬರಬೇಕಾಗಿದೆ.ಇದಕ್ಕಾಗಿ ನಾವೆಲ್ಲರೂ ಹಗಲಿರುಳು ದುಡಿದು ಪಕ್ಷವನ್ನು ಬಲಿಷ್ಠವಾಗಿ ಕಟ್ಟಬೇಕಾಗಿದೆ ಎಂದು ಇಕ್ಬಾಲ್ ಅಹಮದ್ ನುಡಿದರು.

    ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಆರ್.ರಾಮಕೃಷ್ಣ ಮಾತನಾಡಿ,ಕಾಂಗ್ರೆಸ್ ಪಕ್ಷದಲ್ಲಿ ಪಕ್ಷಕ್ಕಾಗಿ ದುಡಿದವರಿಗೆ ಒಂದಿಲೊಂದು ದಿನ ಅಧಿಕಾರ ಸಿಗುವುದರಲ್ಲಿ ಅನುಮಾನವಿಲ್ಲ.ಇತ್ತೀಚಗೆ ನಡೆದ ಕಾಂಗ್ರೆಸ್ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿಯೂ ಈ ವಿಚಾರ ಪ್ರಸ್ತಾಪವಾಗಿದ್ದು,ಕಾರ್ಯಕರ್ತರು ದೃತಿಗೇಡುವ ಅಗತ್ಯವಿಲ್ಲ.ಮುಂಬರುವ ಚುನಾವಣೆಗಳಲ್ಲಿ ಪಕ್ಷವನ್ನು ಬಲಪಡಿಸಿದರೆ,ಮತ್ತಷ್ಟು ಅವಕಾಶಗಳು ನಮ್ಮನ್ನು ಹುಡುಕಿಕೊಂಡು ಬರಲಿವೆ ಎಂದರು.

    ನಗರಸಭೆ ಮಾಜಿ ಅಧ್ಯಕ್ಷ ಅಸ್ಲಾಂ ಪಾಷ ಮಾತನಾಡಿ,ಭಾರತೀಯರು ಇಂದು ಸ್ವಾತಂತ್ರ ಪಡೆದಿದ್ದರೆ ಅದಕ್ಕೆ ಕಾರಣ ಕಾಂಗ್ರೆಸ್.1885ರಲ್ಲಿ ಬ್ರಿಟಿಷರ ಕಪಿಮುಷ್ಠಿಯಿಂದ ಭಾರತವನ್ನು ಕಾಪಾಡಬೇಕೆಂಬ ಉದ್ದೇಶದಿಂದ ರಚನೆಯಾದ ಕಾಂಗ್ರೆಸ್‍ನ ನಿರಂತರ ಹೋರಾಟ ಫಲವಾಗಿ ಇಂದು ನಾವು 76ನೇ ಸ್ವಾತಂತ್ರದಿನವನ್ನು ಆಚರಿಸುತಿದ್ದೇವೆ.ಇದನ್ನು ಸರಿಯಾಗಿ ತಿಳಿಯದ ಬಿಜೆಪಿ ಪಕ್ಷದವರು ಬಾಯಿಗೆ ಬಂದಂತೆ ಮಾತನಾಡುತಿದ್ದು,ಅವರ ಮಾತಿಗೆ ಜನಸಾಮಾನ್ಯರು ಕಿವಿಗೊಡ ಬಾರದೆಂದರು.

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ದ್ವಜಾರೋಹಣ ನೆರವೇರಿಸಿ ಮಾತನಾಡಿ, ಸ್ವಾತಂತ್ರದಿನ ಎಂಬುದು ಈ ದೇಶವನ್ನು ಪರಕೀಯರಿಂದ ಮುಕ್ತಿಗೊಳಿಸಲು ತಮ್ಮ ಪ್ರಾಣತ್ಯಾಗ ಮಾಡಿದ ಮಹನೀಯರನ್ನು ನೆನಪು ಮಾಡಿಕೊಳ್ಳುವ ದಿನ.ಭಾರತ ಎಲ್ಲಾ ಧರ್ಮಗಳನ್ನು ಅನುಸರಿಸುವ ಸಮುದಾಯಗಳನ್ನು ಹೊಂದಿರುವ ದೇಶ.ಎಲ್ಲರು ಅಣ್ಣ,ತಮ್ಮಂದಿರಂತೆ ಬಾಳಿ ಬದುಕುವಂತಹ ವಾತಾವರಣ ಸೃಷ್ಟಿಯಾಗಬೇಕು.

    ಇದಕ್ಕಾಗಿ ರಾಜ್ಯದ ರೀತಿಯಲ್ಲಿಯೇ ಕೇಂದ್ರದಲ್ಲಿಯೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವಂತಹ ರೀತಿಯಲ್ಲಿ ನಾವೆಲ್ಲರೂ ಪಣತೊಟ್ಟು ಕೆಲಸ ಮಾಡೋಣ ಎಂಬ ಸಂದೇಶ ನೀಡಿದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಆತೀಕ್ಅ  ಹಮದ್, ಬಿ.ಜಿ.ಲಿಂಗರಾಜು, ಷಣ್ಮುಖಪ್ಪ,ನಾಗಮಣಿ,ಸುಜಾತ, ಮೇಯರ್ ಪ್ರಭಾವತಿ,ಪಾಲಿಕೆ ಸದಸ್ಯರಾದ ದೀಪಶ್ರೀ ಶೆಟ್ಟಾಳಯ್ಯ,ನಯಾಜ್ ಅಹಮದ್,ತರುಣೇಶ್,ಹೆಚ್.ಸಿ.ಹನು ಮಂತಯ್ಯ, ಕೈದಾಳ ರಮೇಶ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap