ಹಾವೇರಿ:
ಸ್ವಾಮಿ ವಿವೇಕಾನಂದರ ಚಿಕ್ಯಾಗೋ ಉಪನ್ಯಾಸದ 125ನೇ ವರ್ಷಾಚರಣೆ ಅಂಗವಾಗಿ 11ನೇ ಸೆಪ್ಟೆಂಬರ್ 2018ಕ್ಕೆ 125 ವರ್ಷಗಳು ಪೂರ್ಣಗೊಂಡಿವೆ. ಈ ಸ್ಮರಣೆಗಾಗಿ 2018ರ ಸೆಪ್ಟೆಂಬರ್ 11 ರಿಂದ 2019ರ ಸೆಪ್ಟೆಂಬರ್ 11ರವರೆಗೆ ಒಂದು ವರ್ಷದವರೆಗೆ ಜಿಲ್ಲಾಡಳಿತದಿಂದ ಜಿಲ್ಲೆಯಾದ್ಯಂತ ವಿವಿಧ ಇಲಾಖೆಯ ಸಹಯೋಗದಲ್ಲಿ ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ಯುವ ಸಮೂಹಕ್ಕೆ ತಿಳಿಸುವ ನಿಟ್ಟಿನಲ್ಲಿ ಅರ್ಥಪೂರ್ಣವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರು ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಸ್ವಾಮಿ ವಿವೇಕಾನಂದರ ಚಿಕ್ಯಾಗೋ ಉಪನ್ಯಾಸದ 125ನೇ ವರ್ಷಾಚರಣೆ ಕಾರ್ಯಕ್ರಮಗಳ ಪೂರ್ವ ಸಿದ್ಧತೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಿಲ್ಲೆಯ ಎಲ್ಲ ಶಾಲಾ ಕಾಲೇಜು, ಗ್ರಾಮ ಪಂಚಾಯತಿಗಳು, ಯುವ ಸಂಘಟನೆಗಳ ಸಹಯೋಗದಲ್ಲಿ ಒಂದು ವರ್ಷಪೂರ್ತಿ ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ಬಿಂಬಿಸುವ ವಿವಿಧ ಅರ್ಥಪೂರ್ಣ ಕಾರ್ಯಕ್ರಮಗಳನ್ನು ನಡೆಸುವಂತೆ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
1983ರಲ್ಲಿ ಚಿಕ್ಯಾಗೋ ವಿಶ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಿದ ಸ್ವಾಮಿ ವಿವೇಕಾನಂದರು ಸೆಪ್ಟೆಂಬರ್ 11 ರಂದು ಭಾರತದ ತತ್ವಾದರ್ಶಗಳನ್ನು ಹೃದಯಸ್ಪರ್ಶಿಯಾಗಿ ಭಾಷಣಮಾಡಿ ವಿಶ್ವದ ನಾನಾ ಚಿಂತಕರಿಗೆ ತಿಳಿಸಿದ್ದರು. ಇದೇ 11 ಸೆಪ್ಟೆಂಬರ್ 2018ಕ್ಕೆ ಉಪನ್ಯಾಸ ನೀಡಿ 125 ವರ್ಷಗಳಾಗಿವೆ. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 11 ರಿಂದ ಒಂದು ವರ್ಷ ಕಾಲ ಸರ್ಕಾರ ವಿವೇಕರ ಚಿಂತನೆಗಳನ್ನು ಯುವ ಸಮೂಹಕ್ಕೆ ತಿಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ದೇಶನ ನೀಡಿದೆ. ಜಿಲ್ಲೆಯಲ್ಲೂ ಈ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಯೋಜಿಸಲು ಸೂಚಿಸಿದರು.
ಸೆಪ್ಟೆಂಬರ್ 11 ರಂದು ನಗರದಲ್ಲಿ ವಿದ್ಯಾರ್ಥಿಗಳ ಬೃಹತ್ ರ್ಯಾಲಿಯನ್ನು ಆಯೋಜಿಸಬೇಕು. ಕಾರ್ಯಕ್ರಮದ ಉದ್ಘಾಟನೆ, ವಿಚಾರ ಸಂಕಿರಣ ಕಾರ್ಯಕ್ರಮ ಹಮ್ಮಿಕೊಳ್ಳಲು ಸೂಚಿಸಿದರು. ನಿಯಮಿತವಾಗಿ ಎಲ್ಲ ಶಾಲಾ-ಕಾಲೇಜು, ಗ್ರಾಮ ಪಂಚಾಯತಿಗಳಲ್ಲಿ ವಿವೇಕಾನಂದರ ಕುರಿತಂತೆ ವಿಚಾರ ಸಂಕಿರಣ, ಭಾಷಣ, ಚರ್ಚಾಕೂಟ, ಪ್ರಬಂಧ ಸ್ಪರ್ಧೆ, ಜಾಥಾಗಳನ್ನು ಆಯೋಜಿಸಿ ಸಮಾಜದಲ್ಲಿ ಏಕತಾ ಭಾವನೆನ್ನು ಪಸರಿಸಲು ಕ್ರಮವಹಿಸಬೇಕು. ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳು, ಯುವ ಸಂಘ-ಸಂಸ್ಥೆಗಳು, ವಿಶ್ವವಿದ್ಯಾನಿಲಯ, ಎನ್.ಎಸ್.ಎಸ್. ಘಟಕಗಳು, ರಾಮಕೃಷ್ಣ ಮಿಷನ್ ಸೇರಿದಂತೆ ವಿವಿಧ ಸಂಘಟನೆಗಳನ್ನು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ, ಅಪರ ಜಿಲ್ಲಾಧಿಕಾರಿ ಶ್ರೀಮತಿ ಶಾಂತಾ ಹುಲ್ಮನಿ, ಅಪರ ಪೊಲೀಸ್ ವರಿಷ್ಠಾಧಿಕಾರಿ ಜಗದೀಶ್, ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ವಾಸಣ್ಣ ಹಾಗೂ ಇತರ ಇಲಾಖಾ ಅಧಿಕಾರಿಗಳು ಭಾಗವಹಿಸಿದ್ದರು