ಹೊಸಪೇಟೆ :
ಇಲ್ಲಿನ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿಗಳಿಂದ ಶಿಕ್ಷಕರ ದಿನಾಚರಣೆ ಮತ್ತು ಅಭಿನಂದನೆ ಕಾರ್ಯಕ್ರಮ ನಡೆಯಿತು.
ಅಧ್ಯಕ್ಷತೆ ವಹಿಸಿ ವಿಭಾಗದ ಮುಖ್ಯಸ್ಥ ಡಾ.ಕೆ. ರವೀಂದ್ರನಾಥ ಮಾತನಾಡಿ, ವ್ಯಕ್ತಿಯ ಸಾಧನೆಗೆ ಪರಿಸರ ತುಂಬಾ ಮುಖ್ಯ. ಅಂತಹ ಪರಿಸರದಲ್ಲಿ ಮುಖ್ಯವಾಗಿ ಸಹದ್ಯೋಗಿಗಳ ಪರಿಸರ ಹಾಗೂ ವಿದ್ಯಾರ್ಥಿ ಬಳಗದ ಪರಿಸರ ಈ ಎರಡು ಸಂಬಂಧಗಳ ನಡುವೆ ನನ್ನ ಒಡನಾಟವಿದ್ದು, ಆರಂಭದ ಕನ್ನಡ ವಿಶ್ವವಿದ್ಯಾಲಯದಲ್ಲಿ ವಿದ್ವತ್‍ವಲಯವೊಂದಿತ್ತು. ಮುಖ್ಯವಾಗಿ ಲಕ್ಷ್ಮಣ್ ತೆಲಗಾವಿ, ಕೆ.ವಿ.ನಾರಾಯಣ, ಮಲ್ಲೇಪುರಂ ಜಿ. ವೆಂಕಟೇಶ್, ಎ.ವಿ.ನಾವಡ ಇನ್ನು ಮೊದಲಾದ ವಿದ್ವಾಂಸರ ಒಡನಾಟದ ಪರಿಸರದೊಂದಿಗೆ ನಮ್ಮ ವಿದ್ವತ್‍ವಲಯದ ವಿಸ್ತಾರ ಹರಡಿತು. ಇವು ನಮ್ಮ ಅಧ್ಯಯನದ ಯಶಸ್ಸಿಗೆ ಪ್ರೇರಣೆಯೂ ಸಹ ಆದವು ಎಂದರು.
ಪ್ರಾಧ್ಯಾಪಕ ಡಾ.ವೀರೇಶ ಬಡಿಗೇರ ಮಾತನಾಡಿ, ವಿದ್ಯಾರ್ಥಿಗಳು ಅಧ್ಯಯನಶೀಲರಾಗಬೇಕು. ಓದು ಎನ್ನುವುದು ತಿಳುವಳಿಕೆಯ ಜ್ಞಾನವನ್ನು ವಿಸ್ತರಿಸುತ್ತದೆ. ಹಾಗೂ ಸಂತೋಷವನ್ನು ನೀಡುತ್ತದೆ. ಹಾಗಾಗಿ ವಿದ್ಯಾರ್ಥಿಗಳಾದವರು ಓದಿನಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಿ ಎಂದರು. ಶಿಕ್ಷಕನಾದವನು ಯಾವಾಗಲೂ ವಿದ್ಯಾರ್ಥಿಗಳ ಏಳಿಗೆಯನ್ನು ಬಯಸುತ್ತಾನೆ ಹೊರತು ಕೆಟ್ಟದನ್ನಲ್ಲ ಎಂದು ತಿಳಿಸಿದರು.
ಮತ್ತೋರ್ವ ಪ್ರಾಧ್ಯಾಪಕ ಡಾ.ಎಫ್.ಟಿ ಹಳ್ಳಿಕೇರಿ ಮಾತನಾಡಿ, ವಿದ್ಯಾರ್ಥಿಗಳ ಬದುಕಿನೊಳಗೆ ಶಿಕ್ಷಕರ ಪಾತ್ರ ತುಂಬಾ ಮುಖ್ಯವಾದದ್ದು. ಅಂತಹ ಪವಿತ್ರವಾದ ಶಿಕ್ಷಕ ವೃತ್ತಿಗೆ ಯಾವುದೇ ಮಡಿ ಮೈಲಿಗೆ ಶ್ರೀಮಂತಿಕೆ ಎನ್ನುವುದು ಇರುವುದಿಲ್ಲ. ಶಿಕ್ಷಣದ ಮೂಲಕ ನಮ್ಮ ಹಸನಾದ ಬದುಕನ್ನು ಕಟ್ಟಿಕೊಳ್ಳಬಹುದಾದ ಶಕ್ತಿ ಶಿಕ್ಷಣಕ್ಕಿದೆ. ಇವತ್ತಿನ ಆಧುನಿಕ ಸಂದರ್ಭದೊಳಗೆ ವಿದ್ಯಾರ್ಥಿಗಳು ಬದುಕನ್ನು ಕಟ್ಟಿಕೊಳ್ಳುವ ಸವಾಲು ವಿದ್ಯಾರ್ಥಿಗಳ ಮುಂದಿದೆ ಎಂದರು.ಹಸ್ತಪ್ರತಿಶಾಸ್ತ್ರ ವಿಭಾಗದ ಆಂತರಿಕ ವಿಷಯ ತಜ್ಞರಾದ ಡಾ.ಕಲವೀರ ಮನ್ವಾಚಾರ ಇದ್ದರು.ಕಾವ್ಯ ಮತ್ತು ರೇಷ್ಮಾ ಪ್ರಾರ್ಥಿಸಿದರು, ವಿಜಯಶಂಕರ ಸ್ವಾಗತಿಸಿದರು, ರಾಮಕೃಷ್ಣ ಭಂಡಾರಿ ವಂದಿಸಿದರು, ಸಂತೋಷಕುಮಾರ ಜಿ. ನಿರೂಪಿಸಿದರು.