ರಾಣೇಬೆನ್ನೂರ:
ಸಮಾಜದಲ್ಲಿರುವ ಬ್ಯಾಂಕ್‍ಗಳು, ಹಣಕಾಸು ಸಂಸ್ಥೆಗಳು ಲಾಭವನ್ನೆ ಗುರಿಯಾಗಿರಿಸಿಕೊಂಡು ಕಾರ್ಯ ನಿರ್ವಹಿಸಬಾರದು. ಹಣವಿದ್ದರೆ ಅದು ನಿಮ್ಮೊಬ್ಬರ ಸ್ವಂತದ ಆಸ್ತಿಯಾಗುತ್ತದೆ. ಅದನ್ನೇ ಇನ್ನೊಬ್ಬರ ಬದುಕಿಗೆ ಸಹಕಾರಿಯಾಗುವಂತಹ ಸಮಾಜಮುಖಿ ಕಾರ್ಯಕ್ಕೆ ವಿನಿಯೋಗಿಸಿದಾಗ ಮಾತ್ರ ಹಣಕ್ಕೆ ಮತ್ತು ಸಂಸ್ಥೆಗೆ ನಿಜವಾದ ಅರ್ಥ ಬರುತ್ತದೆ ಎಂದು ಡಿಎಸ್‍ಪಿ ಅನಿಲಕುಮಾರ ಭೂಮರೆಡ್ಡಿ ಹೇಳಿದರು.
ಸ್ಥಳೀಯ ಅಶೋಕ ನಗರದ ಬಂಟ್ಸ್ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತದಲ್ಲಿ ರವಿವಾರದಂದು ಇ-ಸ್ಟಾಂಪಿಂಗ್ (ಬಾಂಡ್ ಪೇಪರ್) ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಹಣದಿಂದ ಏನೆಲ್ಲಾ ಮಾಡಬಹುದು ಆದರೆ ಮಾನವೀಯತೆ ಸಂಪಾದಿಸಲು ಆಗದು. ಈ ಕಾರಣದಿಂದಲೇ ದುಡ್ಡನ್ನು ಸತ್ಕಾರ್ಯಕ್ಕೆ ಉಪಯೋಗಿಸುವುದರಿಂದ ಸಮಾಜದಲ್ಲಿ ಒಳ್ಳೆಯ ಹೆಸರು ಬರುತ್ತದೆ ಎಂದರು.
ಮನುಷ್ಯನ ಹುಟ್ಟು ಆಕಸ್ಮಿಕವಾದರೂ ಸಾವು ಎಂದಿಗೂ ತಪ್ಪದು. ಅದು ನಿಶ್ಚಿತವಾಗಿದೆ. ಸತ್ತ ಮೇಲೆ ಈ ದೇಹ ಮಣ್ಣಿನಲ್ಲಿ ಮಣ್ಣಾಗುತ್ತದೆ. ಈ ಮಧ್ಯ ನಾಗರೀಕರು ಸಮಾಜಕ್ಕೆ ಏನಾದರೂ ಹೊಸದೊಂದು ಸಾಧನೆ ಮಾಡಲು ಮುಂದಾಗಬೇಕು. ಹಣದಿಂದ ವ್ಯಕ್ತಿತ್ವ ಅಳೆಯಬಾರದು, ಗುಣದಿಂದ ಅಳೆಯಬೇಕಾದರೆ ಆತನು ಸಮಾಜಕ್ಕೆ ನೀಡಿದ ಕೊಡುಗೆ ಏನು ಎಂಬುದು ಸಮಾಜವು ಪ್ರಶ್ನಿಸುತ್ತದೆ ಎಂದರು.
ನಿಯಮಿತದ ಅಧ್ಯಕ್ಷ ಎಂ.ಅಪ್ಪುಶೆಟ್ಟಿ ಮಾತನಾಡಿ ಯುವ ಜನತೆಯು ತಮ್ಮ ಶರೀರದ ಶಕ್ತಿಯ ಜೊತೆಗೆ ಬುದ್ಧಿ ಮತ್ತು ಮನಸ್ಸುಗಳನ್ನು ಹಿಡಿತದಲ್ಲಿಟ್ಟುಕೊಂಡು ಸಮಾಜೋದ್ಧಾರದಂತಹ ಕಾರ್ಯಗಳಲ್ಲಿ ತೊಡಗಬೇಕು. ಯುವಕರು ಸಮಾಜದ ಸ್ವಾಸ್ಥ್ಯ ಕಾಪಾಡುವುದರ ಜೊತೆಗೆ ದೇಶವನ್ನು ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಮುನ್ನಡೆಯಲು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಈ ಸಮಾಜದ ಉದ್ದಾರವಾಗಲು ಸಾಧ್ಯ ಎಂದರು.
ಉಪಾಧ್ಯಕ್ಷ ಶಾಂತರಾಮ ಹೆಗಡೆ, ನಿರ್ದೇಶಕರಾದ ಹೆಚ್.ಜಯರಾಮ ಶೆಟ್ಟಿ, ಟಿ ಕೃಷ್ಣಶೆಟ್ಟಿ, ಬಿ.ಮಂಜುನಾಥ ಶೆಟ್ಟಿ, ಅರುಣಕುಮಾರ ಶೆಟ್ಟಿ, ವಿಶ್ವನಾಥ ಶೆಟ್ಟಿ, ದೇವಕಿ ಚಂದ್ರಶೇಖರ ಶೆಟ್ಟಿ, ಸಂಗೀತಾ ವಿಜಯಕುಮಾರ ಶೆಟ್ಟಿ, ರಾಮಚಂದ್ರ ಶೆಟ್ಟಿ, ಶಾಂತಪ್ಪ ಬೆಳಕೇರಿ, ಉದಯ ಕಾವಡಿ, ಮ್ಯಾನೇಜರ್ ಪುಷ್ಪಾ ಎಂ, ವಿದ್ಯಾರಾಣಿ, ಗುಡ್ಡಪ್ಪ ಬಾಗಲವರ, ಭಾಸ್ಕರ ಶೆಟ್ಟಿ, ವಿಖ್ಯಾತ ರೈ, ಶ್ರೀಧರ ಕೊಲಿನ್ ಸೇರಿದಂತೆ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ