![]()
ಹಾವೇರಿ : ಜಿಲ್ಲೆಯ ಪೊಲೀಸರು ದಕ್ಷಿಣ ಭಾರತದಲ್ಲಿಯೇ ಅತಿ ಹೆಚ್ಚು ಮೊಬೈಲ್ ಪತ್ತೆ ಹಚ್ಚಿದ ಪೊಲೀಸರು ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಕಳ್ಳತನವಾಗಿದ್ದ ಸುಮಾರು 210 ಮೊಬೈಲ್ಗಳನ್ನ ಪತ್ತೆ ಹಚ್ಚಿದ್ದಾರೆ.
ಪತ್ತೆ ಹಚ್ಚಿದ 210 ಮೊಬೈಲ್ಗಳ ಮೌಲ್ಯ ಸುಮಾರು 42 ಲಕ್ಷ ಎಂದು ಅಂದಾಜಿಸಲಾಗಿದೆ. ಹಾವೇರಿ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಅವರು ತಮ್ಮ ಕಚೇರಿಯಲ್ಲಿ ಮಾಲೀಕರಿಗೆ ಮೊಬೈಲ್ ಹಸ್ತಾಂತರಿಸಿದ್ದಾರೆ.
ಜಿಲ್ಲೆಗಳಲ್ಲಿ ಅಷ್ಟೇ ಅಲ್ಲದೇ ಹೊರ ರಾಜ್ಯಗಳಲ್ಲಿದ್ದ ಮೊಬೈಲ್ಗಳೂ ಪತ್ತೆ : ಜಿಲ್ಲೆಯಲ್ಲಿ ಕಳ್ಳತನವಾಗಿದ್ದ ಸಾರ್ವಜನಿಕರ ಮೊಬೈಲ್ಗಳನ್ನ ಪತ್ತೆಹಚ್ಚಿ ನೀಡಿದಕ್ಕೆ ಮೊಬೈಲ್ ಮಾಲೀಕರು ಸಂತಸ ವ್ಯಕ್ತಪಡಿಸಿದ್ದಾರೆ. ಸಿಇಐಆರ್ ಪೊರ್ಟಲ್ನ ಸಹಾಯದಿಂದ ವಿವಿಧ ಜಿಲ್ಲೆಗಳಲ್ಲಿ ಅಷ್ಟೇ ಅಲ್ಲದೇ ಹೊರ ರಾಜ್ಯಗಳಲ್ಲಿದ್ದ ಮೊಬೈಲ್ಗಳನ್ನೂ ಪೊಲೀಸ್ ಇಲಾಖೆ ಪತ್ತೆ ಹಚ್ಚಿದೆ.
ಕಳೆದ 3 ವರ್ಷಗಳಿಂದ ಕಳ್ಳತನವಾಗಿದ್ದ ಮೊಬೈಲ್ಗಳ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಮೊಬೈಲ್ ಪತ್ತೆ ಹಚ್ಚಿ ಮಾಲೀಕರಿಗೆ ಹಸ್ತಾಂತರಿಸಿದ್ದಾರೆ. ಈ ಮೂಲಕ ಕಳ್ಳತನವಾಗಿದ್ದ ಮೊಬೈಲ್ಗಳನ್ನು ಪತ್ತೆ ಮಾಡುವಲ್ಲಿ ಹಾವೇರಿ ಜಿಲ್ಲೆ ದಕ್ಷಿಣ ಭಾರತದ ರಾಜ್ಯಗಳಲ್ಲಿಯೇ ಪ್ರಥಮ ಸ್ಥಾನ ಪಡೆದಿದೆ.
ಜಿಲ್ಲೆಯ ಪೊಲೀಸರಿಗೆ ಹಾವೇರಿ ಎಸ್ಪಿ ಯಶೋಧಾ ವಂಟಗೋಡಿ ಅಭಿನಂದನೆ : ಅತಿ ಹೆಚ್ಚು ಮೊಬೈಲ್ ಪತ್ತೆ ಮಾಡಿ ಪ್ರಥಮ ಸ್ಥಾನಕ್ಕೇರಿದ ಹಾವೇರಿ ಜಿಲ್ಲೆಯ ಪೊಲೀಸರಿಗೆ ಹಾವೇರಿ ಎಸ್ಪಿ ಯಶೋಧಾ ವಂಟಗೋಡಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.
‘ಮೂರು ವರ್ಷದ ಹಿಂದೆ ಮೊಬೈಲ್ ಕಳ್ಳತನವಾಗಿತ್ತು. ಮೊಬೈಲ್ ಸಿಗುವ ಆಸೆಯನ್ನೇ ಬಿಟ್ಟಿದ್ದೆ. ಆದರೂ ಇರಲಿ ಅಂತಾ ಸಿಇಐಆರ್ ಪೊರ್ಟಲ್ನಲ್ಲಿ ದೂರು ದಾಖಲಿಸಿದ್ದೆ. ಈಗ ಮೊಬೈಲ್ ಸಿಕ್ಕಿರುವುದು ಸಂತಸ ತಂದಿದೆ. ಹೊರ ರಾಜ್ಯಗಳಲ್ಲಿದ್ದ ಮೊಬೈಲ್ ಪತ್ತೆ ಹಚ್ಚಿ ತಂದುಕೊಟ್ಟ ಪೊಲೀಸರಿಗೆ ಧನ್ಯವಾದ ಅರ್ಪಿಸುತ್ತೇನೆ’ ಎಂದು ಮೊಬೈಲ್ ಮಾಲೀಕರು ತಿಳಿಸಿದ್ದಾರೆ.
ಫೋನ್ ಕಳುವಾದಾಗ CEIR ಬಳಕೆ ಮಾಡುವುದು ಹೇಗೆ?: ಕಳ್ಳತನವಾದ ಅಥವಾ ಕಳೆದುಕೊಂಡ ಮೊಬೈಲ್ ಫೋನ್ನಲ್ಲಿರುವ ಡೇಟಾವನ್ನು ಅಳಿಸಲು ಅಥವಾ ಫೋನ್ ಬ್ಲಾಕ್ ಮಾಡಲು ಅನುಕೂಲಕರವಾಗುವಂತೆ 2023ರಲ್ಲಿ ಕೇಂದ್ರ ದೂರಸಂಪರ್ಕ ಇಲಾಖೆ ಸೆಂಟ್ರಲ್ ಇಕ್ವಿಪ್ಮೆಂಟ್ ಐಡೆಂಟಿಟಿ ರಿಜಿಸ್ಟರ್ (CEIR) ಪೋರ್ಟಲ್ ಪರಿಚಯಿಸಿದೆ.
ಮೊಬೈಲ್ ಕಳೆದುಕೊಂಡವರು ಸಿಇಐಆರ್ ಪೋರ್ಟಲ್ಗೆ ತೆರಳಿ ಫೋನ್ನ ಇಂಟರ್ನ್ಯಾಷನಲ್ ಮೊಬೈಲ್ ಇಕ್ವಿಪ್ಮೆಂಟ್ ಐಡೆಂಟಿಟಿ (IMEI) ನಂಬರ್ ನಮೂದಿಸಬೇಕಾಗುತ್ತದೆ. ಇದರಿಂದ ಕಳೆದು ಹೋದ ಫೋನ್ನಲ್ಲಿ ಬೇರೆ ಯಾವುದಾದರೂ ನಂಬರ್ ಚಾಲ್ತಿಯಲ್ಲಿದ್ದರೆ ಪತ್ತೆಹಚ್ಚಲು ಸಹಕಾರಿಯಾಗುತ್ತದೆ.







