ಹುಲಿ-ಸಿಂಹ ಸಫಾರಿಗೆ ಚಾಲನೆ

ಹೊಸಪೇಟೆ

     ತಾಲ್ಲೂಕಿನ ಕಮಲಾಪುರ ಬಳಿಯ ಬಿಳಿಕಲ್ ಸಂರಕ್ಷಿತ ಅರಣ್ಯದಲ್ಲಿನ ಅಟಲ್ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನದಲ್ಲಿ ಹುಲಿ ಮತ್ತು ಸಿಂಹ ಸಫಾರಿಗೆ ಜೂ.21ರಂದು ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಚಾಲನೆ ನೀಡಲಿದ್ದಾರೆ ಎಂದು ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ.ತಿಳಿಸಿದ್ದಾರೆ.

     ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಉದ್ಯಾನಕ್ಕೆ ನಾಲ್ಕು ಹುಲಿ, ಎರಡು ಸಿಂಹಗಳನ್ನು ತರಲಾಗಿದೆ. ಅವುಗಳು ಸ್ಥಳೀಯ ವಾತಾವರಣಕ್ಕೆ ಹೊಂದಿಕೊಂಡಿವೆ. ಹಾಗಾಗಿ ಸಫಾರಿಗೆ ಚಾಲನೆ ಕೊಡಲು ತೀರ್ಮಾನಿಸಲಾಗಿದೆ. ವರ್ಷದ ಹಿಂದೆಯೇ ಇಂದಿರಾ ಪ್ರಿಯದರ್ಶಿನಿ ಜಿಂಕೆ ಉದ್ಯಾನ ಆರಂಭಗೊಂಡಿದೆ. ಪಾರಂಪರಿಕ ಪ್ರಕೃತಿಯ ಸೊಬಗು ಹೊಂದಿರುವ ಪ್ರಾಣಿ ಸಂಗ್ರಹಾಲಯದಿಂದ ಸ್ಥಳೀಯವಾಗಿ ಉದ್ಯೋಗ, ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗಲಿದೆ. ಅಲ್ಲದೆ, ಶಾಲಾ ವಿದ್ಯಾರ್ಥಿಗಳಿಗೆ ಪ್ರಾಣಿ ಸಂರಕ್ಷಣೆ ಕುರಿತು ಅರಿವು ಮೂಡಲಿದೆ ಎಂದರು.

      ಅಟಲ್ ಬಿಹಾರಿ ವಾಜಪೇಯಿ ಮೃಗಾಲಯವು ರಾಜ್ಯದಲ್ಲೇ ಮೂರನೆಯ ಹಾಗೂ ಉತ್ತರ ಕರ್ನಾಟಕ ಭಾಗದ ಮೊದಲ ಜೈವಿಕ ಉದ್ಯಾನವನ ಆಗಿದ್ದು, ಒಂದು ವಾರದೊಳಗೆ ಒಂದು ಹುಲಿ ಹಾಗೂ 2 ಸಿಂಹಗಳನ್ನು ತರಲಾಗುತ್ತಿದೆ. ಹಂತ ಹಂತವಾಗಿ ಚಿರತೆ, ಕರಡಿ, ಕೋತಿ, ಮೊಸಳೆಗಳ ಆವರಣ ಶೀಘ್ರವೇ ಪ್ರವಾಸಿಗರಿಗೆ ನೋಡಲು ಲಭ್ಯವಾಗಲಿವೆ ಎಂದರು. ಎರಡ್ಮೂರು ತಿಂಗಳಲ್ಲಿ ಪ್ರಾಣಿಗಳ ಪುನರ್ವಸತಿ ಕೇಂದ್ರ ಸಹ ಆರಂಭಿಸಲಾಗುವುದು.

     ವಿಶ್ವ ವಿಖ್ಯಾತ ಹಂಪಿ ಪರಿಸರದಲ್ಲಿ ಜೂಯಾಲಾಜಿಕಲ್ ಪಾರ್ಕ್ ಇರುವುದರಿಂದ ಹೆಚ್ಚಿನ ಪ್ರವಾಸಿಗರು ಪಾರಂಪರಿಕ ಸ್ಥಳಗಳನ್ನು ನೋಡುವುದರ ಜತೆ ಮೃಗಾಲಯಕ್ಕೂ ಭೇಟಿ ನೀಡಲು ಅವಕಾಶ ದೊರೆಯುತ್ತದೆ. ಹುಲಿ, ಸಿಂಹ ಮತ್ತು ಜಿಂಕೆ ಸಫಾರಿ ನೋಡಲು ವಯಸ್ಕರಿಗೆ 100, ಐದು ವರ್ಷದೊಳಗಿನ ಮೇಲಿನ ಮಕ್ಕಳಿಗೆ 50 ನಿಗದಿಪಡಿಸಲಾಗಿದೆ. ಉದ್ಯಾನಕ್ಕೆ ಸೇರಿದ ವಾಹನದಲ್ಲಿ ಎಂಟು ಕಿ.ಮೀ. ಕ್ರಮಿಸಿ ಸಫಾರಿ ನೋಡಬಹುದು. ಶಾಲಾ ವಿದ್ಯಾರ್ಥಿಗಳಿಗೆ ರಿಯಾಯಿತಿ ದರ ಕಲ್ಪಿಸಲಾಗುವುದು ಎಂದರು.

    ರಾಜ್ಯದಲ್ಲಿ ಬನ್ನೇರುಘಟ್ಟ, ಶಿವಮೊಗ್ಗ ನಂತರ ಸಫಾರಿ ಇರುವುದು ವಾಜಪೇಯಿ ಜೈವಿಕ ಉದ್ಯಾನದಲ್ಲಿ. ಉತ್ತರ ಕರ್ನಾಟಕದ ಮೊದಲ ಸಫಾರಿ ಎಂಬ ಕೀರ್ತಿಗೆ ಇದು ಪಾತ್ರವಾಗಲಿದೆ. ಉತ್ತರ ಕರ್ನಾಟಕದ ಕೊಂಡಿಯಂತಿರುವ ಹೊಸಪೇಟೆ ಸಮೀಪ ಉದ್ಯಾನ ನಿರ್ಮಾಣಗೊಂಡಿರುವುದರಿಂದ ಸಾಕಷ್ಟು ಜನ ಇಲ್ಲಿಗೆ ಭೇಟಿ ಕೊಡಬಹುದು ಎಂದು ತಿಳಿಸಿದರು.

     ವಿಶ್ವವಿಖ್ಯಾತ ಹಂಪಿ, ಕನ್ನಡ ವಿಶ್ವವಿದ್ಯಾಲಯ, ದರೋಜಿ ಕರಡಿಧಾಮಕ್ಕೆ ಹೊಂದಿಕೊಂಡಂತೆ ಅಟಲ್ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನ ಇರುವುದರಿಂದ ಸ್ಥಳೀಯರು ಸೇರಿದಂತೆ ದೇಶ ವಿದೇಶದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ಕೊಡಬಹುದು. ಉದ್ಯಾನ ಆರಂಭದಿಂದ ಪ್ರವಾಸೋದ್ಯಮ ಬೆಳವಣಿಗೆಗೆ ಅನುಕೂಲವಾಗಲಿದೆ. ಜತೆಗೆ ಸ್ಥಳೀಯರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಾವಕಾಶಗಳು ದೊರೆಯಲಿದೆ ಎಂದು ಭರವಸೆ ನೀಡಿದರು.

      ತುಂಗಭದ್ರಾ ಜಲಾಶಯದ ಮೇಲ್ಮಟ್ಟದ ಕಾಲುವೆಯ ನೀರು ಬಳಸಿಕೊಳ್ಳುವುದಕ್ಕೆ ಅನುಮತಿ ಸಿಕ್ಕಿದೆ. ಆ ನೀರನ್ನು ತಂದು ಉದ್ಯಾನದಲ್ಲಿರುವ ಕೆರೆಗಳನ್ನು ತುಂಬಿಸಲಾಗುವುದು. ಜೈವಿಕ ಉದ್ಯಾನದ ಸುತ್ತಮುತ್ತ 80ಕ್ಕೂ ಹೆಚ್ಚು ಜಾತಿಯ ಪಕ್ಷಿಗಳು ನೆಲೆಸಿವೆ. ಪಕ್ಷಿ ಪ್ರಿಯರು ಅವುಗಳನ್ನು ವೀಕ್ಷಿಸಬಹುದು. ಪ್ರವಾಸಿಗರು ತಂಗಲು ಸಾಕಷ್ಟು ಐಷಾರಾಮಿ ಹೋಟೆಲ್‍ಗಳಿರುವುದು ಅನುಕೂಲವಾಗಲಿದೆ ಎಂದರು

      ಪತ್ರಿಕಾಗೋಷ್ಠಿಯಲ್ಲಿ ಬಳ್ಳಾರಿ ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಎಸ್.ಲಿಂಗರಾಜ, ಜಿಲ್ಲಾ ಉಪ ಸಂರಕ್ಷಣಾಧಿಕಾರಿ ಡಾ.ರಮೇಶ್ ಕುಮಾರ್, ಕೊಪ್ಪಳ ಡಿಸಿಎಫ್ ಕ್ಷೀರಸಾಗರ, ಎಬಿ ವಾಜಪೇಯಿ ಜೂಯಾಲಾಜಿಕಲ್ ಪಾರ್ಕ್ ಆರ್‍ಫ್‍ಒ ರಮೇಶ್, ವಲಯ ಅರಣ್ಯಾಧಿಕಾರಿ ಪರಮೇಶ್ವರಪ್ಪ ಇತರರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link