ದಾವಣಗೆರೆ
ಇಡೀ ಊರನ್ನೇ ಶುಚಿಗೊಳಿಸಿ, ಸ್ವಚ್ಛತೆ ಕಾಪಾಡುವ ಪೌರ ಕಾರ್ಮಿಕರೇ ಅತೀ ಹೆಚ್ಚಾಗಿ ನೆಲೆಸಿರುವ ದಾವಣಗೆರೆಯ ಗಾಂಧಿ ನಗರದ ಕೆಲ ಕ್ರಾಸ್‍ಗಳಲ್ಲಿ ಸ್ವಚ್ಛತೆ ಮರೆಯಾಗಿದೆ. ಇಲ್ಲಿನ ಚರಂಡಿಗಳು ತುಂಬಿಕೊಂಡಿರುವುದರಿಂದ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿರುವ ಕಾರಣ ಇಲ್ಲಿನ ಸಾರ್ವಜನಿಕರು ಸಾಂಕ್ರಮಿಕ ರೋಗಗಳ ಭೀತಿಯಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹೌದು… ಇಲ್ಲಿನ ಗಾಂಧಿ ನಗರದ 5ನೇ ಕ್ರಾಸ್‍ನಲ್ಲಿರುವ ದುರ್ಗಾಂಭಿಕಾ ದೇವಸ್ಥಾನದ ಬಳಿಯ ಹಳೇ ಚರಂಡಿಯಲ್ಲಿ ಕಸ, ಕಡ್ಡಿ ತುಂಬಿರುವುದರಿಂದ ಚರಂಡಿಗಳಲ್ಲಿ ಸರಾಗವಾಗಿ ನೀರು ಹರಿಯದ ಕಾರಣ ಚರಂಡಿಯ ಪಕ್ಕದಲ್ಲಿಯೇ ನಿರ್ಮಿಸಿರುವ ನೀರಿನ ನಲ್ಲಿ ಗುಂಡಿಗಳಲ್ಲಿ ಕೊಚ್ಚೆನೀರು ಬಸಿದು ನಿಲ್ಲುವ ಕಾರಣ. ಪಾಲಿಕೆ ಸರಬರಾಜು ಮಾಡುವ ಕುಡಿಯುವ ನೀರನ್ನು ನಾಗರೀಕರು ಇದೇ ನಲ್ಲಿ ಗುಂಡಿಗಳಲ್ಲಿ ಹಿಡಿಯುವುದರಿಂದ ನೀರಿಗೆ ಚರಂಡಿ ನೀರು ಮಿಶ್ರಣವಾಗಿ ನೀರು ಕಲುಷಿತ ಆಗಲಿದೆ. ಇದೇ ನೀರನ್ನು ಈ ಭಾಗದ ನಾಗರೀಕರು ಸೇವಿಸುವುದರಿಂದ ವಿವಿಧ ಕಾಯಿಲೆಗಳಿಗೂ ತುತ್ತಾಗುತ್ತಿದ್ದಾರೆ.
ಚರಂಡಿಗಳು ಹೂಳು ತುಂಬಿಕೊಂಡಿರುವ ಕಾರಣ ನೀರು ಮುಂದೆ ಹರಿಯದೇ, ಅಲ್ಲಿಯೇ ನಿಲ್ಲುವುದರಿಂದ ಹಾಗೂ ನಲ್ಲಿ ಗುಂಡಿಗಳಲ್ಲೂ ಚರಂಡಿ ನೀರು ನಿಲ್ಲುವುದರಿಂದ ಚರಂಡಿಗಳು ಸೊಳ್ಳೆ ಉತ್ಪತ್ತಿಗಳ ತಾಣವಾಗಿವೆ. ಅಲ್ಲದೇ, ಇವುಗಳಿಂದ ದುರ್ವಾಸನೆ ಹರಡುತ್ತಿದೆ.
ಸೊಳ್ಳೆ ನಿಯಂತ್ರಣಕ್ಕೆ ಮಹಾನಗರ ಪಾಲಿಕೆ ಫಾಗಿಂಗ್ ಮಾಡಿಸುತ್ತಿಲ್ಲ. ಅಲ್ಲದೇ, ಬ್ಲಿಚಿಂಗ್ ಪೌಡರ್ ಸಹ ಸಿಂಪರಣೆ ಮಾಡುತ್ತಿಲ್ಲ. ಹೀಗಾಗಿ ಸೊಳ್ಳೆಗಳ ಕಾಟ ಹೆಚ್ಚಾಗಿರುವ ಕಾರಣ 5ನೇ ಕ್ರಾಸ್ ಒಂದರಲ್ಲೇ ಮೂವರು ಮಕ್ಕಳು ತೀವ್ರ ಜ್ವರದಿಂದ ಬಳಲುತ್ತಿದ್ದಾರೆಂದು ಆರೋಪಿಸುತ್ತಾರೆ ಇಲ್ಲಿಯ ನಿವಾಸಿ ಗೀತಾ ಮತ್ತು ರೇಣುಕಮ್ಮ.
ಗಾಂಧಿ ನಗರದ 1 ಮತ್ತು 4ನೇ ಕ್ರಾಸ್‍ನಲ್ಲಿ ಹೊಸದಾಗಿ ಚರಂಡಿ ನಿರ್ಮಿಸಲಾಗಿದೆ. ಅದರಂತೇ 5ನೇ ಕ್ರಾಸ್‍ನಲ್ಲೂ ಚರಂಡಿ ನಿರ್ಮಿಸಿಕೊಡುವಂತೆ ಈ ಭಾಗದ ಪಾಲಿಕೆ ಸದಸ್ಯರಿಗೆ ಒತ್ತಾಯಿಸಿದರೆ, ಈ ಕ್ರಾಸ್‍ನಲ್ಲಿ ಚರಂಡಿ ನಿರ್ಮಿಸಬೇಡಿ ಎಂಬುದಾಗಿ ಕೆಲವರು ಅರ್ಜಿ ಕೊಟ್ಟಿದ್ದಾರೆ. ಆದ್ದರಿಂದ ಚರಂಡಿ ನಿರ್ಮಿಸಲಾಗುವುದಿಲ್ಲ ಎಂಬುದಾಗಿ ನಮ್ಮನ್ನು ಸಾಗಿಹಾಕುತ್ತಾರೆಂದು ಆರೋಪಿಸಿದರು.
ಚರಂಡಿ ನಿರ್ಮಿಸದಿದ್ದರೂ ಪರವಾಗಿಲ್ಲ. ಕೊನೆ ಪಕ್ಷ ಚರಂಡಿಯ ಹೂಳು ತೆಗೆಸಿ, ನೀರು ಸರಾಗವಾಗಿ ಹರಿದುಹೋಗುವಂತೆ ಮಾಡಿ, ಸೊಳ್ಳೆಗಳ ಹಾವಳಿಗೆ ಕಡಿವಾಣ ಹಾಕಿ ನೆಮ್ಮದಿಯಿಂದ ಬದುಕಲು ಅನುವು ಮಾಡಿಕೊಡಿ ಎಂಬುದಾಗಿ ಪಾಲಿಕೆಯನ್ನು ಒತ್ತಾಯಿಸಿದರೆ, ನಿಮ್ಮ ಭಾಗದ ಸದಸ್ಯರು ಊರಿನಲ್ಲಿಲ್ಲ. ಬೆಂಗಳೂರಿಗೆ ಹೋಗಿದ್ದಾರೆ. ಅವರು ಬಂದಾದ ಮೇಲೆ ಬನ್ನಿ ಎಂದು ಪಾಲಿಕೆ ಅಧಿಕಾರಿಗಳು ಸಬೂಬು ಹೇಳುತ್ತಾರೆಂಬುದು ನಾಗರೀಕರ ದೂರಾಗಿದೆ.
ಇನ್ನೂ ಈ ಬಗ್ಗೆ ಪ್ರಜಾಪ್ರಗತಿಗೆ ಪ್ರತಿಕ್ರಯಿಸಿದ ಪಾಲಿಕೆ ಸದಸ್ಯ ಎಂ.ಹಾಲೇಶ, 40 ವರ್ಷದ ಅವಧಿಯಲ್ಲಿ ಗಾಂಧಿ ನಗರವನ್ನು ಪ್ರತಿನಿಧಿಸಿರುವ ಯಾವ ಸದಸ್ಯರೂ ಮಾಡದಷ್ಟು ಅಭಿವೃದ್ಧಿ ಕಾಮಗಾರಿಯನ್ನು ನನ್ನ ಅವಧಿಯಲ್ಲಿ ಕೈಗೊಂಡಿದ್ದೇನೆ. ನನ್ನ ವಾರ್ಡ್ ವ್ಯಾಪ್ತಿಯಲ್ಲಿ ಸಿಸಿ ರಸ್ತೆ, ಬಾಕ್ಸ್ ಚರಂಡಿ ನಿರ್ಮಾಣ, ವಾಟರ್ ಲೈನ್ ಮಾಡಿಸಿದ್ದೇನೆ. ಡ್ರೈನೇಜ್ ತೆಗೆಸಿದ್ದೇನೆ. ಆದರೆ, ಈ 5ನೇ ಕ್ರಾಸ್‍ನಲ್ಲಿ ಬಹುತೇಕರು ಚರಂಡಿ ಒತ್ತುವರಿ ಮಾಡಿಕೊಂಡು, ಜಗಲಿ, ಕಾಂಪೌಂಡ್ ನಿರ್ಮಿಸಿಕೊಂಡಿದ್ದಾರೆ. ಹೀಗಾಗಿ ಇಲ್ಲಿ ಪೌರ ಕಾರ್ಮಿಕರು ಚರಂಡಿಗೆ ಇಳಿದು ಹೂಳು ಎತ್ತಲೂ ಸಹ ಜಾಗವಿಲ್ಲವಾಗಿದೆ. ಈ ಒತ್ತುವರಿಯೇ ಚರಂಡಿ ಕಟ್ಟಿಕೊಳ್ಳಲು ಕಾರಣವಾಗಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಈಗಾಗಲೇ 1 ಮತ್ತು 4ನೇ ಕ್ರಾಸ್‍ಗಳಲ್ಲಿ ಬಾಕ್ಸ್ ಚರಂಡಿ ನಿರ್ಮಾಣ ಮಾಡಿದ್ದು, 5ನೇ ಕ್ರಾಸ್‍ನಲ್ಲೂ ಬಾಕ್ಸ್ ಚರಂಡಿ ನಿರ್ಮಿಸಿಕೊಡಲು ಸಿದ್ಧನಿದ್ದೇನೆ. ಇದಕ್ಕಾಗಿ ಪಾಲಿಕೆಯಿಂದ ಅನುದಾನವನ್ನೂ ಸಹ ಮೀಸಲಿರಿಸಿದ್ದೇನೆ. ಅಲ್ಲಿಯ ನಿವಾಸಿಗಳು ಚರಂಡಿ ಒತ್ತುವರಿ ಮಾಡಿಕೊಂಡಿರುವುದನ್ನು ತೆರವುಗೊಳಿಸಿಕೊಟ್ಟರೇ ಬಾಕ್ಸ್ ಚರಂಡಿ ಕಾಮಗಾರಿ ಮಾಡಿಸುವುದಾಗಿ ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
