ಬಳ್ಳಾರಿ:
ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃ ದ್ಧಿ ಮಂಡಳಿಯಿಂದ ಕೈಗೆತ್ತಿಕೊಳ್ಳಲಾದ ಕಾಮಗಾರಿಗಳ ಆರ್ಥಿಕ ಮತ್ತು ಭೌತಿಕ ಪ್ರಗತಿ ಪರಿಶೀಲಿಸುವ ಮತ್ತು ಮಂಡಳಿಯ ವಿವಿಧ ಚಟುವಟಿಕೆಗಳ ಸಾಕಾರಕ್ಕಾಗಿ ಮುಂದಿನ ದಿನಗಳಲ್ಲಿ “ಎಚ್‍ಕೆಆರ್‍ಡಿಬಿ ಆ್ಯಪ್” ಹೊರತರಲು ನಿರ್ಧರಿಸಲಾಗಿದೆ ಎಂದು ಎಚ್‍ಕೆಆರ್‍ಡಿಬಿ ಕಾರ್ಯದರ್ಶಿ ಮತ್ತು ಪ್ರಾದೇಶಿಕ ಆಯುಕ್ತರಾಗಿರುವ ಸುಬೋದ್ ಯಾದವ್ ಅವರು ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಎಚ್‍ಕೆಆರ್‍ಡಿಬಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಚ್‍ಕೆಆರ್‍ಡಿಬಿ ವತಿಯಿಂದ ಕೈಗೆತ್ತಿಕೊಳ್ಳಲಾದ ಕಾಮಗಾರಿಗಳನ್ನು ನಿಗದಿಪಡಿಸಿದ ಕಾಲಮಿತಿಯೊಳಗೆ ಮುಗಿಸಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಸೂಚನೆ ನೀಡಿದ ಕಾರ್ಯದರ್ಶಿ ಸುಬೋದ್ ಯಾದವ್ ಅವರು, ನಿಗದಿಪಡಿಸಿದ ಅವಧಿಯೊಳಗೆ ಮುಗಿಸದಿದ್ದಲ್ಲಿ ಮತ್ತು ಹಣವಿಟ್ಟುಕೊಂಡು ಸುಖಾಸುಮ್ಮನೆ ದಿನದೂಡುತ್ತಿದ್ದಲ್ಲಿ ಕಾಮಗಾರಿ ವಿಥ್‍ಡ್ರಾ ಮಾಡಿ ಹಣ ವಾಪಸ್ ಮಂಡಳಿಗೆ ಮರಳಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು ಎಂದರು.
ಕಾಮಗಾರಿಗಳನ್ನು ಸರಿಯಾಗಿ ಪರಿಶೀಲಿಸಿ; ಅದನ್ನು ಬಿಟ್ಟು ಫಾರ್ಮಾಲಿಟಿಗಾಗಿ ಚೆಕ್ ಮಾಡುವ ಕೆಲಸ ಮಾಡಬೇಡಿ ಎಂದು ಥರ್ಡ್‍ಪಾರ್ಟಿ ಏಜೆನ್ಸಿಗಳಿಗೆ ಪ್ರಮುಖರಿಗೆ ಖಡಕ್ ಸೂಚನೆ ನೀಡಿದ ಕಾರ್ಯದರ್ಶಿ ಸುಬೋದ್ ಯಾದವ್ ಅವರು, ತಮಗೆ ನಿಗದಿಪಡಿಸಿದ ಅವಧಿಯೊಳಗೆ ಥರ್ಡ್‍ಪಾರ್ಟಿ ಪರಿಶೀಲನೆ ಮುಗಿಸಿ ಸಂಬಂಧಿಸಿದ ಇಲಾಖೆಗಳಿಗೆ ವರದಿ ನೀಡಬೇಕು ಎಂದರು.ಥರ್ಡ್‍ಪಾರ್ಟಿ ಏಜೆನ್ಸಿಗಳು ವರದಿ ನೀಡುತ್ತಿಲ್ಲ ಎಂಬ ದೂರುಗಳು ಇನ್ಮುಂದೆ ಬರಕೂಡದು ಎಂದರು.
ಇಡೀ ಜಿಲ್ಲೆಗೆ ಸಂಬಂಧಪಟ್ಟ ಸಮಗ್ರ ಏಜೆನ್ಸಿಗಳ ಮತ್ತು ಕಾಮಗಾರಿಗಳ ಮಾಹಿತಿ ಡ್ಯಾಶ್‍ಬೋರ್ಡ್‍ನ್ನು ಜಿಲ್ಲಾಧಿಕಾರಿಗಳು ಮತ್ತು ಜಿಪಂ ಸಿಇಒ ಅವರು ನೋಡುವ ವ್ಯವಸ್ಥೆ ಮಾಡುವಂತೆ ಎಚ್‍ಕೆಆರ್‍ಡಿಬಿ ಟೆಕ್ನಿಕಲ್ ವಿಂಗ್‍ಗೆ ಸೂಚನೆ ನೀಡಿದ ಅವರು, ಇದರಿಂದ ಡಿಸಿ ಮತ್ತು ಸಿಇಒಗಳು ಯಾವ ಯಾವ ಕಾಮಗಾರಿಗಳು ಹೇಗೆ ನಡಿತಿವೆ ಮತ್ತು ಬಿಲ್ ಪೇಮೆಂಟ್ ಆಗಿದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ ಈಗಾಗಲೇ ನಮ್ಮ ಎಚ್‍ಕೆಆರ್‍ಡಿಬಿಯಿಂದ ಅನುದಾನ ನೀಡಲಾಗಿದೆ. ಸೈಟ್ ಸಮಸ್ಯೆ ಅಂತ ಹೇಳಿಕೊಂಡು ನಿಗದಿಪಡಿಸಿದ ಗುರಿ ಮುಂದೂಡಲು ಸಾಧ್ಯವಿಲ್ಲ; ಸಮಸ್ಯೆ ಬಗೆಹರಿಸಿಕೊಂಡು ಕಟ್ಟಡ ನಿರ್ಮಿಸುವುದಿದ್ದರೇ ನಿರ್ಮಿಸಿ ಇಲ್ಲದಿದ್ದರೇ ಟಾರ್ಗೆಟ್ ರದ್ದು ಮಾಡಿ ಹಣ ವಾಪಸ್ ಮಾಡಿ ಎಂದು ಹಡಗಲಿ ಲೋಕೋಪಯೋಗಿ ಅಧಿಕಾರಿಗೆ ಹೇಳಿದರು.
ಎಲ್‍ಎಲ್‍ಸಿಯಲ್ಲಿ ಏ.10ರವರೆಗೆ ನೀರಿದ್ದ ಕಾರಣ ಅಂದಾಜು ಪಟ್ಟಿ ತಯಾರಿಸಲು ಸಾಧ್ಯವಾಗಿಲ್ಲ;ಮುಂದಿನ ದಿನಗಳಲ್ಲಿ ಮಾಡುವುದಾಗಿ ನೀರಾವರಿ ಎಂಜನಿಯರ್‍ರೊಬ್ಬರು ಹೇಳಿದ್ದಕ್ಕೆ ತಾವೇಳಿದಂತೆ ಮಾಡುವುದಕ್ಕಾಗುವುದಿಲ್ಲ ಎಂದರು. ಈ ಕಾಮಗಾರಿ ಕೈ ಬಿಡುವಂತೆ ಎಚ್‍ಕೆಆರ್‍ಡಿಬಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಲೋಕೋಪಯೋಗಿ, ನಿರ್ಮಿತಿ ಕೇಂದ್ರ, ನಗರಾಭಿವೃದ್ಧಿ ಸೇರಿದಂತೆ ವಿವಿಧ ಇಲಾಖೆಗಳಡಿ ಎಚ್‍ಕೆಆರ್‍ಡಿಬಿ ವತಿಯಿಂದ ಕೈಗೆತ್ತಿಕೊಳ್ಳಲಾದ ಕಾಮಗಾರಿಗಳ ಪ್ರಗತಿ ಪರಿಶೀಲನೆಯನ್ನು ಈ ಸಂದರ್ಭದಲ್ಲಿ ನಡೆಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್, ಜಿಪಂ ಸಿಇಒ ಡಾ.ಕೆ.ವಿ.ರಾಜೇಂದ್ರ, ಎಚ್‍ಕೆಆರ್‍ಡಿ ಜಂಟಿ ನಿರ್ದೇಶಕ ಬಸವರಾಜು, ಅಪರ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ