ಹೊನ್ನಾಳಿ ಪಪಂ ಚುನಾವಣೆ: ಮೀಸಲಾತಿ ಎಫೆಕ್ಟ್: ಮಹಿಳೆಯರಿಗೆ ಸಿಂಹಪಾಲು: ಕಣದಲ್ಲಿ ಬಹುತೇಕ ಹೊಸ ಮುಖಗಳು ಪಪಂ ಗಾದಿಗೆ ಬಿಜೆಪಿ, ಕಾಂಗ್ರೆಸ್ ಟವೆಲ್!

  ಹೊನ್ನಾಳಿ:

     ಪಪಂ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ಸ್ಪರ್ಧಿಗಳಲ್ಲಿ ಟೆನ್ಷನ್ ಶುರುವಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಅಧಿಕಾರದ ಚುಕ್ಕಾಣಿ ಹಿಡಿಯಲು ಉತ್ಸುಕರಾಗಿದ್ದು, ಅಧ್ಯಕ್ಷ ಗಾದಿಗೆ ಟವೆಲ್ ಹಾಕಿವೆ. 18 ವಾರ್ಡ್‍ಗಳ ಪೈಕಿ ಕೇವಲ ಐದು ವಾರ್ಡ್‍ಗಳಲ್ಲಿ ಜೆಡಿಎಸ್ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

      ಈ ಹಿಂದೆ ಹೊನ್ನಾಳಿ ಪಪಂ 16 ವಾರ್ಡ್‍ಗಳನ್ನು ಹೊಂದಿತ್ತು. ಇದೀಗ, 18 ವಾರ್ಡ್‍ಗಳಾಗಿದ್ದು, ಹೆಚ್ಚುವರಿ ಇಬ್ಬರು ಸದಸ್ಯರು ಪಪಂ ಪ್ರವೇಶಿಸಲಿದ್ದಾರೆ. ಕಳೆದ ಪಪಂ ಚುನಾವಣೆಯಲ್ಲಿ ಬಿಜೆಪಿ 10, ಕಾಂಗ್ರೆಸ್ 5 ಹಾಗೂ ಪಕ್ಷೇತರ ಒಬ್ಬರು ಸದಸ್ಯರು ಇದ್ದರು. ಮೊದಲ ಅವಧಿಗೆ ಬಿಜೆಪಿ ಪಪಂ ಅಧ್ಯಕ್ಷ ಸ್ಥಾನ ಅಲಂಕರಿಸಿತ್ತು. ನಂತರ ನಡೆದ ರಾಜಕೀಯ ಬೆಳವಣಿಗೆಗಳ ಪರಿಣಾಮವಾಗಿ ಎರಡನೇ ಅವಧಿಗೆ ಕಾಂಗ್ರೆಸ್ ಪಪಂ ಅಧ್ಯಕ್ಷ ಸ್ಥಾನ ಪಡೆದುಕೊಂಡಿತ್ತು. ಈ ಬಾರಿಯೂ ಬಿಜೆಪಿ-ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದು, ಗೆಲುವಿಗೆ ಇನ್ನಿಲ್ಲದ ರಣತಂತ್ರಗಳನ್ನು ಅನುಸರಿಸುತ್ತಿವೆ.

ಕಣದಲ್ಲಿ 53 ಅಭ್ಯರ್ಥಿಗಳು:

      ಹೊನ್ನಾಳಿ ಪಪಂ 18 ವಾರ್ಡ್‍ಗಳಲ್ಲಿ ಆಯ್ಕೆ ಬಯಸಿ ಅಂತಿಮವಾಗಿ ಚುನಾವಣಾ ಕಣದಲ್ಲಿ ಒಟ್ಟು 53 ಅಭ್ಯರ್ಥಿಗಳು ಇದ್ದಾರೆ. 18 ವಾರ್ಡ್‍ಗಳ ಪೈಕಿ ಎರಡೂ ರಾಷ್ಟ್ರೀಯ ಪಕ್ಷಗಳು 17 ವಾರ್ಡ್‍ಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಗೆಲುವಿಗೆ ಅವಿರತವಾಗಿ ಹೋರಾಡುತ್ತಿವೆ. ಜೆಡಿಎಸ್ ಐದು ವಾರ್ಡ್‍ಗಳಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದೆ.

      ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಪಕ್ಷೇತರರು ಬಿಸಿತುಪ್ಪದಂತಾಗಿದ್ದಾರೆ. ಯಾವುದೇ ಪಕ್ಷಕ್ಕೆ ಬಹುಮತ ಲಭಿಸದ ಪಕ್ಷದಲ್ಲಿ ಪಕ್ಷೇತರರಿಗೆ ಡಿಮ್ಯಾಂಡ್ ಬರಲಿದೆ.

      ವಾರ್ಡ್‍ಗಳ ಮೀಸಲಾತಿ ಈ ಬಾರಿ ರಾಜಕೀಯ ಪಕ್ಷಗಳ ಸ್ಪರ್ಧಾಕಾಂಕ್ಷಿಗಳಿಗೆ ತಣ್ಣೀರೆರಚಿದೆ. ಮಹಿಳೆಯರಿಗೆ ಈ ಬಾರಿ ಸಿಂಹಪಾಲು ಸ್ಥಾನಗಳು ಮೀಸಲಿವೆ. ಹಾಗಾಗಿ, ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಆಯ್ಕೆಯಾಗಲಿದ್ದಾರೆ. ಪಪಂ ಮಾಜಿ ಅಧ್ಯಕ್ಷ-ಉಪಾಧ್ಯಕ್ಷರ ಪೈಕಿ ತಲಾ ಒಬ್ಬರು, ಸದಸ್ಯರ ಪೈಕಿ ಐವರು ಪುನರಾಯ್ಕೆ ಬಯಸಿದ್ದಾರೆ. ಇನ್ನುಳಿದಂತೆ ಬಹುತೇಕ ಹೊಸ ಮುಖಗಳೇ ಚುನಾವಣಾ ಕಣದಲ್ಲಿವೆ. ಎರಡೂ ರಾಷ್ಟ್ರೀಯ ಪಕ್ಷಗಳು ಈ ಬಾರಿ ನಾಮಪತ್ರ ಸಲ್ಲಿಸುವ ಅಂತಿಮ ದಿನದವರೆಗೂ ಕಾದು ನೋಡುವ ತಂತ್ರ ಅನುಸರಿಸುವ ಮೂಲಕ ವಿನೂತನ ತಂತ್ರಗಾರಿಕೆ ಮೆರೆದಿವೆ. ಅಳೆದೂ-ತೂಗಿ ಗೆಲ್ಲುವ ಅಭ್ಯರ್ಥಿಗಳಿಗೆ ಮಾತ್ರ ಟಿಕೆಟ್ ನೀಡಿವೆ.

ಪಕ್ಷೇತರರ ಸ್ಪರ್ಧೆ:

      ಕಳೆದ ಬಾರಿ ಪಪಂ ಅಧ್ಯಕ್ಷೆಯಾಗಿದ್ದ ಶ್ರೀದೇವಿ ಧರ್ಮಪ್ಪ ಈ ಬಾರಿ ಮೂರನೇ ವಾರ್ಡ್‍ನಿಂದ ಪಕ್ಷೇತರರಾಗಿ ಕಣಕ್ಕಿಳಿದಿದ್ದಾರೆ. ಅವರ ಪತಿ, ಎಪಿಎಂಸಿ ಮಾಜಿ ಅಧ್ಯಕ್ಷ ಧರ್ಮಪ್ಪ ಕೂಡ 16ನೇ ವಾರ್ಡ್‍ನಿಂದ ಪಕ್ಷೇತರರಾಗಿ ಕಣಕ್ಕಿಳಿದಿದ್ದಾರೆ.

      ಪಪಂ ಉಪಾಧ್ಯಕ್ಷೆ ಎಚ್.ಬಿ. ವೀಣಾ ಪುನರಾಯ್ಕೆ ಬಯಸಿ ಈ ಬಾರಿ ಐದನೇ ವಾರ್ಡ್‍ನಿಂದ ಸ್ಪರ್ಧಿಸಿದ್ದಾರೆ. ಕಳೆದ ಬಾರಿ ಪಪಂ ಸದಸ್ಯರಾಗಿದ್ದ ಎಚ್.ಡಿ. ವಿಜೇಂದ್ರಪ್ಪ, ಈ ಬಾರಿ 9ನೇ ವಾರ್ಡ್‍ನಿಂದ ತಮ್ಮ ಪತ್ನಿ ಸಾವಿತ್ರಮ್ಮ ಅವರನ್ನು ಕಣಕ್ಕಿಳಿಸಿದ್ದಾರೆ. ಪಪಂ ಮಾಜಿ ಸದಸ್ಯ ಪ್ರಶಾಂತ್ ಈ ಬಾರಿ 13ನೇ ವಾರ್ಡ್‍ನಿಂದ ತಮ್ಮ ಪತ್ನಿ ಪದ್ಮಾವತಿ ಅವರನ್ನು ಕಣಕ್ಕಿಳಿಸಿದ್ದಾರೆ. ಪಪಂ ಮಾಜಿ ಅಧ್ಯಕ್ಷ ನಿಂಗಪ್ಪ ಈ ಬಾರಿ 5ನೇ ವಾರ್ಡ್‍ನಿಂದ ತಮ್ಮ ಪತ್ನಿ ರೇಣುಕ ಅವರನ್ನು ಕಣಕ್ಕಿಳಿಸಿದ್ದಾರೆ. ಇನ್ನುಳಿದಂತೆ, ಪಪಂ ಮಾಜಿ ಸದಸ್ಯರಾಗಿರುವ ಎಚ್.ಬಿ. ಅಣ್ಣಪ್ಪ, ಮಲ್ಲೇಶಪ್ಪ, ಕೆ.ಪಿ. ಕುಬೇಂದ್ರಪ್ಪ, ಚಮನ್‍ಸಾಬ್, ಎ.ಕೆ. ಮೈಲಪ್ಪ ಪುನರಾಯ್ಕೆ ಬಯಸಿ ಕಣಕ್ಕಿಳಿದಿದ್ದಾರೆ. ಪಪಂ ಮಾಜಿ ಸದಸ್ಯ ಚಂದ್ರಪ್ಪ ಮಡಿವಾಳ 13ನೇ ವಾರ್ಡ್‍ನಿಂದ ತಮ್ಮ ಪತ್ನಿ ರೇಣುಕಾ ಅವರನ್ನು ಪಕ್ಷೇತರರಾಗಿ ಕಣಕ್ಕಿಳಿಸಿದ್ದಾರೆ.

      ಒಟ್ಟಿನಲ್ಲಿ, ಕಳೆದ ವಿಧಾನಸಭಾ ಚುನಾವಣೆಯಂತೆ ಈ ಬಾರಿ ಪಪಂ ಚುನಾವಣೆ ಜಿದ್ದಿನಿಂದ ಕೂಡಿದೆ. ಗೆಲ್ಲುವವರು ಅಲ್ಪಮತಗಳ ಅಂತರದಿಂದ ಗೆಲ್ಲಬಹುದು ಎಂಬುದು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿರುವ ಮಾತು.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap