ತುಮಕೂರು:

ಹಲವು ಕುಟುಂಬಗಳು ಬೀದಿಪಾಲು: ಸಹಾಯಕ್ಕೆ ನಿಂತ ಇಕ್ಬಾಲ್, ಅಹಮದ್
ಇತ್ತೀಚಿನ ಸತತ ಮಳೆಯಿಂದಾಗಿ ತುಮಕೂರು ನಗರದ ಮರಳೂರು ದಿಣ್ಣೆಯಲ್ಲಿ 10 ಮನೆಗಳು ಹಾನಿಗೊಳಗಾಗಿವೆ. ಇವುಗಳಲ್ಲಿ 8 ಮನೆಗಳು ಸಂಪೂರ್ಣ ಕುಸಿತವಾಗಿದ್ದು, ಈ ಮನೆಗಳಲ್ಲಿದ್ದವರು ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ.
ನ.19 ರಂದು ರಾತ್ರಿ ಸುಮಾರು 1 ಗಂಟೆ ಸಮಯಕ್ಕೆ ಮರಳೂರು ದಿಣ್ಣೆ 5ನೇ ಕ್ರಾಸ್‍ನಲ್ಲಿರುವ ಅಮೀನಾಬಿ, ಮುನೀರ್ ಎಂಬುವರಿಗೆ ಸೇರಿದ ಮನೆ ಕುಸಿದು ಬಿದ್ದಿದೆ. ತಡರಾತ್ರಿಯಲ್ಲಿ ನಿದ್ರೆಯಲ್ಲಿರುವಾಗ ಈ ದುರಂತ ಸಂಭವಿಸಿದ್ದು, ಅದೃಷ್ಟವಶಾತ್ ಯಾರಿಗೂ ಹಾನಿಯಾಗಿಲ್ಲ. ಆದರೆ ಮನೆ ಕುಸಿತವಾಗಿ ನಿರಾಶ್ರಿತರಾದ ಆ ಕುಟುಂಬ ದಿಕ್ಕೇ ತೋಚದಾಗಿ ಮನೆಯ ಹೊರಗಡೆ ಕುಳಿತಿತ್ತು. ಅಲ್ಲಿನ ಸಮಾಜ ಸೇವಕ ಮಕ್ದುಂ ಅಲಿ ಅವರಿಗೆ ಮಾಹಿತಿ ತಿಳಿದು ಕೂಡಲೇ ಸ್ಥಳಕ್ಕೆ ತೆರಳಿ ಬೇರೆಯವರ ಮನೆಯಲ್ಲಿ ಆಶ್ರಯ ಕಲ್ಪಿಸುವಷ್ಟರ ಮಟ್ಟಿಗೆ ತನ್ನ ಕೈಲಾದ ಸಹಾಯ ಮಾಡಿದ್ದಾರೆ.
ಹೀಗೆ ನವೆಂಬರ್ ತಿಂಗಳಿನಲ್ಲಿ ಎಡೆಬಿಡದೆ ಸುರಿದ ಮಳೆಯಿಂದಾಗಿ ಆಗಾಗ್ಗೆ ಇಲ್ಲಿ ಮನೆಗಳ ಕುಸಿತ ಸಂಭವಿಸುತ್ತಲೇ ಇರುತ್ತದೆ. 3ನೇ ಕ್ರಾಸ್, 4, 5, 7 ಹಾಗೂ 9ನೇ ಕ್ರಾಸ್ ಸೇರಿ ಈ ಬಡಾವಣೆಯಲ್ಲಿ 10 ಮನೆಗಳು ಈ ಅವಧಿಯಲ್ಲಿ ಹಾನಿಗೊಳಗಾಗಿವೆ. ಕೆಲವು ಹೆಂಚಿನ ಮನೆಗಳಾದರೆ ಇನ್ನು ಕೆಲವು ಶೀಟಿನ ಮನೆಗಳು. ಹಾನಿಗೊಳಗಾದವರಲ್ಲಿ 6ಮಂದಿ ಮಹಿಳೆಯರೂ ಸೇರಿದ್ದಾರೆ.
ಇವರೆಲ್ಲ ಕೂಲಿ ಕಾರ್ಮಿಕ ವರ್ಗಕ್ಕೆ ಸೇರಿದವರು. ಕೆಲವರು ಸಿಮೆಂಟ್ ಅಂಗಡಿಯಲ್ಲಿ ಮೂಟೆ ಹೊರುವ, ದಿನಗೂಲಿ ವ್ಯಾಪಾರದಲ್ಲಿ ತೊಡಗಿರುವ, ಮನೆ ನಿರ್ಮಾಣದಲ್ಲಿ ನಿರತರಾಗಿರುವ, ಮನೆ ಕೆಲಸದ ಮಹಿಳೆಯರು ಸೇರಿದ್ದಾರೆ. ಒಂದು ಕುಟುಂಬದಲ್ಲಿ ಅಂಗವಿಕಲ ಮಗವೂ ಇದೆ. ಕೆಲವರು ಸಂಬಂಧಿಕರ ಆಶ್ರಯದಲ್ಲಿ ಬದುಕು ಸಾಗಿಸುತ್ತಿದ್ದರೆ ಇನ್ನು ಕೆಲವರು ಯಾರಾದರೂ ಸಹಾಯ ಮಾಡಬಹುದೆ ಎಂಬ ನಿರೀಕ್ಷೆಯಲ್ಲಿ ದಿನದೂಡುತ್ತಿದ್ದಾರೆ. ಒಂದಷ್ಟು ಜನರಿಗೆ ಅಲ್ಲಿನ ಸಮಾಜ ಸೇವಕ ಮಕ್ದುಂ ಅಲಿ ಆಶ್ರಯ ಕಲ್ಪಿಸಿ ತನ್ನ ಕೈಲಾದ ನೆರವು ನೀಡಿದ್ದಾರೆ.
ಸಹಾಯಕ್ಕೆ ಬಂದ ಇಕ್ಬಾಲ್ ಅಹಮದ್: ಮಕ್ದುಂ ಅಲಿ ಅವರು ಅಲ್ಲಿನ ದೃಶ್ಯಗಳನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು. ಇದನ್ನು ಗಮನಿಸಿದ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಹಾಗೂ ಸಮಾಜ ಸೇವಕ ಇಕ್ಬಾಲ್ ಅಹಮದ್ ಅವರು ಸ್ಥಳಕ್ಕೆ ತೆರಳಿ ಪ್ರತಿಯೊಂದು ಹಾನಿಗೊಳಗಾದ ಮನೆಗಳನ್ನು ವೀಕ್ಷಿಸಿದ್ದರು. ತರುವಾಯ ಮನೆಯವರೊಂದಿಗೆ ಚರ್ಚಿಸಿ ಅಗತ್ಯ ಪರಿಕರ ಒದಗಿಸುವುದಾಗಿ ಭರವಸೆ ನೀಡಿ ನಿರಾಶ್ರಿತರಿಗೆ ಸಾಂತ್ವನ ಹೇಳಿದ್ದರು.
ಇದಾದ ಒಂದೆರಡು ದಿನಗಳಲ್ಲಿಯೇ 10 ಮಂದಿ ನಿರಾಶ್ರಿತರ ಮನೆಗಳಿಗೆ ಇಟ್ಟಿಗೆ ಹಾಗೂ ಶೀಟ್ ಒದಗಿಸುವಲ್ಲಿ ನೆರವಾಗಿದ್ದಾರೆ. ಎಲ್ಲವನ್ನೂ ಒಬ್ಬರೆ ಮಾಡಲು ಸಾಧ್ಯವಾಗದು. ಆದರೆ ಸರ್ಕಾರಗಳು ಇಂತಹ ಪರಿಸ್ಥಿತಿಯಲ್ಲಿ ನೆರವಿಗೆ ಬರಬೇಕು ಎನ್ನುತ್ತಾರೆ ಮಕ್ದುಂ. ಅವರೆ ಹೇಳುವ ಪ್ರಕಾರ ತುಮಕೂರು ಮಹಾನಗರ ಪಾಲಿಕೆ ಮತ್ತು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿದೆ. ಆದರೆ ಈವರೆಗೂ ಇನ್ನೂ ಯಾವುದೇ ಪರಿಹಾರವಾಗಲಿ, ಭರವಸೆಯಾಗಲಿ ಸಿಕ್ಕಿಲ್ಲ. ನಗರ ಪಾಲಿಕೆಯವರು ಇಂತಹ ಸಮಸ್ಯೆಗಳಿಗೆ ಏನೂ ಮಾಡಲಾಗುವುದಿಲ್ಲ ಎಂದಿದ್ದಾರೆ. ಹೀಗಾದರೆ ಬಡವರ ಗತಿ ಏನು ಎಂದು ಅವರು ಪ್ರಶ್ನಿಸುತ್ತಾರೆ.
ಸಾಮಾಜಿಕ ಜಾಲತಾಣದಲ್ಲಿನ ದೃಶ್ಯ ಗಮನಿಸಿ ಇಕ್ಬಾಲ್ ಅಹಮದ್ ಅವರು ಮಾನವೀಯತೆ ಮೆರೆದಿದ್ದಾರೆ. ಇನ್ನೂ ಎರಡು ಮನೆಗಳು ಹಾನಿಗೊಳಗಾಗುವ ಹಂತದಲ್ಲಿವೆ. ಹೀಗಾಗಿ ಸಾಮಾಜಿಕ ಕಾಳಜಿ ಉಳ್ಳವರು ಇವರ ನೆರವಿಗೆ ಧಾವಿಸಬೇಕು ಎಂದು ಮನವಿ ಮಾಡಿದ್ದಾರೆ.
ಪರಿಹಾರಕ್ಕೆ ಮನವಿ
ನವೆಂಬರ್ 19 ರಂದು ಸುರಿದ ಮಳೆಗೆ ನಮ್ಮ ಮನೆ ಬಿದ್ದು ಹೋಗಿರುತ್ತದೆ. ಮನೆ ಕಟ್ಟಿಕೊಳ್ಳಲಿಕ್ಕು ಅಸಹಾಯಕ ಸ್ಥಿತಿಯಲ್ಲಿದ್ದೇವೆ. ಸರ್ಕಾರದ ವತಿಯಿಂದ ಬರಬಹುದಾದ ಪರಿಹಾರ ದೊರಕಿಸಿಕೊಡಿ ಎಂದು ಮರಳೂರು ದಿಣ್ಣೆ 29 ನೇ ವಾರ್ಡ ಗೆ ಸೇರಿದ 4ನೇ ಕ್ರಾಸ್ ನ ನಸೀಮ್ ಉನ್ನೀಸಾ ಅವರು ನವೆಂಬರ್ 29 ರಂದು ಜಿಲ್ಲಾಧಿಕಾರಿಗಳ ಕಚೇರಿಗೆ ಮನವಿ ಸಲ್ಲಿಸಿದ್ದಾರೆ. ಕೆಲವರು ಮಹಾನಗರ ಪಾಲಿಕೆಗೂ ಅರ್ಜಿ ಸಲ್ಲಿಸಿರುತ್ತಾರೆ. ಆದರೆ ಎಲ್ಲಿಯೂ ಭರವಸೆ ಸಿಕ್ಕಿಲ್ಲ. ಮನೆ ಕಳೆದುಕೊಂಡ ಕೆಲವರು ಪರಿಚಿತರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ. ಬೀದಿಗೆ ಬಿದ್ದ ನಿರಾಶ್ರಿತರ ನೆರವಿಗೆ ಸಮಾಜ ಸೇವಕರಾದ ಇಕ್ಬಾಲ್ ಅಹಮದ್ ಹಾಗೂ ಮಕ್ದುಮ್ ಅವರುಗಳು ನೆರವಿಗೆ ಬಂದಿದ್ದು ಕೊಂಚ ಸಮಾಧಾನ ತರಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








