ಬೆಳಗಾವಿ
ಹುಬ್ಬಳ್ಳಿಯ ಪಾಳಾ ಗ್ರಾಮದಲ್ಲಿ ಮುಸ್ಲಿಂ ಸಮಾವೇಶದಲ್ಲಿ ಹತ್ತು ಸಾವಿರ ಕೋಟಿ ಕೊಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿರುವುದು ಸದನದಲ್ಲಿ ಕೋಲಾಹಲಕ್ಕೆ ಕಾರಣವಾಯಿತು. ಬುಧವಾರ ಸದನದಲ್ಲಿ ಈ ವಿಚಾರವನ್ನು ಪ್ರಸ್ತಾಪ ಮಾಡಿದ ಬಿಜೆಪಿ ಸದಸ್ಯ ಸುನೀಲ್ ಕುಮಾರ್, ಅಧಿವೇಶನ ನಡೆಯುವಾಗ ಸಿಎಂ ಈ ರೀತಿ ಅನುದಾನ ಘೋಷಣೆ ಮಾಡುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಅಲ್ಲದೆ ಮುಖ್ಯಮಂತ್ರಿಗಳ ವಿವರಣೆಗೆ ಆಗ್ರಹಿಸಿದರು.
ಇದಕ್ಕೆ ಧ್ವನಿಗೂಡಿಸಿದ ವಿರೋಧ ಪಕ್ಷದ ನಾಯಕ ಆರ್ ಅಶೋಕ್, ಸರ್ಕಾರಕ್ಕೆ ರೈತರಿಗೆ ಅನುದಾನ ಕೊಡಲು ಹಣ ಇಲ್ಲ. ಅಲ್ಲಿ ಹತ್ತು ಸಾವಿರ ಕೋಟಿ ಕೊಡುತ್ತೀರಿ. ರೈತರ ಶಾಪ ತಟ್ಟಿದರೆ ಸರ್ಕಾರ ಉಳಿಯಲ್ಲ ಎಂದು ಟೀಕೆ ಮಾಡಿದರು.
ಆದರೆ ವಿರೋಧ ಪಕ್ಷಗಳ ಆರೋಪಕ್ಕೆ ಆಡಳಿತ ಪಕ್ಷದ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರ ನಡುವೆ ತೀವ್ರ ವಾಕ್ಸಮರಕ್ಕೆ ಕಾರಣವಾಯಿತು. ಆಡಳಿತ ಪಕ್ಷದ ಉತ್ತರಕ್ಕೆ ತೃಪ್ತಿಯಾಗದ ವಿರೋಧ ಪಕ್ಷದ ಸದಸ್ಯರು ಸಭಾತ್ಯಾಗ ಮಾಡಿದರು.
ಆರ್ ಅಶೋಕ್ ಮಾತನಾಡಿ, ನಾವು ಅಧಿಕಾರದಲ್ಲಿದ್ದಾಗ ಸದನ ನಡೆಯುವಾಗ ಎಲ್ಲೂ ಈ ರೀತಿಯ ಘೋಷಣೆ ಮಾಡಿಲ್ಲ. ಹತ್ತು ಸಾವಿರ ಕೋಟಿ ಬಜೆಟ್ ನಲ್ಲಿ ಅನುದಾನ ಕೊಡುತ್ತೇನೆ ಎಂದು ಸಿಎಂ ಘೋಷಣೆ ಮಾಡಿದ್ದಾರೆ. ಅಧಿವೇಶನ ನಡೆಯುವಾಗ ಈ ರೀತಿ ಮಾತನಾಡುವುದು ಸರಿಯಲ್ಲ.
ಈ ರೀತಿ ಘೋಷಣೆ ಮಾಡಿದರೆ ಅಧಿವೇಶನ ಏಕೆ ನಡೆಯಬೇಕು? ಸದನದಲ್ಲಿ ಘೋಷಣೆ ಮಾಡಿ. ಹೊರಗಡೆ ಘೋಷಣೆ ಮಾಡುವುದು ರಾಜಕೀಯ. ತಾಕತ್ತು ನಮಗೂ ಇದೆ. ನಮ್ಮಲ್ಲೂ 85 ಜನರಿದ್ದಾರೆ. ಬರದಿಂದ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಎರಡು ಸಾವಿರ ಕೋಟಿ ಬಿಡುಗಡೆ ಮಾಡಿ ಎಂದು ಕೇಳುತ್ತಿದ್ದೇವೆ. ಶಿವಪ್ಪ ಎಂಬ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅವನಿಗೆ ಪರಿಹಾರ ಕೊಡಲು ನಿಮಗೆ ಯೋಗ್ಯತೆ ಇಲ್ಲ. ಅಲ್ಲಿ ಹತ್ತು ಸಾವಿರ ಕೋಟಿ ಕೊಡುತ್ತೀರಿ. ರೈತರ ಶಾಪ ತಟ್ಟಿದರೆ ಸರ್ಕಾರ ಉಳಿಯಲ್ಲ ಎಂದು ಕಿಡಿಕಾರಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ