108 ಆ್ಯಂಬ್ಯುಲೆನ್ಸ್ ಸೇವೆ ಇಲ್ಲ..!

ಪಾವಗಡ:


ಪಾವಗಡ ಸರಕಾರಿ ಆಸ್ಪತ್ರೆಯ ಆ್ಯಂಬ್ಯುಲೆನ್ಸ್ ತುರ್ತು ಸಂದರ್ಭದಲ್ಲಿ ಸಾಮಾನ್ಯ ವರ್ಗಕ್ಕೆ ಸಿಗುತ್ತಿಲ್ಲ. ಸಿಕ್ಕರೂ ರೂ. 5 ಸಾವಿರದವರೆಗೆ ಬಾಡಿಗೆ ತೆತ್ತಬೇಕಾದ ದುಸ್ಥಿತಿ ನಮಗೆ ನಿರ್ಮಾಣವಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಲಕ್ಷ್ಮೀನಾರಾಯಣ್ ಆವೇದನೆ ವ್ಯಕ್ತಪಡಿಸಿದ್ದಾರೆ.

ಪಟ್ಟಣದ ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಕಿರಣ್‍ರವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು, ಪಾವಗಡ ಸರಕಾರಿ ಆಸ್ಪತ್ರೆಯಲ್ಲಿ ಎರಡು ಆ್ಯಂಬ್ಯುಲೆನ್ಸ್ ಇವೆ. ಜೊತೆಗೆ ಸೋಲಾರ್ ಸಿಎಸ್‍ಆರ್ ಅನುದಾನದಲ್ಲಿ ಎರಡು ಹೊಸ ಆ್ಯಂಬ್ಯುಲೆನ್ಸ್‍ಗಳನ್ನೂ ಸಹ ನೀಡಲಾಗಿದೆ.

ಆದರೆ 108 ಗೆ ಕರೆ ಮಾಡಿ ತುರ್ತು ಪರಿಸ್ಥಿಯ ಬಗ್ಗೆ ಮಾಹಿತಿ ನೀಡಿದರೂ ಬಡ-ಮಧ್ಯಮ ವರ್ಗಕ್ಕೆ ಆ್ಯಂಬ್ಯುಲೆನ್ಸ್ ಸೇವೆ ಸಿಗುತ್ತಿಲ್ಲ. ಒಂದು ವೇಳೆ ತುಮಕೂರು ಅಥವಾ ಬೆಂಗಳೂರಿಗೆ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಬೇಕಾದ ತುರ್ತು ಸಂದರ್ಭದಲ್ಲಿ ಸರಕಾರಿ ಆದೇಶದಂತೆ 1800 ರೂ. ಮಾತ್ರ ಪಡೆಯಬೇಕು.

ಅದನ್ನು ಬಿಟ್ಟು 5 ಸಾವಿರ ರೂ. ಡಿಸೇಲ್‍ಗೆ ಕೊಡಿ ಎಂದು ಕೇಳುತ್ತಾರೆ. ಮಧ್ಯಮ ವರ್ಗದ ಜನತೆಗೆ ಸರಕಾರಿ ಆಸ್ಪತ್ರೆಯ ಸೇವೆ ಬಹಳ ದುಬಾರಿಯಾಗಿದ್ದು, ಇಂತಹ ದುರವಸ್ಥೆ ಬದಲಾಗದಿದ್ದಲ್ಲಿ ಹೋರಾಟ ಅನಿವಾರ್ಯ ಎಂದು ಕರವೇ ಅಧ್ಯಕ್ಷ ಲಕ್ಷ್ಮೀ ನಾರಾಯಣ ತಿಳಿಸಿದ್ದಾರೆ.

ತರುಣ್ ಮಾತನಾಡಿ, ರಾಜಕಾರಣೆಗಳು, ಹಣವಂತರು ಬರೀ ಕೈ ಕಾಲು ನೋವು ಎಂದರೆ ಸಾಕು ತಕ್ಷಣ ಆ್ಯಂಬ್ಯುಲೆನ್ಸ್ ಸೇವೆ ಸುಲಭವಾಗಿ ಸಿಗುತ್ತೆ. ಅವರಿಗೆ ತುಮಕೂರು, ಬೆಂಗಳೂರಿಗೆ ಬೇಕಾದರೂ ಉಚಿತ ಸೇವೆ ನೀಡುತ್ತಾರೆ. ಆದರೆ ಸಾರ್ವಜನಿಕರಿಗೆ ಮಾತ್ರ ತುರ್ತು ಪರಿಸ್ಥಿತಿಯಲ್ಲಿ 108 ಸೇವೆ ಹಗಲು ಕನಸಾಗಿ ಪರಿಣಮಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೌದು ಕಳೆದ ವಾರ ತಾಲ್ಲೂಕಿನ ಪೆಮ್ಮನಹಳ್ಳಿ ಗ್ರಾಮದ ಗೊಲ್ಲರ ಹಟ್ಟಿಯಲ್ಲಿ ಅಮಾನವೀಯ ಘಟನೆ ನಡೆದಿದೆ. 108 ಸೇವೆ ಸಿಗದೆ ಲಕ್ಷ್ಮಮ್ಮ ಕೋಂ ಚಿತ್ತಯ್ಯ ಗರ್ಭಿಣಿಯೋರ್ವರು ಸಂಜೆ 6 ಗಂಟೆಯಿಂದ ಆ್ಯಂಬ್ಯುಲೆನ್ಸ್‍ಗೆ ಕರೆ ಮಾಡಿ, ತನ್ನ ಪ್ರಸವ ವೇದನೆಯ ಬಗ್ಗೆ ಮಾಹಿತಿ ನೀಡಿದರೂ ಅವರ ತುರ್ತು ಸಮಸ್ಯೆಗೆ ಸ್ಪಂದನವೆ ಇಲ್ಲವಾಗಿದೆ.

ವಿಧಿ ಇಲ್ಲದೆ ಆಕೆ ಪೆಮ್ಮನಹಳ್ಳಿ ಗೊಲ್ಲರ ಹಟ್ಟಿಯಿಂದ ಪ್ರಸವ ವೇದನೆಯಿಂದ ನರಳುತ್ತಾ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುವಾಗ ಮದ್ದಿಬಂಡೆ ಗ್ರಾಮದ ಬಳಿ ರಾತ್ರಿ 11 ಗಂಟೆ ಸಮಯದಲ್ಲಿ ನಡು ರಸ್ತೆಯಲ್ಲೆ ಮಗುವಿಗೆ ಜನ್ಮ ನೀಡಿದ ಅಮಾನವೀಯ ಘಟನೆ ನಡೆದಿದೆ. ಅಕಸ್ಮಾತ್ ಅಚಾತುರ್ಯವಾಗಿ ತಾಯಿ-ಮಗುವಿನ ಪ್ರಾಣಕ್ಕೆ ಅಪಾಯವಾಗಿದ್ದರೆ ಯಾರು ಹೊಣೆ?

ಈ ಘಟನೆಯನ್ನು ಕಂಡರೆ ಪಾವಗಡ ಸರಕಾರಿ ಆಸ್ಪತ್ರೆಗಳಲ್ಲಿರುವ ಆ್ಯಂಬ್ಯುಲೆನ್ಸ್‍ಗಳು ಯಾವ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿವೆ ಎಂಬುದನ್ನು ನಾವಿಲ್ಲಿ ಕಾಣಬಹುದಾಗಿದೆ.

108 ಸೇವೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ತುಮಕೂರು ಜಿಲ್ಲಾಧಿಕಾರಿಗಳ ವ್ಯಾಪ್ತಿಗೆ ಒಳಪಟ್ಟಿದೆ. ಸಮಸ್ಯೆ ಇದ್ದಲ್ಲಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಬಗೆಹರಿಸುವ ಪ್ರಯತ್ನ ಮಾಡುತ್ತೇವೆ.

-ಡಾ.ಕಿರಣ್, ತಾಲ್ಲೂಕು ಆಡಳಿತ ವೈದ್ಯಾಧಿಕಾರಿ, ಪಾವಗಡ.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link