ಮುಂಬೈ:
ಸ್ಥಳೀಯ ರೈಲುಗಳಲ್ಲಿಜುಲೈ 11, 2006 ರಂದು ನಡೆದ ಏಳು ಸ್ಫೋಟಗಳು ಇಡೀ ದೇಶವನ್ನು ಬೆಚ್ಚಿಬೀಳಿಸಿದವು. ಸುಮಾರು 19 ವರ್ಷಗಳ ನಂತರ, ಬಾಂಬೆ ಹೈಕೋರ್ಟ್ ಈ ಪ್ರಕರಣದಲ್ಲಿ ಪ್ರಮುಖ ತೀರ್ಪು ನೀಡಿದೆ. ನ್ಯಾಯಾಲಯವು 12 ಜನರನ್ನು ಖುಲಾಸೆಗೊಳಿಸಿ, ಅವರನ್ನು ನಿರಪರಾಧಿಗಳು ಎಂದು ಘೋಷಿಸಿದೆ. ಪ್ರಕರಣವನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ಸಂಪೂರ್ಣವಾಗಿ ವಿಫಲವಾಗಿದೆ ಎಂದು ನ್ಯಾಯಾಲಯ ಹೇಳಿದೆ. 2006ರ ಜುಲೈ 11ರಂದು ಮುಂಬೈ ರೈಲುಗಳಲ್ಲಿ ಸಂಭವಿಸಿದ ಸರಣಿ ಸ್ಫೋಟಗಳಲ್ಲಿ 188ಮಂದಿ ಬಲಿಯಾಗಿದ್ದರು.
ಕಮಲ್ ಅಹ್ಮದ್ ಅನ್ಸಾರಿ (37), ತನ್ವೀರ್ ಅಹ್ಮದ್ ಅನ್ಸಾರಿ (37), ಮೊಹಮ್ಮದ್ ಫೈಸಲ್ ಶೇಕ್ (36), ಇತೇಶಂ ಸಿದ್ದಿಕಿ (30), ಮೊಹಮ್ಮದ್ ಮಾಜಿದ್ ಶಫಿ (32), ಶೇಕ್ ಅಲಾಂ ಶೇಕ್ (41), ಮೊಹಮ್ಮದ್ ಸಾಜಿದ್ ಅನ್ಸಾರಿ (34), ಮುಜಾಮಿಲ್ ಶೇಕ್ (27), ಸೋಹಿಲ್ ಮೊಹಮ್ಮದ್ ಶೇಕ್ (43), ಜಮೀರ್ ಅಹ್ಮದ್ ಶೇಕ್ (36), ನಾವೆದ್ ಹುಸೇನ್ ಖಾನ್ (30) ಮತ್ತು ಆಸಿಫ್ ಖಾನ್ (38) ಆರೋಪಿಗಳು. 2006ರ ಜುಲೈ 11ರಂದು ಮುಂಬೈಯ ಪಶ್ಚಿಮ ರೈಲುಗಳಲ್ಲಿ 15 ನಿಮಿಷಗಳ ಅಂತರದಲ್ಲಿ ಸರಣಿ ಬಾಂಬ್ ಸ್ಫೋಟ ನಡೆದಿದ್ದು, ಘಟನೆಯಲ್ಲಿ ಒಟ್ಟು 188 ಮಂದಿ ಕೊನೆಯುಸಿರೆಳೆದಿದ್ದರು. ಚರ್ಚ್ ಗೇಟ್ ಬೊರಿವಲಿ ರೈಲಿನಲ್ಲಿ 6.20ಕ್ಕೆ ಮೊದಲ ಸ್ಫೋಟ ಸಂಭವಿಸಿತ್ತು. ನಂತರ ಅದೇ ಸಮಯಕ್ಕೆ ಬಾಂದ್ರಾ- ಖಾರ್ ನಡುವೆ ಸಂಚರಿಸುತ್ತಿದ್ದ ರೈಲಿನಲ್ಲಿ ಸ್ಫೋಟವಾಗಿದ್ದು, ಇನ್ನುಳಿದಂತೆ ಜೋಗೇಶ್ವರಿ, ಮಾಹೀಂ, ಮೀರಾ ರೋಡ್-ಭಯಾಂದರ್, ಮಾಟುಂಗಾ-ಮಾಹೀಮ್ ಮತ್ತು ಬೊರಿವಲಿ ರೈಲುಗಳಲ್ಲಿ ಸ್ಫೋಟ ಸಂಭವಿಸಿತು.
ವಿಚಾರಣಾ ನ್ಯಾಯಾಲಯದ ಆದೇಶವನ್ನು ಬದಿಗಿಟ್ಟು, ನ್ಯಾಯಮೂರ್ತಿ ಅನಿಲ್ ಕಿಲೋರ್ ಮತ್ತು ನ್ಯಾಯಮೂರ್ತಿ ಶ್ಯಾಮ್ ಚಂದಕ್ ಅವರಿದ್ದ ಹೈಕೋರ್ಟ್ ಪೀಠ, ಆರೋಪಿಗಳ ವಿರುದ್ಧದ ಪ್ರಕರಣವನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ “ಸಂಪೂರ್ಣವಾಗಿ ವಿಫಲವಾಗಿದೆ” ಎಂದು ಹೇಳಿದೆ. ಆರೋಪಿಗಳ ವಿರುದ್ಧದ ಪ್ರಕರಣವನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ಸಂಪೂರ್ಣವಾಗಿ ವಿಫಲವಾಗಿದೆ. ಆರೋಪಿಗಳು ಅಪರಾಧ ಮಾಡಿದ್ದಾರೆ ಎಂದು ನಂಬುವುದು ಕಷ್ಟ. ಆದ್ದರಿಂದ, ಅವರ ಅಪರಾಧವನ್ನು ರದ್ದುಗೊಳಿಸಲಾಗಿದೆ ಎಂದು ಪೀಠ ಆದೇಶ ನೀಡಿದೆ. ಪ್ರಕರಣದ ತನಿಖೆಯನ್ನು ಭಯೋತ್ಪಾದಕ ನಿಗ್ರಹ ದಳಕ್ಕೆ (ATS) ಹಸ್ತಾಂತರಿಸಿದ ಮೇಲೆ ಎಟಿಎಸ್ ಇಂಡಿಯನ್ ಮುಜಾಹಿದೀನ್ ಗೆ ಸೇರಿದ 13 ಜನರನ್ನು ಬಂಧಿಸಿತ್ತು. ಓರ್ವ ಆರೋಪಿ ಕೋವಿಡ್ ನಿಂದ ಮೃತಪಟ್ಟಿದ್ದ.








