13 ವರ್ಷದ ಬಾಲಕಿ ಸಾವು: 2 ತಿಂಗಳ ಬಳಿಕ ಸಾವಿನ ರಹಸ್ಯ ಬಯಲು

ಬೆಂಗಳೂರು

     ನಗರದಲ್ಲಿ ನಡೆದ ಅದೊಂದು ಬಾಲಕಿ ಕೊಲೆ ಕೇಸ್​ ತಿಲಕನಗರ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ. ಗರ್ಗಿ ಮುರುಳೀಧರ್ ನಿಗೂಢವಾಗಿ ಸಾವನ್ನಪ್ಪಿದ 13 ವರ್ಷದ ಬಾಲಕಿ. ನಿದ್ದೆಗೆ ಜಾರಿದ್ದ ವೇಳೆಯೇ ಗರ್ಗಿ ಮೃತಪಟ್ಟಿದ್ದಳು. ಹಾಗಿದ್ದರೆ ಬಾಲಕಿಯನ್ನು ಕೊಲೆ ಮಾಡಿದ್ದು ಯಾರು ಎಂಬ ಹಲವು ಅನುಮಾಗಳು ಹುಟ್ಟಿಕೊಂಡಿದ್ದವು. ಮೊದಲು ಅಸಹಜ ಸಾವು ಅಂದುಕೊಂಡಿದ್ದ ಪೊಲೀಸರಿಗೆ ಪಿಎಂ ಹಾಗೂ ಎಫ್​ಎಸ್​ಎಲ್ ವರದಿಯಲ್ಲಿ​ ಕೊಲೆ ವಿಚಾರ ಬೆಳಕಿಗೆ ಬಂದಿದೆ.

   ಮುರುಳೀಧರ್ ಹಾಗೂ ಶೃತಿ ದೇಶಪಾಂಡೆ ದಂಪತಿಯ ಒಬ್ಬಳೇ ಮಗಳು ಗರ್ಗಿ. ತಿಲಕನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜಯನಗರ ಉಷಾ ಅಪಾರ್ಟ್ಮೆಂಟ್​ನಲ್ಲಿ ವಾಸವಾಗಿದ್ದರು. ಮೃತ ಗರ್ಗಿ ಖಾಸಗಿ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದಳು.

   ಬೇಸಿಗೆ ರಜೆ ಹಿನ್ನೆಲೆ ಎರಡು ತಿಂಗಳು ಟ್ಯೂಷನ್​ಗೆ ತೆರಳುತ್ತಿದ್ದ ಗರ್ಗಿ, ಮೇ 22 ರಂದು ಬೆಳಿಗ್ಗೆ 8:45 ಅಮ್ಮನ ಜೊತೆ ಅಶೋಕ ನಗರದಲ್ಲಿರುವ ತಾತನ ಮನೆಗೆ ಹೋಗಿದ್ದಾಳೆ. ಸಂಜೆ 5:30ಕ್ಕೆ ತಾಯಿ ಶೃತಿ ದೇಶಪಾಂಡೆ ಹಾಗೂ ಗರ್ಗಿ ಮುರುಳೀಧರ್ ವಾಪಸ್ ಆಗಿದ್ದಾರೆ. ಸಂಜೆ 7 ಕ್ಕೆ ಶೃತಿ ದೇಶಪಾಂಡೆ ಮತ್ತು ಮಗಳು ಗರ್ಗಿ ಹಾಗೂ ಶೃತಿ ಸಹೋದರಿ ಚಾಟ್ಸ್ ತಿನ್ನಲು ಹೊರಗೆ ಹೋಗಿದ್ದಾರೆ. ವಾಪಸ್ 8 ಗಂಟೆಗೆ ಬಂದಿದ್ದು, ರಾತ್ರಿ 10:30 ಕ್ಕೆ ರೂಂಗೆ ಹೋಗಿ ಮಲಗಿಕೊಂಡಿದ್ದಾಳೆ. ಎಂದಿನಂತೆ ಬೆಳಿಗ್ಗೆ 7 ಗಂಟೆಗೆ ಪೋಷಕರು ನೋಡಿದಾಗ ಗರ್ಗಿ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ.

   ಘಟನೆ ಸಂಬಂಧ ತಿಲಕನಗರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ದಾಖಲಾಗಿತ್ತು. ಯುಡಿಆರ್ ದಾಖಲಿಸಿಕೊಂಡು ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿತ್ತು. ಆದರೆ 2 ತಿಂಗಳ ನಂತರ ಪಿಎಂ ಮತ್ತು ಎಫ್​ಎಸ್​ಎಲ್​​ ವರದಿಯಲ್ಲಿ ಕೊಲೆ ವಿಚಾರ ಬೆಳಕಿಗೆ ಬಂದಿದೆ.

   ಪಿಎಂ ವರದಿಯಲ್ಲಿ ಉಸಿರುಗಟ್ಟಿಸಿ ಕೊಲೆ ಮಾಡಿರುವುದಾಗಿ ಬೆಳಕಿಗೆ ಬಂದಿದೆ. ಹೀಗಾಗಿ ಜುಲೈ 18 ರಂದು ಯುಡಿಆರ್ ಪ್ರಕರಣವನ್ನ ಕೊಲೆ ಪ್ರಕರಣವನ್ನಾಗಿ ಮಾಡಿಕೊಳ್ಳಲಾಗಿತ್ತು. ಬಳಿಕ ತನಿಖೆಗಿಳಿದ ಪೊಲೀಸರಿಂದ ಕುಟುಂಬಸ್ತರ ವಿಚಾರಣೆ ಮಾಡಿದ್ದಾರೆ. ಘಟನೆ ಸಂಬಂಧ ಪೋಷಕರ ಮೇಲೆ ಅನುಮಾನ ವ್ಯಕ್ತವಾಗಿತ್ತು. ಬಾಲಕಿ ಸಾವನ್ನಪ್ಪಿದ್ದ ದಿನ ಪೋಷಕರು ಮಾತ್ರ ಮನೆಯಲ್ಲಿದ್ದರು. ಹೀಗಾಗಿ ಗರ್ಗಿ ಪೋಷಕರನ್ನೂ ಪೊಲೀಸರು ವಿಚಾರಣೆ ಮಾಡಿದ್ದಾರೆ. 

  ಸದ್ಯ ಬಾಲಕಿ‌ ಮೃತಪಟ್ಟು 4 ತಿಂಗಳು ಕಳೆದರೂ ಸಾವಿಗೆ ನಿಖರ ಕಾರಣ ಸಿಕ್ಕಿಲ್ಲ. ಕೇಸ್ ದಾಖಲಾಗಿ 2 ತಿಂಗಳಾದರೂ ಆರೋಪಿಗಳ‌ ಪತ್ತೆ ಆಗಿಲ್ಲ. ಬೇರೆ ಬೇರೆ ಆಯಾಮಗಳಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದು ಸದ್ಯ ಪ್ರಕರಣದ ತನಿಖೆ ಎಸಿಪಿ ಹೆಗಲಿಗೆ ನೀಡಲಾಗಿದೆ.

Recent Articles

spot_img

Related Stories

Share via
Copy link
Powered by Social Snap