ಮಧುಗಿರಿ
ರಾಜೇಂದ್ರ ಎಂ.ಎನ್.:
ಮಾನವ ಆಧುನಿಕ ಜೀವನಕ್ಕೆ ಜೋತುಬಿದ್ದು ತನ್ನ ಸುತ್ತಲಿನ ಪರಿಸರದ ವಿನಾಶದಿಂದ ಇಂದು ಮಳೆ ಇಲ್ಲದೆ ಬರಗಾಲ ಆವರಿಸಿ ಹನಿ ಹನಿ ನೀರಿಗಾಗಿ ಪರದಾಡುವ ಸ್ಥಿತಿ ಬಂದೊದಗಿದೆ. ಇಂತಹ ಬರಗಾಲದ ವಾತಾವರಣದಲ್ಲಿ ಶಾಲೆಯ ಶಿಕ್ಷಕರು ವಿದ್ಯಾರ್ಥಿ ಜೀವನದಲ್ಲಿಯೇ ಪರಿಸರದ ಬಗ್ಗೆ ಅರಿವು ಮೂಡಿಸಿ ಮಕ್ಕಳ ಮೂಲಕವೇ ಗಿಡ ಮರಗಳನ್ನು ಬೆಳೆಸಿ ಸುಂದರ ಪರಿಸರ ಸೃಷ್ಟಿಸುವುದರ ಜೊತೆಗೆ ಪರಿಸರ ಸ್ನೇಹಿಯಾಗಿ ಈ ಶಾಲೆ ಗುರುತಿಸಿಕೊಳ್ಳುತ್ತಾ ತನ್ನ ಹಸುರಿನ ಪಸರನ್ನು ಬೀರುವತ್ತಾ ಮುನ್ನುಗ್ಗುತ್ತಿದೆ.
ಕರ್ನಾಟಕ ಮತ್ತು ಸೀಮಾಂಧ್ರ ಗಡಿ ಭಾಗದ ತಾಲ್ಲೂಕಿನ ದೊಡ್ಡೇರಿ ಹೋಬಳಿಯ ಸಜ್ಜೆಹೊಸಹಳ್ಳಿ ಗ್ರಾಮದ ಸುವರ್ಣಮುಖಿ ಪ್ರೌಢಶಾಲೆಯು 1978ರಲ್ಲಿ ಪ್ರಾರಂಭವಾದಾಗ ಶಾಲೆಯ ಸುತ್ತ್ತಮುತ್ತ್ತಲ ವಾತಾವರಣವು ಕಲ್ಲುಗುಂಡುಗಳಿಂದ ಕೂಡಿತ್ತು. ಇಂದು ಇವುಗಳನ್ನೆಲ್ಲಾ ತೆರವುಗೊಳಿಸಿ ಶಾಲೆ ಪ್ರಾರಂಭಿಸಿ ಗಿಡಮರಗಳನ್ನು ಬೆಳೆಸಿರುವುದರಿಂದ ಪರಿಸರ ಸ್ನೇಹಿ ಶಾಲೆಯಾಗಿ ಕಂಗೊಳಿಸುತ್ತಿದೆ. ದಣಿದು ಬಂದವರು ಒಮ್ಮೆ ಒಳ ಹೋದರೆ ಸಾಕು ಕ್ಷಣ ಮಾತ್ರದಲ್ಲಿ ದಣಿವು ನೀಗುವಂತಹ ವಾತಾವರಣವನ್ನು ಹೊಂದಿದೆ.
ಮೈದಾನದ ಬಹುತೇಕ ಕಡೆಗಳಲ್ಲಿ ಹೊಂಗೆ, ತೇಗ, ಹುಣಸೆ, ಆಲ, ಅರಳಿ ಸೇರಿದಂತೆ ಮಕ್ಕಳು ಕುಳಿತು ಓದಿಕೊಳ್ಳಲು ಸಹಕಾರಿಯಾಗುವಂತಹ ಸುಮಾರು 500ಕ್ಕೂ ಹೆಚ್ಚು ಮರಗಿಡಗಳನ್ನು ಬೆಳೆಸಲಾಗಿದೆ. ಅಲಂಕಾರಿಕ ಸಸ್ಯಗಳು ಆಕರ್ಷಣೀಯವಾಗಿವೆ. 2018ರಲ್ಲಿ ಸಾಮಾಜಿಕ ಅರಣ್ಯ ಇಲಾಖೆ ವತಿಯಿಂದ ಶಾಲೆಯ ಆವರಣದಲ್ಲಿ 150ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟಿದ್ದಾರೆ. ಇದೊಂದು ಸುಂದರ ಹಸಿರು ಉದ್ಯಾನವಾಗಿದೆ.
ಶಾಲೆಯ ಪ್ರವೇಶದ್ವಾರದ ಮೂಲಕ ಒಳಹೋದರೆ ಸುಮಾರು 10 ರಿಂದ 15 ಮೀನಷ್ಟು ದೂರ ಬಿಸಿಲಿನ ಸುಳಿವೇ ಸಿಗುವುದಿಲ್ಲ. ವಿಶಾಲವಾದ ಆಟದ ಮೈದಾನದ ಜೊತೆಗೆ ಸ್ವಂತ ಬೋರ್‍ವೆಲ್ ನೀರನ್ನು ವ್ಯರ್ಥ ಮಾಡದೆ ಗಿಡಮರಗಳಿಗೆ ಹಾಯಿಸುವಂತಹ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಗಿಡ ಮರಗಳು ಬೆಳೆದು ನಿಂತು ಆವರಣವೆಲ್ಲಾ ಹಸಿರು ಹೊದಿಕೆಯನ್ನು ಹೊಂದಿದ್ದು ನಿಸರ್ಗ ಬೇಲಿಯನ್ನು ನಿರ್ಮಿಸಿಕೊಂಡಿದೆ ಈ ಶಾಲೆ.
ಕಾಂಪೋಸ್ಟ್ ಗೊಬ್ಬರ ತಯಾರಿಕೆ:
ಕಾಂಪೋಸ್ಟ್ ಗುಂಡಿ ತೋಡಿದ್ದು, ಮರಗಳಿಂದ ಉದುರಿದ ಎಲೆಗಳನ್ನು ಹಾಕಿ ಸಾವಯವ ಗೊಬ್ಬರ ಮಾಡಲಾಗುತ್ತಿದೆ. ಇದೇ ಗೊಬ್ಬರವನ್ನು ಮರಗಳಿಗೆ ಹಾಕಿ ಬೆಳೆಸಲಾಗುತ್ತಿದೆ. ಮಕ್ಕಳಿಗೆ ಪಠ್ಯದ ಜೊತೆಗೆ ಪರಿಸರ ಪ್ರಜ್ಞೆ ಬೆಳೆಸುವಲ್ಲಿ ಸದಾ ಚಿಂತಿಸುವ ಶಾಲೆಯಂತೆ ಕಂಗೊಳಿಸುತ್ತಿದೆ.
ಮಗುವಿಗೊಂದು ಸಸ್ಯ, ಶಾಲೆಗೊಂದು ವನ: ಈ ಶಾಲೆಯಲ್ಲಿ ಸೇರಿದ ಎಲ್ಲಾ ಮಕ್ಕಳಿಗೂ ಮಗುವಿಗೊಂದು ಸಸ್ಯ ಶಾಲೆಗೊಂದು ವನ ಎಂಬಂತೆ ಒಂದೊಂದು ಗಿಡವನ್ನು ನೀಡಿ, ಆ ಗಿಡ ಬೆಳೆಸುವಂತಹ ಜವಾಬ್ದಾರಿ ನೀಡಲಾಗುತ್ತಿದೆ. ಇದರಿಂದ ಮಕ್ಕಳು ಶಾಲೆಗ ಬಂದ ತಕ್ಷಣ ನನ್ನ ಗಿಡ ಎಂಬ ಭಾವನೆಯಿಂದ ಗಿಡದ ಪಾಲನೆ ಪೋಷಣೆ ಮಾಡುತ್ತಾ ಸಂತಸದ ಕ್ಷಣ ಅನುಭವಿಸುತಾರೆ. ಇದರಿಂದ ಪರಿಸರವೂ ಸಹ ಬೆಳಗುತ್ತದೆ.
ಹಸಿರು ಶಾಲೆ:
2012-13ನೇ ಸಾಲಿನಲ್ಲಿ ಕರ್ನಾಟಕ ವಾಯು ನಿಯಂತ್ರಣ ಮಂಡಳಿ, ಪರಿಸರ ವಿಜ್ಞಾನ ಕೇಂದ್ರ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ನೀಡುವ ಹಸಿರು ಶಾಲೆ ಪ್ರಶಸ್ತಿಗೂ ಭಾಜನವಾಗಿದೆ.
ಪರಿಸರದ ಬಗ್ಗೆ ಅರಿವು: ಮಕ್ಕಳಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸಲು ಪ್ರಬಂಧ, ಚರ್ಚಾ ಸ್ಪರ್ಧೆ ಸೇರಿದಂತೆ ಅನೇಕ ಪಠ್ಯೇತರ ಚಟುವಟಿಕೆಗಳನ್ನು ಕೈಗೊಳ್ಳುವುದರ ಜೊತೆಗೆ ಸ್ಥಳೀಯ ಅರಣ್ಯ ಪ್ರದೇಶಗಳಿಗೆ ಪ್ರವಾಸ ಕೈಗೊಂಡು ಮಕ್ಕಳಿಗೆ ಅರಿವು ಮೂಡಿಸಲಾಗುತ್ತದೆ.
ಅಂತರ್ಜಲ ಪರಿಪೂರಕ:
ಅಂತರ್ಜಲ ಹೆಚ್ಚಿಸುವ ಸಲುವಾಗಿ ಎತ್ತರವಾದ ಏರು ಬದುಗಳನ್ನು ನಿರ್ಮಿಸಲಾಗಿದೆ. ಸುತ್ತಲೂ ನೀರು ನಿಲ್ಲುವಂತೆ ತಗ್ಗು ಗುಂಡಿಗಳನ್ನು ನಿರ್ಮಿಸಲಾಗಿದೆ. ಮಣ್ಣಿನ ಸವಕಳಿ ತಪ್ಪಿಸಲು ಬದುಗಳಳ್ಲ ಮರಗಳನ್ನು ನೆಡಲಾಗಿದೆ.
ವಸತಿ ಉಚಿತ:
ಈ ಶಾಲೆಯು ಹಿಂದುಳಿದ ವರ್ಗಗಳ ಇಲಾಖೆಯ ವತಿಯಿಂದ ಅನುದಾನಿತ ವಿದ್ಯಾರ್ಥಿನಿಲಯವನ್ನು ಹೊಂದಿದ್ದು, ಉಚಿತ ಊಟ, ವಸತಿ, ಲೇಖನ ಸಾಮಗ್ರಿ, ಸಮವಸ್ತ್ರವನ್ನು, ದಿನಬಳಕೆಯ ಸಾಮಗ್ರಿಗಳನ್ನು ವಿತರಿಸಲಾಗುತ್ತಿದೆ. ಜೊತೆಗೆ ಪರಿಸರದ ಬಗ್ಗೆ ಪಠ್ಯೇತರ ಚಟುವಟಿಕೆಗಳ ಮೂಲಕ ಪ್ರಜ್ಞೆ ಬೆಳೆಸಲಾಗುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
