ಸಮ್ಮಿಶ್ರ ಸರ್ಕಾರ ಇದೆಯೋ, ಸತ್ತಿದೆಯೋ ಗೊತ್ತಾಗುತ್ತಿಲ್ಲ. ರಮೇಶ್ ಜಿಗಜಿಗಣಿಗಿ.

ಹೊಸಪೇಟೆ :

      ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್-ಜೆಡಿಎಸ್ ಪಕ್ಷಗಳಲ್ಲಿ ಹೊಂದಾಣಿಕೆ ಇಲ್ಲ. ಪರಸ್ಪರ ಟೀಕೆ ಮಾಡುವುದರಲ್ಲೇ ಕಾಲ ಕಳೆಯುತ್ತಿವೆ. ಸಮ್ಮಿಶ್ರ ಸರ್ಕಾರ ಬದುಕಿದೆಯೋ ಅಥವಾ ಸತ್ತಿದೆಯೋ ಎಂಬುದೇ ಗೊತ್ತಾಗುತ್ತಿಲ್ಲ ಎಂದು ಕೇಂದ್ರ ಸಚಿವ ರಮೇಶ ಜಿಗಜಿಗಣಿಗಿ ವ್ಯಂಗ್ಯವಾಡಿದರು.

       ನಗರದ ಬಿಜೆಪಿ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಬಳ್ಳಾರಿ ಉಪ ಚುನಾವಣೆ ಕುರಿತು ಕಾರ್ಯಕರ್ತರ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರವಾಹ, ಇನ್ನೊಂದು ಕಡೆ ಬರಗಾಲವಿದ್ದರೂ ಸಿಎಂ ಕುಮಾರಸ್ವಾಮಿ ಜನರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ಪರಿಹಾರ ಕ್ರಮ ಕೈಗೊಳ್ಳುತ್ತಿಲ್ಲ. ಇಬ್ಬರೂ ಪರಸ್ಪರ ತಿಕ್ಕಾಟದಲ್ಲಿ ತೊಡಗಿದ್ದಾರೆ. ಹೀಗಾಗಿ ಇದೆಲ್ಲವನ್ನು ನೋಡಿದರೆ ಸರ್ಕಾರ ಇದೆಯೋ ? ಸತ್ತಿದೆಯೋ ಎಂಬ ಅನುಮಾನ ಬರದೇ ಇರದು ಎಂದರು.ಆತನ ಭವಿಷ್ಯ ಆತನಿಗೆ ಗೊತ್ತಿಲ್ಲ. ನಮ್ಮ ಭವಿಷ್ಯ ಬದಲಿಸ್ತಾನಾ ? ರಾಮುಲು ವಾಗ್ದಾಳಿ.

         ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಬಳ್ಳಾರಿಗೆ ಬಂದು ಬಳ್ಳಾರಿ ಭವಿಷ್ಯವನ್ನೇ ಬದಲು ಮಾಡ್ತೀನಿ ಅಂತಾ ಹೇಳ್ತಾರೆ. ಆದರೆ ನಾಳೆ ಆತ ಜೈಲಲ್ಲಿರ್ತಾನೋ ? ಅಥವಾ ಹೊರಗಡೆ ಇರ್ತಾನೋ ? ಅಂತಾ ಆತನ ಭವಿಷ್ಯ ಆತನಿಗೆ ಗೊತ್ತಿಲ್ಲ. ಇನ್ನೂ ನಮ್ಮ ಭವಿಷ್ಯ ಬದಲಿಸ್ತಾನಾ ? ಎಂದು ಶಾಸಕ ಶ್ರೀರಾಮುಲು ಡಿಕೆಶಿ ವಿರುದ್ದ ವಾಗ್ದಾಳಿ ನಡೆಸಿದರು.

         ರಾಮನಗರ, ಮಂಡ್ಯದಲ್ಲಿ ರಾಜಕೀಯ ಮಾಡಲಾಗದವರು ಇಲ್ಲಿಗೆ ಬಂದು ಬಳ್ಳಾರಿ ಭವಿಷ್ಯ ಬರೆಯಲು ನೀವು ಯಾರು ಸ್ವಾಮಿ ? ಎಂದ ಅವರು, ನಿಮ್ಮ ಭವಿಷ್ಯವೇ ನಿಮ್ಮ ಕೈಲಿಲ್ಲ. ಹಾಗಿದ್ದ ಮೇಲೆ ನೀವೇನು ನಮ್ಮ ಭವಿಷ್ಯ ಬರೆಯೋದು ? ಎಂದು ಆಕ್ರೋಶ ವ್ಯಕ್ತಪಡಿಸಿದರು.

         ಕಳೆದ ಚುನಾವಣೆಯಲ್ಲಿ ನಮ್ಮ ಎಡವಟ್ಟುಗಳಿಂದ ನಾವು ಸೋತಿದ್ದೇವೆ. ನಿಮ್ಮ ಬಳಿ ದುಡ್ಡಿರಬಹುದು. ನಮ್ಮ ಬಳಿ ಕಾರ್ಯಕರ್ತರಿದ್ದಾರೆ. ಆದರೆ ಈ ಬಾರಿ ಡಿಕೆಶಿ ಗೆಲ್ತಾರೋ ಅಥವಾ ಜೆ.ಶಾಂತ ಗೆಲ್ತಾರೋ ನೋಡೇ ಬಿಡೋಣ ಎಂದು ಸವಾಲು ಹಾಕಿದರು.
ಇದೇ ವೇಳೆ ನವೆಂಬರ್ 3ರ ಉಪ ಚುನಾವಣೆ ಫಲಿತಾಂಶ ಬಂದ ನಂತರ ಸರ್ಕಾರ ಪತನವಾಗಲಿದೆ ಎಂದು ಭವಿಷ್ಯ ನುಡಿದರು.

        ಶಾಸಕ ವಿ.ಸೋಮಣ್ಣ, ರವಿಕುಮಾರ್, ರಾಮಣ್ಣ ಲಮಾಣಿ, ಸೋಮಲಿಂಗಪ್ಪ ಹಾಗು ನಿಯೋಜಿತ ಅಭ್ಯರ್ಥಿ ಜೆ.ಶಾಂತ ಮಾತನಾಡಿದರು.

         ಸಭೆಯಲ್ಲಿ ಮಾಜಿ ಸಂಸದ ಸಣ್ಣ ಪಕ್ಕೀರಪ್ಪ, ಮಾಜಿ ಶಾಸಕ ಚಂದ್ರನಾಯ್ಕ್, ಮೃತ್ಯುಂಜಯ ಜಿನಗಾ, ಜಿಲ್ಲಾಧ್ಯಕ್ಷ ಚನ್ನಬಸವನಗೌಡ, ಜಿ.ಪಂ.ಅಧ್ಯಕ್ಷೆ ಭಾರತಿರೆಡ್ಡಿ, ಮುಖಂಡರಾದ ಕೆ.ಎ.ರಾಮಲಿಂಗಪ್ಪ, ಮಹಿಪಾಲ್, ಗುರುಲಿಂಗನಗೌಡ, ರಾಣಿ ಸಂಯುಕ್ತಾ, ಪತ್ತಿಕೊಂಡ ಕಿಶೋರ್, ಅನಂತ ಪಧ್ಮನಾಭ ಸೇರಿದಂತೆ ಇತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap