ಕೀವ್:
ರಷ್ಯಾವು ಸೇನಾ ನೆಲೆಗಳ ಮೇಲೆ ಮಾತ್ರವಲ್ಲದೇ ಜನರ ಮೇಲೂ ದಾಳಿ ಮಾಡುತ್ತಿದೆ. ಪ್ರಮುಖ ನಗರಗಳನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುತ್ತಿದೆ- ವೊಲೊಡಿಮಿರ್ ಜೆಲೆನ್ಸ್ಕಿ, ಉಕ್ರೇನ್ ಅಧ್ಯಕ್ಷ
ರಷ್ಯಾ ತನ್ನ ದೇಶದ ಮೇಲೆ ನಡೆಸಿದ ದಾಳಿಯಲ್ಲಿ ಇದುವರೆಗೆ 137 ನಾಗರಿಕರು ಮತ್ತು ಸೇನಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ಹೇಳಿದ್ದಾರೆ
ಈ ಬಗ್ಗೆ ಅವರು ಮಾತನಾಡಿರುವ ವಿಡಿಯೋದಲ್ಲಿ, ರಷ್ಯಾವು ಸೇನಾ ನೆಲೆಗಳ ಮೇಲೆ ಮಾತ್ರವಲ್ಲದೇ ಜನರ ಮೇಲೂ ದಾಳಿ ಮಾಡುತ್ತಿದೆ. ಪ್ರಮುಖ ನಗರಗಳನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುತ್ತಿದೆ. ಅಮಾಯಕರ ಬಲಿ ತೆಗೆದುಕೊಳ್ಳುತ್ತಿದೆ. ಈವರೆಗೆ ಸೈನಿಕರು ಸೇರಿದಂತೆ 137 ಜನರು ಹತರಾಗಿದ್ದು, ಇನ್ನೂ ನೂರಾರು ಜನರು ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಒಡೆಸಾ ಪ್ರದೇಶದ ಜ್ಮಿನಿ ದ್ವೀಪದಲ್ಲಿರುವ ಎಲ್ಲ ಭದ್ರತಾ ಪಡೆಯ ಸಿಬ್ಬಂದಿಯನ್ನು ರಷ್ಯಾ ಹೊಡೆದುರುಳಿಸಿದೆ. ಅಲ್ಲದೇ ಆ ಪ್ರದೇಶವನ್ನು ರಷ್ಯಾ ವಶಕ್ಕೆ ಪಡೆದಿದೆ. ಯುದ್ಧದಲ್ಲಿ ಮೃತಪಟ್ಟ ಸೈನಿಕರನ್ನು ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ಹುತಾತ್ಮರು ಎಂದು ಕರೆದಿದ್ದಾರೆ.
‘ಏಕಾಂಗಿ ಹೋರಾಟ’:
ಇನ್ನು ತನ್ನ ದೇಶದ ಮೇಲೆ ದಾಳಿ ಮಾಡಿದ್ದ ರಷ್ಯಾ ವಿರುದ್ಧ ಏಕಾಂಗಿಯಾಗಿ ಹೋರಾಡಲಿದೆ ಎಂದು ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ಹೇಳಿದ್ದಾರೆ. ಇತರೆ ರಾಷ್ಟ್ರಗಳು ರಷ್ಯಾ ಕ್ರಮವನ್ನು ಖಂಡಿಸಿದರೂ ನೇರವಾಗಿ ಯುದ್ಧದಲ್ಲಿ ಭಾಗಿಯಾಗಿಲ್ಲ. ಹೀಗಾಗಿ ವೊಲೊಡಿಮಿರ್ ಜೆಲೆನ್ಸ್ಕಿ ತನ್ನ ಶತ್ರು ರಾಷ್ಟ್ರವನ್ನು ಒಂಟಿಯಾಗಿ ಎದುರಿಸಲಿದೆ ಎಂದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ