ಜಮ್ಮು:
ಕುಪ್ವಾರ ಪೊಲೀಸ್ ಠಾಣೆಯ ಮೇಲೆ ಹಿಂಸಾತ್ಮಕ ದಾಳಿಯಲ್ಲಿ ಭಾಗಿಯಾಗಿದ್ದಕ್ಕಾಗಿ ಮೂವರು ಸೇನಾ ಲೆಫ್ಟಿನೆಂಟ್ ಕರ್ನಲ್‌ಗಳು ಮತ್ತು ಇತರ 13 ಜನರ ವಿರುದ್ಧ ಕೊಲೆ ಯತ್ನ ಮತ್ತು ಡಕಾಯಿತಿ ಪ್ರಕರಣವನ್ನು ದಾಖಲಿಸಲಾಗಿದೆ.
ಮಂಗಳವಾರ ಮತ್ತು ಬುಧವಾರದ ಮಧ್ಯರಾತ್ರಿ ಈ ಘಟನೆ ನಡೆದಿದ್ದು, ಮಾದಕವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಪ್ರಾದೇಶಿಕ ಸೇನಾ ಯೋಧರನ್ನು ಪ್ರಶ್ನಿಸಿದ್ದರಿಂದ ಪೊಲೀಸ್ ಠಾಣೆ ಮೇಲೆ ಹಿಂಸಾತ್ಮಕ ದಾಳಿ ನಡೆಸಿತು ಎನ್ನಲಾಗಿದೆ.
160 ಟೆರಿಟೋರಿಯಲ್ ಆರ್ಮಿಯ ಶಸ್ತ್ರಸಜ್ಜಿತ ಮತ್ತು ಸಮವಸ್ತ್ರಧಾರಿ ಸಿಬ್ಬಂದಿಗಳ ಗುಂಪು, ಭಾರತೀಯ ಸೇನೆಯ ಹಿರಿಯ ಅಧಿಕಾರಿಗಳ ಜೊತೆಯಲ್ಲಿ, ಪೊಲೀಸ್ ಠಾಣೆಗೆ ದಾಳಿ ಮಾಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಪ್ರಾದೇಶಿಕ ಸೇನೆಯು ಭಾರತೀಯ ಸೇನೆಗೆ ಬೆಂಬಲ ಸೇವೆ ಒದಗಿಸುವ ಅರೆಕಾಲಿಕ ಸ್ವಯಂಸೇವಕರನ್ನು ಒಳಗೊಂಡಿರುವ ಮಿಲಿಟರಿ ಮೀಸಲು ಪಡೆಯಾಗಿದೆ.
ಲೆಫ್ಟಿನೆಂಟ್ ಕರ್ನಲ್ ಅಂಕಿತ್ ಸೂದ್, ರಾಜೀವ್ ಚೌಹಾಣ್ ಮತ್ತು ನಿಖಿಲ್ ನೇತೃತ್ವದ ಸಶಸ್ತ್ರ ಗುಂಪು ಪೊಲೀಸ್ ಠಾಣೆಯ ಆವರಣ ಪ್ರವೇಶಿಸಿದ್ದು, ಅಲ್ಲಿ ಹಾಜರಿದ್ದ ಪೊಲೀಸ್ ಸಿಬ್ಬಂದಿಯ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ. ರೈಫಲ್ ಬಟ್‌ಗಳು ಮತ್ತು ಸ್ಟಿಕ್‌ಗಳನ್ನು ಬಳಸಿ ಒದೆದಿರುವುದಾಗಿ ಎಫ್ ಐಆರ್ ನಲ್ಲಿ ಹೇಳಲಾಗಿದೆ. ಸೇನಾ ಸಿಬ್ಬಂದಿ ಪ್ರತಿರೋಧ ತೋರಿದಾಗ ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಂಡಾಗ ಗಾಯಗೊಂಡ ಪೊಲೀಸ್ ಅಧಿಕಾರಿಗಳಿಂದ ಮೊಬೈಲ್ ಫೋನ್ ಕಿತ್ತುಕೊಂಡು, ಪೊಲೀಸ್ ಕಾನ್ಸ್ ಟೇಬಲ್ ಒಬ್ಬರನ್ನು ಅಪಹರಿಸಿ ಅಲ್ಲಿಂದ ಕಾಲ್ಕಿತ್ತಿರುವುದಾಗಿ ಎಫ್ ಐಆರ್ ನಲ್ಲಿ ಹೇಳಲಾಗಿದೆ.