ಸಲ್ಮಾನ್‌ ಖಾನ್‌ ಮನೆ ಮುಂದೆ ಗುಂಡಿನ ದಾಳಿ : ಇಬ್ಬರ ಬಂಧನ

ಮುಂಬೈ: 

   ವಾಣಿಜ್ಯ ನಗರಿ ಮುಂಬೈಯ ಬಾಂದ್ರಾ ವೆಸ್ಟ್‌ನಲ್ಲಿರುವ ನಟ ಸಲ್ಮಾನ್ ಖಾನ್ ಅವರ ನಿವಾಸದ ಹೊರಗೆ ಕಳೆದ ಭಾನುವಾರ ನಡೆದ ಗುಂಡಿನ ದಾಳಿ ಘಟನೆಗೆ ಸಂಬಂಧಪ್ಟಂತೆ ಮುಂಬೈ ಕ್ರೈಂ ಬ್ರಾಂಚ್ ಇಬ್ಬರು ಆರೋಪಿಗಳನ್ನು ಬಂಧಿಸಿದೆ.

    ನಟ ಸಲ್ಮಾನ್ ಖಾನ್ ಅವರ ನಿವಾಸದ ಹೊರಗೆ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಕಳೆದ ರಾತ್ರಿ ವಿಕ್ಕಿ ಗುಪ್ತಾ ಮತ್ತು ಸಾಗರ್ ಪಾಲ್ ಎಂಬ ಆರೋಪಿಗಳನ್ನು ಮುಂಬೈ ಅಪರಾಧ ವಿಭಾಗದ ಪೊಲೀಸರು ಗುಜರಾತ್‌ನ ಭುಜ್ ನಲ್ಲಿ ಬಂಧಿಸಿ ರಾತ್ರಿಯೇ ಹೆಚ್ಚಿನ ವಿಚಾರಣೆಗೆ ಮುಂಬೈಗೆ ಕರೆತಂದಿದ್ದಾರೆ.ನಿನ್ನೆ ಸೋಮವಾರ ತಡರಾತ್ರಿ ಗುಜರಾತ್‌ನ ಭುಜ್‌ನಲ್ಲಿ ಇಬ್ಬರು ಆರೋಪಿಗಳು ಸಿಕ್ಕಿಬಿದ್ದಿದ್ದಾರೆ ಎಂದು ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ. ಗುಂಡಿನ ದಾಳಿ ಬಳಿಕ ಮುಂಬೈನಿಂದ ಪರಾರಿಯಾಗಿದ್ದ ಆರೋಪಿಗಳಿಬ್ಬರನ್ನು ಗುಜರಾತ್‌ನ ಭುಜ್‌ನಲ್ಲಿ ಬಂಧಿಸಲಾಗಿದೆ. ಹೆಚ್ಚಿನ ತನಿಖೆಗಾಗಿ ಅವರನ್ನು ಮುಂಬೈಗೆ ಕರೆತರಲಾಗಿದೆ ಎಂದು ತಿಳಿಸಿದರು.

    ಮೊನ್ನೆ ಭಾನುವಾರ ಮುಂಜಾನೆ ಸಲ್ಮಾನ್ ಖಾನ್ ವಾಸವಾಗಿರುವ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನ ಹೊರಗೆ ಶಂಕಿತರು ಹೆಲ್ಮೆಟ್ ಧರಿಸಿಕೊಂಡು ಮೋಟಾರ್ ಬೈಕ್ ನಲ್ಲಿ ಬಂದು ಗಾಳಿಯಲ್ಲಿ ಮೂರ್ನಾಲ್ಕು ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದರು. ಘಟನಾ ಸ್ಥಳಕ್ಕೆ ಬಂದು ತಪಾಸಣೆ ನಡೆಸಿದ ಪೊಲೀಸರು ಇದೊಂದು “ಸೂಕ್ಷ್ಮ ಯೋಜಿತ ದಾಳಿ” ಎಂದು ಹೇಳಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ