ಖಾನೌರಿ ಗಡಿಭಾಗದಿಂದ ರೈತರನ್ನು ಹೊರಹಾಕಿದ ಪಂಜಾಬ್ ಸರ್ಕಾರ

ಚಂಡೀಗಢ:

    ಕನಿಷ್ಠ ಬೆಂಬಲ ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜಧಾನಿ ದೆಹಲಿಯ ಗಡಿಭಾಗದಲ್ಲಿ ಕಳೆದೊಂದು ವರ್ಷದಿಂದ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ನಿನ್ನೆ ಬುಧವಾರ ಸಂಜೆ ಪಂಜಾಬ್ ಮತ್ತು ಹರಿಯಾಣ ನಡುವಿನ ಶಂಭು ಮತ್ತು ಖಾನೌರಿ ಗಡಿಗಳಿಂದ ಹೊರಹಾಕಲಾಯಿತು, ಈ ಸಂದರ್ಭದಲ್ಲಿ ಉಂಟಾದ ಘರ್ಷಣೆಯಿಂದ ಜನಸಾಮಾನ್ಯರ ಸಂಚಾರಕ್ಕೆ ಗಡಿಗಳನ್ನು ಮುಚ್ಚಲಾಯಿತು.

   ರೈತ ನಾಯಕರು ಮತ್ತು ಕೇಂದ್ರ ಸರ್ಕಾರದ ನಡುವಿನ ಏಳನೇ ಸುತ್ತಿನ ಮಾತುಕತೆ ವಿಫಲವಾದ ನಂತರ ಚಂಡೀಗಢದಿಂದ ಶಂಭು ಮತ್ತು ಖಾನೌರಿ ಗಡಿಗಳಿಗೆ ತೆರಳುತ್ತಿದ್ದ ಕಿಸಾನ್ ಮಜ್ದೂರ್ ಮೋರ್ಚಾ (KMM) ಮತ್ತು ಸಂಯುಕ್ತ ಕಿಸಾನ್ ಮೋರ್ಚಾ (Non political) ನಾಯಕರಾದ ಸರ್ವಾನ್ ಸಿಂಗ್ ಪಂಧೇರ್ ಮತ್ತು ಜಗಜಿತ್ ಸಿಂಗ್ ದಲ್ಲೆವಾಲ್ ಅವರನ್ನು ಪಂಜಾಬ್ ಪೊಲೀಸರು ನಿನ್ನೆ ಸಾಯಂಕಾಲ ಬಂಧಿಸಿದರು. ಕಳೆದ ವರ್ಷ ನವೆಂಬರ್‌ನಿಂದ ದಲ್ಲೆವಾಲ್ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

  ಹರಿಯಾಣ ಕಡೆಯಿಂದ, ಈ ಗಡಿಗಳಲ್ಲಿ ಇನ್ನೂ ಬ್ಯಾರಿಕೇಡ್‌ಗಳನ್ನು ಹಾಕಲಾಗಿವೆ. ರೈತರು ದೆಹಲಿಯ ಕಡೆಗೆ ಹೋಗುವುದನ್ನು ತಡೆಯಲು ಅಧಿಕಾರಿಗಳು ಅಲ್ಲಿ ಸಿಮೆಂಟ್ ಮತ್ತು ಇತರ ಬ್ಯಾರಿಕೇಡ್‌ಗಳನ್ನು ರಚಿಸಿದ್ದರು. ರೈತ ಮುಖಂಡರು ಚಂಡೀಗಢದಿಂದ ಶಂಭು ಗಡಿಗೆ ಹಿಂತಿರುಗುತ್ತಿದ್ದರು, ಅಲ್ಲಿಂದ ದಲ್ಲೆವಾಲ್ ಮತ್ತು ಇತರ ನಾಯಕರು ಖಾನೌರಿಗೆ ಹೋಗಬೇಕಿತ್ತು. ಮೊಹಾಲಿಯ ಜಗತ್‌ಪುರ ಪ್ರದೇಶವನ್ನು ತಲುಪಿದ್ದ ವೇಳೆ ಪೊಲೀಸರು ಅವರನ್ನು ಬಂಧಿಸಿದರು. ದಲ್ಲೆವಾಲ್ ಅವರನ್ನು ಆಂಬ್ಯುಲೆನ್ಸ್ ಒಳಗೆ ಇರಿಸಿದಾಗ ವಶಕ್ಕೆ ಪಡೆಯಲಾಯಿತು, ಈ ವೇಳೆ ಕೆಲವರು ಪ್ರತಿರೋಧ ವ್ಯಕ್ತಪಡಿಸಿದಾಗ ಇತರರನ್ನು ಅವರ ವಾಹನಗಳೊಂದಿಗೆ ಬಂಧಿಸಲಾಯಿತು. ಪಂಧೇರ್ ಪರಾರಿಯಾಗಲು ಯತ್ನಿಸುತ್ತಿದ್ದಾಗ ಜಿರಾಕ್‌ಪುರ ತಡೆಗೋಡೆಯಿಂದ ಅವರನ್ನು ಅವರ ವಾಹನದಲ್ಲಿ ಕರೆದೊಯ್ಯಲಾಯಿತು. ಹದಿನಾಲ್ಕು ರೈತ ನಾಯಕರು ಮತ್ತು ಅವರ ಜೊತೆಗಿದ್ದ ಇತರರನ್ನು ಸಹ ಬಂಧಿಸಲಾಯಿತು.

   ಪಂಧೇರ್ ಅವರನ್ನು ಪಟಿಯಾಲಾದ ಬಹದ್ದೂರ್‌ಗಢ ಫೋರ್ಟ್ ಕಮಾಂಡೋ ಪೊಲೀಸ್ ತರಬೇತಿ ಕೇಂದ್ರಕ್ಕೆ ಕರೆದೊಯ್ಯಲಾಗಿದೆ. ಇದನ್ನು ತಾತ್ಕಾಲಿಕ ಬಂಧನ ಕೇಂದ್ರವಾಗಿ ಪರಿವರ್ತಿಸಲಾಗಿದೆ, ದಲ್ಲೆವಾಲ್ ಹೊರತುಪಡಿಸಿ ಹೆಚ್ಚಿನ ರೈತ ನಾಯಕರು ಮತ್ತು ಪ್ರತಿಭಟನಾ ನಿರತ ರೈತರನ್ನು ಅಲ್ಲಿಗೆ ಕರೆದೊಯ್ಯಲಾಯಿತು.