ರಾಯಚೂರು:
ಕೆಎಸ್ಆರ್ಟಿಸಿ ಬಸ್ ಮತ್ತು ಶಾಲಾ ಬಸ್ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, 32 ವಿದ್ಯಾರ್ಥಿಗಳು ಗಾಯಗೊಂಡಿರುವಂತಹ ಘಟನೆ ಜಿಲ್ಲೆಯ ಮಾನ್ವಿ ತಾಲೂಕಿನ ಕಪಗಲ್ ಗ್ರಾಮದಲ್ಲಿ ನಡೆದಿತ್ತು. ಸಮರ್ಥ್(7), ಶ್ರೀಕಾಂತ್(12) ಮೃತ ವಿದ್ಯಾರ್ಥಿಗಳು. 32 ಜನರ ಪೈಕಿ 18 ಗಾಯಾಳುಗಳಿಗೆ ರಿಮ್ಸ್ ಆಸ್ಪತ್ರೆಯಲ್ಲಿ ಮತ್ತು 14 ವಿದ್ಯಾರ್ಥಿಗಳಿಗೆ ರಾಯಚೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇನ್ನು ಭೀಕರ ಅಪಘಾತದಲ್ಲಿ ಮೂವರು ವಿದ್ಯಾರ್ಥಿಗಳು ಕೈ, ಕಾಲು ಛಿದ್ರಗೊಂಡಿದ್ದವು. ಪೋಷಕರು ಘಟನೆ ನಡೆದ ಸ್ಥಳಕ್ಕೆ ಬಂದು ರೋದಿಸಿದ್ದಾರೆ. ಮಕ್ಕಳ ಪರಿಸ್ಥಿತಿ ನೋಡಿ ಬಿಕ್ಕಿ ಬಿಕ್ಕಿ ಅತ್ತಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಆಸ್ಪತ್ರೆಯತ್ತ ಮಕ್ಕಳ ಪೋಷಕರು ಆಗಮಿಸುತ್ತಿದ್ದು, ಐಸಿಯುನಲ್ಲಿ ಮಕ್ಕಳನ್ನು ತೋರಿಸುವಂತೆ ಪೋಷಕರು ಪಟ್ಟು ಹಿಡಿದಿದ್ದರು. ಈ ವೇಳೆ ಪೊಲೀಸರು ಮತ್ತು ಪೋಷಕರೊಂದಿಗೆ ವಾಗ್ವಾದ ಉಂಟಾಗಿತ್ತು.
ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಡಿಸಿ ಕೆ.ನಿತೇಶ್ ಮಾಧ್ಯಮದವರೊಂದಿಗೆ ಮಾತನಾಡಿದ್ದು, ಜಿಲ್ಲೆಯ ಮಾನ್ವಿ ತಾಲೂಕಿನ ಕಪಗಲ್ ಗ್ರಾಮ ಸಮೀಪ ನಡೆದಿದ್ದ ಅಪಘಾತ ಸಂಭವಿಸಿದೆ. ಮೃತ ವಿದ್ಯಾರ್ಥಿಗಳ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ನೀಡಲು ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಗಾಯಗೊಂಡ ಮಕ್ಕಳ ಚಿಕಿತ್ಸೆಗೆ ತಲಾ 3 ಲಕ್ಷ ರೂ. ನೆರವು ನೀಡಲಾಗುತ್ತಿದೆ ಎಂದು ಹೇಳದ್ದರು.