ಲಾಹೋರ್:
ಪಾಕಿಸ್ತಾನದಲ್ಲಿ ಬಲೂಚಿಸ್ತಾನ ಬಂಡುಕೋರರು ಹೈಜಾಕ್ ಮಾಡಿದ್ದ ಪ್ರಯಾಣಿಕ ರೈಲಿನ ಎಲ್ಲ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗಿದ್ದು, ಹೈಜಾಕ್ ಮಾಡಿದ್ದ 30ಕ್ಕೂ ಹೆಚ್ಚು ಉಗ್ರರ ಹೆಡೆಮುರಿ ಕಟ್ಟಲಾಗಿದೆ ಎಂದು ಪಾಕಿಸ್ತಾನ ಸೇನೆ ಮಾಹಿತಿ ನೀಡಿದೆ.
ಪಾಕಿಸ್ತಾನದ ವಶದಲ್ಲಿರುವ ಬಲೂಚಿಸ್ತಾನವನ್ನು ಸ್ವತಂತ್ರ್ಯಗೊಳಿಸಬೇಕು ಎಂದು ಹೋರಾಡುತ್ತಿರುವ ಬಲೂಚ್ ಲಿಬರೇಶನ್ ಆರ್ಮಿ (BLA) ತನ್ನ ಮಜೀದ್ ಬ್ರಿಗೇಡ್ ಮೂಲಕ ಪಾಕಿಸ್ತಾನದ ಪ್ಯಾಸೆಂಜರ್ ರೈಲನ್ನೇ ಹೈಜಾಕ್ ಮಾಡಿತ್ತು. ಪಾಕಿಸ್ತಾನದ ನೈಋತ್ಯ ಬಲೂಚಿಸ್ತಾನ್ ಪ್ರಾಂತ್ಯದ ಕ್ವೆಟ್ಟಾದಿಂದ ಖೈಬರ್ ಪಖ್ತುಂಕ್ವಾದ ಪೇಶಾವರ್‌ಗೆ ತೆರಳುತ್ತಿದ್ದ ಪಾಕಿಸ್ತಾನ ರೈಲ್ವೇ ಇಲಾಖೆಗೆ ಸೇರಿದ ಜಾಫರ್ ಎಕ್ಸ್‌ಪ್ರೆಸ್ ಅನ್ನು ಬಲೂಚಿಸ್ತಾನ ಬಂಡುಕೋರರು ಅಪಹರಿಸಿದ್ದರು.
ಈ ರೈಲಿನ ಸುಮಾರು 9 ಬೋಗಿಗಳಲ್ಲಿದ್ದ 450ಕ್ಕೂ ಅಧಿಕ ಮಂದಿಯನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದರು. ರೈಲ್ವೇ ಹಳಿಗಳನ್ನು ಸ್ಫೋಟಿಸಿ ಬಿಎಲ್ಎ ಬಂಡುಕೋರರು ರೈಲನ್ನು ವಶಕ್ಕೆ ಪಡೆದಿದ್ದರು. ವಿಚಾರ ತಿಳಿಯುತ್ತಲೇ ಪಾಕಿಸ್ತಾನ ಸೇನೆ ಮತ್ತು ಚೀನಾ ಸೇನೆ ಜಂಟಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿತ್ತು.
ಇನ್ನು ಪಾಕಿಸ್ತಾನ ಸೇನಾ ಕಾರ್ಯಾಚರಣೆಯಲ್ಲಿ ಬಲೂಚ್ ಲಿಬರೇಷನ್ ಆರ್ಮಿಯ ಸುಮಾರು 30ಕ್ಕೂ ಹೆಚ್ಚು ಬಂಡುಕೋರರನ್ನು ಹೊಡೆದುರುಳಿಸಲಾಗಿದ್ದು, ಬಂಡುಕೋರರ ವಶದಲ್ಲಿದ್ದ ಎಲ್ಲ ಒತ್ತೆಯಾಳುಗಳನ್ನು ಯಶಸ್ವಿಯಾಗಿ ರಕ್ಷಣೆ ಮಾಡಲಾಗಿದೆ ಎಂದು ಪಾಕಿಸ್ತಾನ ಸೇನೆ ಹೇಳಿಕೊಂಡಿದೆ. ಬಂಡುಕೋರ ಗುಂಪಿನಿಂದ ಒತ್ತೆಯಾಳಾಗಿರಿಸಲ್ಪಟ್ಟಿದ್ದ 340 ಕ್ಕೂ ಹೆಚ್ಚು ರೈಲು ಪ್ರಯಾಣಿಕರನ್ನು 30 ಗಂಟೆಗಳ ಸತತ ರಕ್ಷಣಾ ಕಾರ್ಯಾಚರಣೆ ಬಳಿಕ ರಕ್ಷಣೆ ಮಾಡಲಾಗಿದೆ. ಅಂತೆಯೇ ಈ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಸೇನೆಯ 27 ಮಂದಿ ಸೈನಿಕರು ಹುತಾತ್ಮರಾಗಿದ್ದಾರೆ ಎಂದು ಸೇನಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇನ್ನು ಹುತಾತ್ಮರಾದ 27 ಸೈನಿಕರು ರೈಲಿನಲ್ಲಿ ಪ್ರಯಾಣಿಕರಾಗಿ ಪ್ರಯಾಣಿಸುತ್ತಿದ್ದರು. ಈ ಪೈಕಿ ತೆರವು ಕಾರ್ಯಾಚರಣೆಯಲ್ಲಿ ಕರ್ತವ್ಯದಲ್ಲಿದ್ದ ಒಬ್ಬ ಸೈನಿಕ ಸಾವನ್ನಪ್ಪಿದ್ದಾನೆ ಎಂದು ಸೇನಾ ಅಧಿಕಾರಿ ಹೇಳಿದ್ದಾರೆ. ಆದರೆ ಅಧಿಕಾರಿ ನಾಗರಿಕರ ಸಾವಿನ ಸಂಖ್ಯೆಯನ್ನು ನೀಡಲಿಲ್ಲ, ಆದರೆ ಇದಕ್ಕೂ ಮೊದಲು, ರೈಲ್ವೆ ಅಧಿಕಾರಿ ಮತ್ತು ಅರೆವೈದ್ಯರು ರೈಲು ಚಾಲಕ ಮತ್ತು ಪೊಲೀಸ್ ಅಧಿಕಾರಿ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದರು.
ಇನ್ನು ಈ ದಾಳಿ ಮಾಡಿದ ಬಲೂಚ್ ಲಿಬರೇಶನ್ ಆರ್ಮಿ (BLA) ದಾಳಿಯನ್ನು ತಕ್ಷಣವೇ ಸಮರ್ಥನೆ ಮಾಡಿಕೊಂಡಿದ್ದು, ಅಫ್ಘಾನಿಸ್ತಾನ ಮತ್ತು ಇರಾನ್‌ನ ಗಡಿಯಲ್ಲಿರುವ ಬಲೂಚಿಸ್ತಾನದಲ್ಲಿ ಹೊರಗಿನವರು ನೈಸರ್ಗಿಕ ಸಂಪನ್ಮೂಲಗಳನ್ನು ಲೂಟಿ ಮಾಡುತ್ತಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಬಲೂಚಿಸ್ತಾನದಲ್ಲಿ ಹೊರಗಿನವರ ದಾಳಿ ಹೆಚ್ಚಾಗಿವೆ. ಹೆಚ್ಚಾಗಿ ಪ್ರಾಂತ್ಯದ ಹೊರಗಿನ ಭದ್ರತಾ ಪಡೆಗಳು ಮತ್ತು ಜನಾಂಗೀಯ ಗುಂಪುಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿವೆ ಎಂದು ಆರೋಪಿಸಿದೆ.
