ಇಸ್ಲಾಮಾಬಾದ್:
ಪಾಕಿಸ್ತಾನದಲ್ಲಿ ಮತ್ತೆ ಮಿಲಿಟರಿ ಶಕ್ತಿ ಪ್ರಾಬಲ್ಯ ಪಡೆಯುವ ಸೂಚನೆ ಇದೆ. ಯಾಕೆಂದರೆ ಜನರಲ್ ಅಸಿಮ್ ಮುನೀರ್ ಅವರನ್ನು ಪಾಕಿಸ್ತಾನ ಸರ್ವಾಧಿಕಾರಿಯನ್ನಾಗಿ ಪಾಕಿಸ್ತಾನ ಹೊರಟಿದೆ. ಇದಕ್ಕಾಗಿ 27ನೇ ತಿದ್ದುಪಡಿ ಮಸೂದೆಯನ್ನು ಪಾಕಿಸ್ತಾನ ಸೆನೆಟ್ ಮಂಡಿಸಿದೆ. ಈ ಮಸೂದೆಯಲ್ಲಿ ಅಸಿಮ್ ಮುನೀರ್ ಅವರನ್ನು ಪಾಕಿಸ್ತಾನದ ರಕ್ಷಣಾ ಪಡೆಗಳ ಮುಖ್ಯಸ್ಥರನ್ನಾಗಿ ಮಾಡಲಾಗುತ್ತದೆ. ಈ ಮೂಲಕ ಅವರಿಗೆ ಪೂರ್ಣ ಮಿಲಿಟರಿ ಕಮಾಂಡ್ ಮತ್ತು ವಿವಿಧ ರೀತಿಯ ಸವಲತ್ತುಗಳನ್ನು ನೀಡಲು ಪ್ರಸ್ತಾಪಿಸಲಾಗಿದೆ.
ಪಾಕಿಸ್ತಾನದ 27ನೇ ಸಾಂವಿಧಾನಿಕ ತಿದ್ದುಪಡಿಯು ಸೇನಾ ಮುಖ್ಯಸ್ಥರನ್ನು ದೇಶದ ರಕ್ಷಣಾ ಪಡೆಗಳ ಮುಖ್ಯಸ್ಥರನ್ನಾಗಿ ಮಾಡುತ್ತದೆ. ಅವರು ಸೈನ್ಯ, ನೌಕಾಪಡೆ ಮತ್ತು ವಾಯುಪಡೆಗೆ ಆದೇಶ ನೀಡಬಹುದಾಗಿದೆ. ಮಸೂದೆಯ ಕರಡಿನ ಪ್ರಕಾರ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರ ನೇತೃತ್ವದಲ್ಲಿ ಈ ಬದಲಾವಣೆಗಳನ್ನು ಜಾರಿಗೆ ತರಲಾಗಿದೆ. ಇದು ಜನರಲ್ ಅಸಿಮ್ ಮುನೀರ್ ಅವರಿಗೆ ಪಾಕಿಸ್ತಾನವನ್ನು ಸಂಪೂರ್ಣ ಮಿಲಿಟರಿ ದೇಶವಾಗಿ ಪರಿವರ್ತಿಸುವ ಅಧಿಕಾರವನ್ನು ನೀಡುತ್ತದೆ.
ಈ ಮಸೂದೆಗೆ ಈಗಾಗಲೇ ಫೆಡರಲ್ ಕ್ಯಾಬಿನೆಟ್‌ನಿಂದ ಅನುಮೋದನೆ ನೀಡಲಾಗಿದ್ದು, ಶನಿವಾರ ಸೆನೆಟ್‌ನಲ್ಲಿ ಮಸೂದೆಯನ್ನು ಮಂಡಿಸಲಾಗಿದೆ ಮತ್ತು ಕಾನೂನು ಮತ್ತು ನ್ಯಾಯದ ಸ್ಥಾಯಿ ಸಮಿತಿಗಳ ಪರಿಶೀಲನೆಗಾಗಿ ಸೂಚಿಸಲಾಗಿದೆ. ಸೆನೆಟ್ ನಲ್ಲಿ ಪಾಕಿಸ್ತಾನದ ಕಾನೂನು ಸಚಿವ ಅಜಮ್ ನಜೀರ್ ತರಾರ್ ಅವರು ಈ ಮಸೂದೆಯನ್ನು ಮಂಡಿಸಿದರು.
ಮಿಲಿಟರಿ ನಾಯಕತ್ವದೊಂದಿಗೆ ಫೆಡರಲ್ ಸಾಂವಿಧಾನಿಕ ನ್ಯಾಯಾಲಯದ ರಚನೆ ಮತ್ತು ಹೈಕೋರ್ಟ್ ನ್ಯಾಯಾಧೀಶರ ನೇಮಕ ಪ್ರಕ್ರಿಯೆಯ ಕುರಿತು ಕೂಡ ಇದರಲ್ಲಿ ಪ್ರಸ್ತಾಪಿಸಲಾಗಿದೆ.
ಮಸೂದೆ ಜಾರಿಗೆ ಬಂದ ಬಳಿಕ ಸೇನಾ ಮುಖ್ಯಸ್ಥರೇ ರಕ್ಷಣಾ ಪಡೆಗಳ ಮುಖ್ಯಸ್ಥರಾಗಲಿದ್ದಾರೆ. ಇವರು ಮೂರು ಮಿಲಿಟರಿ ವಿಭಾಗಗಳಿಗೆ ನೇರವಾಗಿ ಆಜ್ಞೆ ನೀಡಬಹುದಾಗಿದೆ. ಈ ಮಸೂದೆ ಮೂಲಕ ಜಂಟಿ ಮುಖ್ಯಸ್ಥರ ಸಮಿತಿಯ (CJCSC) ಅಧ್ಯಕ್ಷರ ಕಚೇರಿಯನ್ನು ರದ್ದುಗೊಳಿಸಲಾಗುತ್ತದೆ. ಪ್ರಸ್ತುತ ಇರುವವರ ಅಧಿಕಾರಾವಧಿ ನವೆಂಬರ್ 27ರಂದು ಕೊನೆಯಲಾಗಿದೆ. ಬಳಿಕ ಯಾವುದೇ ಹೊಸ ನೇಮಕಾತಿ ನಡೆಸಲಾಗುವುದಿಲ್ಲ. ರಕ್ಷಣಾ ಪಡೆಗಳ ಮುಖ್ಯಸ್ಥರ ಶಿಫಾರಸಿನ ದೇಶದ ಪ್ರಧಾನಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಕಾನೂನು ಸಚಿವ ತರಾರ್ ತಿಳಿಸಿದ್ದಾರೆ.
ಈ ಮಸೂದೆ ಜಾರಿಯಾದ ಮೇಲೆ ಜನರಲ್ ಅಸಿಮ್ ಮುನೀರ್ ಅವರಿಗೆ ಫೀಲ್ಡ್ ಮಾರ್ಷಲ್ ಬಿರುದನ್ನು ಔಪಚಾರಿಕವಾಗಿ ನೀಡಲಾಗುತ್ತದೆ. ಇದು ರಾಷ್ಟ್ರೀಯ ವೀರರಿಗೆ ನೀಡಲಾಗುವ ಶ್ರೇಣಿ ಅಥವಾ ನೇಮಕಾತಿಯಲ್ಲ. ಜೀವನಪರ್ಯಂತ ಇಟ್ಟುಕೊಳ್ಳುವ ಬಿರುದಾಗಿದೆ. ಇದನ್ನು ರದ್ದುಗೊಳಿಸುವ ಅಧಿಕಾರ ಕೇವಲ ಸಂಸತ್ತಿಗೆ ಇರುತ್ತದೆ.
ಈ ಬಿರುದು ಪಡೆದವರು ವಿವಿಧ ಸವಲತ್ತುಗಳನ್ನು ಪಡೆಯುತ್ತಾರೆ ಜೊತೆಗೆ ಜೀವನಪರ್ಯಂತ ಸಮವಸ್ತ್ರದಲ್ಲಿ ಉಳಿಯಬೇಕಾಗುತ್ತದೆ. ಅವರ ಸಕ್ರಿಯ ಸೇವೆಯ ಬಳಿಕ ರಾಷ್ಟ್ರದ ಹಿತಾಸಕ್ತಿಗಾಗಿ ಅವರು ಕರ್ತವ್ಯ ನಿರ್ವಹಿಸಬಹುದಾಗಿದೆ. ಇನ್ನು ಕರಡು ವಿಧಿ 47 ಮತ್ತು 248 ರ ವಿನಾಯಿತಿಯಲ್ಲಿ ಇವರಿಗೆ ಆಜೀವ ಕಾನೂನು ರಕ್ಷಣೆಯನ್ನು ಒದಗಿಸಲಾಗುತ್ತದೆ. ಇನ್ನು ನೇಮಕಾತಿಗಳಿಗೆ ಪ್ರಧಾನ ಮಂತ್ರಿಯ ಸಲಹೆ ಪಡೆಯಬಹುದು. ಆದರೆ ಅಧಿಕಾರ ರಕ್ಷಣಾ ಪಡೆಗಳ ಮುಖ್ಯಸ್ಥರಿಗೆ ಮಾತ್ರ ಇರುತ್ತದೆ.
27ನೇ ಸಾಂವಿಧಾನಿಕ ತಿದ್ದುಪಡಿ ಕರಡಿನಲ್ಲಿರುವ ಕೆಲವು ಷರತ್ತುಗಳನ್ನು ಉಲ್ಲೇಖಿಸಲಾಗಿದೆ. ಅವುಗಳೆಂದರೆ ಮುಖ್ಯವಾಗಿ..ಸೇನಾ ಮುಖ್ಯಸ್ಥರು ಏಕಕಾಲದಲ್ಲಿ ರಕ್ಷಣಾ ಪಡೆಗಳ ಮೂರು ಸೇವೆಗಳ ಮುಖ್ಯಸ್ಥರಾಗಿರುತ್ತಾರೆ.ನವೆಂಬರ್ ತಿಂಗಳಿನಿಂದ ಜಂಟಿ ಮುಖ್ಯಸ್ಥರ ಸಮಿತಿ ಹುದ್ದೆಯನ್ನು ರದ್ದುಪಡಿಸಲಾಗಿದೆ. ರಾಷ್ಟ್ರೀಯ ಕಾರ್ಯತಂತ್ರದ ಕಮಾಂಡ್- ಪರಮಾಣು ನಿರ್ಧಾರಗಳಲ್ಲಿ ನಾಗರಿಕ ಪಾತ್ರಕ್ಕೆ ನಿರ್ಬಂಧ ವಿಧಿಸಲಾಗುತ್ತದೆ.ಫೀಲ್ಡ್ ಮಾರ್ಷಲ್ ಬಿರುದು ಪ್ರದಾನ.ಫೀಲ್ಡ್ ಮಾರ್ಷಲ್ ಗೆ ಕಾನೂನು ಮತ್ತು ರಾಜಕೀಯ ವಿನಾಯಿತಿ ಪ್ರಧಾನ ಮಂತ್ರಿಯ ಸಲಹೆಗಳನ್ನು ಮಿಲಿಟರಿ ಮುಖ್ಯಸ್ಥರು ಪಡೆದುಕೊಳ್ಳಬಹುದು. ಆದರೆ ನಿರ್ಧಾರ ತೆಗೆದುಕೊಳ್ಳುವ ಪೂರ್ಣ ಅಧಿಕಾರ ಅವರಿಗೆ ಮಾತ್ರ ಇರುತ್ತದೆ.








