ಬೆಂಗಳೂರು:
ಮಾಜಿ ಸಚಿವ ವರ್ತೂರು ಪ್ರಕಾಶ್ ಅವರ ಹೆಸರನ್ನು ಬಳಸಿಕೊಂಡು ಜ್ಯುವೆಲ್ಲರಿ ಮಾಲೀಕರೊಬ್ಬರಿಗೆ ರೂ. 2.4 ಕೋಟಿ ವಂಚಿಸಿದ ಆರೋಪದ ಮೇಲೆ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಬಂಧಿಸಿರುವ ಶ್ವೇತಾ ಗೌಡ ವಿರುದ್ಧ ಎರಡನೇ ಎಫ್‌ಐಆರ್ ದಾಖಲಾಗಿದೆ.
ಈ ನಡುವೆ ಶಿವಮೊಗ್ಗದ ಮತ್ತೊಬ್ಬ ಜ್ಯುವೆಲ್ಲರಿ ಮಾಲೀಕ ಪೊಲೀಸರಿಗೆ ದೂರು ನೀಡಿದ್ದು, ಆಕೆ ರೂ. 20 ಲಕ್ಷ ವಂಚಿಸಿದ್ದಾರೆ ಎಂದು ತಿಳಿಸಿದ್ದಾರೆ. ಶಿವಮೊಗ್ಗದ ಸಾಗರದ ಪ್ರಗತಿ ಜ್ಯುವೆಲ್ಲರಿ ಅಂಗಡಿಯ ಮಾಲೀಕ ಆರ್. ಬಾಲರಾಜ್ ಸೇಠ್ ದಾಖಲಿಸಿರುವ ಎಫ್ ಐಆರ್ ನಲ್ಲಿ ಶ್ವೇತಾ ಅವರನ್ನು ನಗರದ ಇನ್ನೊಬ್ಬ ಆಭರಣ ಅಂಗಡಿ ಮಾಲೀಕ ಸಂಜಯ್ ಎಂಬುವರು ತನಗೆ ಪರಿಚಯಿಸಿದ್ದಾಗಿ ತಿಳಿಸಿದ್ದಾರೆ.
ಡಿಸೆಂಬರ್ 11 ರಂದು ನಗರದಲ್ಲಿ ಕೆಫೆ ಶಾಪ್ ನಲ್ಲಿ ಭೇಟಿಯಾದ ತನ್ನ ಸಹೋದರನಿಂದ ರೂ. 20 ಲಕ್ಷಕ್ಕೂ ಹೆಚ್ಚು ಮೌಲ್ಯದ 250 ಗ್ರಾಂ ತೂಕದ ಆಂಟಿಕ್ ಆಭರಣಗಳನ್ನು ಶ್ವೇತಾ ಅವರು ಪಡೆದಿದ್ದಾರೆ. ರೂ. 5 ಲಕ್ಷದ ಎರಡು ಚೆಕ್ ಹಾಗೂ ರೂ. 6 ಲಕ್ಷ ಮೊತ್ತದ ಮತ್ತೊಂದು ಚೆಕ್ ನ್ನು ಆಕೆ ನೀಡಿದ್ದು, ಉಳಿದ ರೂ. 4.75 ಲಕ್ಷ ಹಣವನ್ನು RTGS ಮೂಲಕ ಕಳುಹಿಸುವುದಾಗಿ ಹೇಳಿದ್ದಾರೆ. ಆದರೆ, ಹಣವನ್ನೂ ಆಕೆ ಕಳುಹಿಸಿಲ್ಲ. ಮೂರು ಚೆಕ್ ಗಳು ಅಮಾನ್ಯವಾಗಿವೆ. ತದನಂತರ ಆಕೆಯನ್ನು ಪ್ರಶ್ನಿಸಿದಾಗ ಬ್ಯಾಂಕ್ ನಲ್ಲಿ ಸಮಸ್ಯೆಯಿರುವುದಾಗಿ ಹೇಳಿದ್ದರು. ತದನಂತರ ಡಿಸೆಂಬರ್ 14 ರಂದು ಆಕೆಗೆ ಕರೆ ಮಾಡಿದಾಗ ಫೋನ್ ಸ್ವಿಚ್ ಆಫ್ ಆಗಿತ್ತು ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸಂಜಯ್‌ಗೆ ಕರೆ ಮಾಡಿದಾಗ ಅವರಿಗೂ ಶ್ವೇತಾ ವಂಚನೆ ಮಾಡಿರುವುದು ತಿಳಿಯಿತು. ಬಳಿಕ ಡಿಸೆಂಬರ್ 18 ರಂದು ದೂರು ದಾಖಲಿಸಿರುವುದಾಗಿ ಬಾಲರಾಜ್ ಸೇಠ್ ತಿಳಿಸಿದ್ದಾರೆ. ಶ್ವೇತಾಗೌಡ ಸದ್ಯ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.
