ಹುಬ್ಬಳ್ಳಿ:
ಹುಬ್ಬಳ್ಳಿಯಲ್ಲಿ ಕಳೆದ ತಿಂಗಳು ನೇಹಾ ಪಾಟೀಲ್ ಕೊಲೆ ಕೇಸ್ ಮಾಸುವ ಮುನ್ನವೇ ಅದೇ ಮಾದರಿಯಲ್ಲಿ ಹುಬ್ಬಳ್ಳಿಯಲ್ಲಿ ಮತ್ತೊಂದು ಯುವತಿಯ ಹತ್ಯೆಯಾಗಿದೆ.
ಹುಬ್ಬಳ್ಳಿಯ ದಾಜಿಬಾನಪೇಟೆ ಸಮೀಪದ ವೀರಾಪುರ ಓಣಿಯಲ್ಲಿ ನಿನ್ನೆ ಬುಧವಾರ ಬೆಳಗ್ಗೆ 20 ವರ್ಷದ ಯುವತಿಯನ್ನು 22 ವರ್ಷದ ಯುವಕನೊಬ್ಬ ಕೊಲೆ ಮಾಡಿದ್ದಾನೆ. ಆರೋಪಿ ವಿಶ್ವನಾಥ್ ಅಲಿಯಾಸ್ ಗಿರೀಶ್ ಸಾವಂತ್ ಎಂಬಾತ ಅಂಜಲಿ ಅಂಬಿಗರ ಮನೆಯಲ್ಲಿ ಯುವತಿ ಮೇಲೆ ಹಲ್ಲೆ ನಡೆಸಿ, ಪದೇ ಪದೇ ಚಾಕುವಿನಿಂದ ಇರಿದು ಕತ್ತು ಸೀಳಿ ಪರಾರಿಯಾಗಿದ್ದಾರೆ. ಇದು ಭಾರೀ ಸುದ್ದಿ ಮಾಡಿದೆ.
ಅಂಜಲಿ ಮೃತದೇಹವನ್ನು ಹುಬ್ಬಳ್ಳಿಯ ಕಿಮ್ಸ್ ಶವಗಾರದಲ್ಲಿ ಇರಿಸಲಾಗಿದ್ದು, ನೇಹಾ ಹಿರೇಮಠ್ ತಂದೆ ನಿರಂಜನ ಹಿರೇಮಠ ಅವರು ಭೇಟಿ ನೀಡಿದ್ದರು. ನಿರಂಜನ ಹಿರೇಮಠ ಅವರು ವೀರಾಪೂರ ಓಣಿಯ ಕಾಂಗ್ರೆಸ್ ಕಾರ್ಪೊರೇಟರ್ ಕೂಡ ಆಗಿದ್ದಾರೆ. ತಮ್ಮ ಏರಿಯಾದಲ್ಲಿನ ಯುವತಿ ಹತ್ಯೆ ಆಗಿರುವುದಕ್ಕೆ ನಿರಂಜನ ಹಿರೇಮಠ, ಹುಬ್ಬಳ್ಳಿ ಪೊಲೀಸರು ಹಾಗೂ ರಾಜ್ಯ ಸರ್ಕಾರದ ಮೇಲೆ ಕಿಡಿಕಾರಿದ್ದಾರೆ.
ನನ್ನ ವಾರ್ಡ್‌ನಲ್ಲಿ ಇಂತಹ ಘಟನೆಯಾಗಿರುವುದನ್ನ ನಾನು ಖಂಡಿಸುತ್ತೇನೆ. ನನ್ನ ಮಗಳು ನೇಹಾ ಹತ್ಯೆ ಆಗಿ ಇನ್ನೂ ಒಂದು ತಿಂಗಳು ಕಳೆದಿಲ್ಲ. ಈ ರೀತಿ ಘಟನೆ ಮತ್ತೆ ಆಗಿದೆ. ನನ್ನ ಮಗಳು ಹತ್ಯೆಯಾದಾಗಲೇ ಈ ರೀತಿಯ ಮತ್ತೊಂದು ಘಟನೆಯಾಗಬಾರದು ಅಂತ ಹೇಳಿದ್ದೆ. ಆದರೂ ಇಂತಹ ಘಟನೆ ನಡೆದಿದೆ ಇದಕ್ಕೆ ಇಲ್ಲಿನ ಪೊಲೀಸ್ ಕಮೀಷನರ್ ಅವರೇ ಕಾರಣ ಎಂದು ಆರೋಪಿಸಿದರು.
ಹುಬ್ಬಳ್ಳಿ ಪೊಲೀಸ್ ಕಮೀಷನರ್ ಸರಿಯಾದ ಏನು ಕ್ರಮ ಕೈಗೊಳ್ಳುತ್ತಿಲ್ಲ. ಸರಿಯಾಗಿ ಕೆಲಸ ಮಾಡಲು ಇಷ್ಟ ಇಲ್ಲದಿದ್ದರೇ ರಾಜೀನಾಮೆ ಕೊಟ್ಟು ಹೋಗಿ. ಅಂಜಲಿ ಕೂಡ ನನ್ನ ಮಗಳು ಇದ್ದ ಹಾಗೆ. ನನ್ನ ಮಗಳು ನೇಹಾಳ ಹತ್ಯೆ ವಿಚಾರವಾಗಿ ಯಾವ ರೀತಿ ಹೋರಾಟ ನಡೆದಿತ್ತು ಅದೇ ರೀತಿ ಇವಳ ಹತ್ಯೆಯನ್ನ ಖಂಡಿಸಬೇಕು ಎಂದು ನಿರಂಜನ ಹಿರೇಮಠ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಎಲ್ಲಾ ಕಡೆ ಯುವಕರು ಗಾಂಜಾ ಅಫೀಮು ಅಂತ ದಾರಿ ತಪ್ಪುತ್ತಿದ್ದಾರೆ.ಹುಬ್ಬಳ್ಳಿ ಪೊಲೀಸರು ಇದರ ಬಗ್ಗೆ ಗಮನ ಹರಿಸುತ್ತಿಲ್ಲ. ಕರ್ನಾಟಕಕ್ಕೂ ಉತ್ತರಪ್ರದೇಶ, ಹೈದರಾಬಾದ್ ಮಾದರಿಯಲ್ಲೇ ಎನ್‌ಕೌಂಟರ್ ಆಗಬೇಕು. ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರಂತಹ ಸಿಎಂ ನಮ್ಮ ರಾಜ್ಯಕ್ಕೂ ಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.