ಹುಳಿಯಾರು:
ಹಿಂದೂಗಳ ಪವಿತ್ರ ಗಂಥಗಳಾದ ರಾಮಾಯಣ, ಮಹಾಭಾರತವನ್ನು ವಿದೇಶಿಗರೂ ಒಪ್ಪಿ ಅಪ್ಪಿದ್ದಾರೆ. ಆದರೆ ಭಾರತೀಯರಲ್ಲೇ ಕೆಲವರು ಖ್ಯಾತಿಗಾಗಿ, ಪ್ರಶಸ್ತಿಗಳಾಗಿ, ಬುದ್ದಿಜೀವಿಗಳೆನ್ನುವ ಪಟ್ಟಕ್ಕಾಗಿ ಮೂಗು ಮುರಿಯುತ್ತಿರುವುದು ದುರಾದೃಷ್ಠಕರ ಎಂದು ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಅವರು ಹೇಳಿದರು.
ಹುಳಿಯಾರಿನ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಸ್ಕೂಲ್‍ನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸಂಘಟಿಸಿದ್ದ 3 ನಿಮಿಷದಲ್ಲಿ ರಾಮಾಯಣ ಮತ್ತು ಮಹಾಭಾರತದ ಕಥೆ ಹೇಳುವ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಲೇಶಿಯದಲ್ಲಿ ಅನೇಕರು ಹೆಸರು ಹಿಂದೂ ಪುರಾಣದ ಪಾತ್ರಧಾರಿಗಳ ಹೆಸರನ್ನು ಇಟ್ಟಿದ್ದಾರೆ. ಸಂಸತ್ ಭವನದಲ್ಲಿ ಧರ್ಮೋ ರಕ್ಷತಿ ರಕ್ಷಿತಃ ಎಂದು ಬರೆಯಲಾಗಿದೆ. ಆದರೆ ಧರ್ಮ, ಧರ್ಮ ಗ್ರಂಥದ ಬಗ್ಗೆ ಮಾತನಾಡಿದರೆ ಹಿಂದೂವಾದಿ ಪಟ್ಟ ಕಟ್ಟುತ್ತಾರೆ. ಹೀಗಾದರೆ ಧರ್ಮ ರಕ್ಷಿಸುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
ರಾಮಾಯಣ, ಮಹಾಬಾರತ, ಭಗದ್ಗೀತೆಯಲ್ಲಿನ ಸಂದೇಶಗಳು ಸರ್ವ ಕಾಲಕ್ಕೂ, ಸರ್ವರಿಗೂ ಬದುಕಿನ ದಾರಿದೀಪಗಳು. ಇವುಗಳನ್ನು ಅಧ್ಯಾಯನ ಮಾಡಿಯೇ ಅನೇಕರು ಪಿಎಚ್‍ಡಿ ಅವಾರ್ಡ್ ಪಡೆದಿದ್ದಾರೆ. ಇವುಗಳನ್ನು ಜಾತಿ, ಧರ್ಮದ ತಾರತಮ್ಯವಿಲ್ಲದೆ ಅಧ್ಯಯನ ಮಾಡಿ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಶಾಲಾ ಪಠ್ಯಕ್ರಮದಲ್ಲಿ ಸೇರಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
3 ನಿಮಿಷದಲ್ಲಿ ರಾಮಾಯಣ ಮತ್ತು ಮಹಾಭಾರತದ ಕಥೆ ಹೇಳುವ ಸ್ಪರ್ಧೆಯ ರಾಮಾಯಣ ವಿಭಾಗದಲ್ಲಿ ಸಿ.ಕೆ.ಸುಹಸ್, ಕೃತಿಕಾ, ದೀಕ್ಷಿತಾ, ಮಹಾಭಾರತದ ವಿಭಾಗದಲ್ಲಿ ವರ್ಷಿತಾ, ಪ್ರಕೃತಿ ಹಾಗೂ ಸಂಜನಾ ಬಹುಮಾನ ಪಡೆದುಕೊಂಡರು. ತೀರ್ಪುಗಾರರಾಗಿ ಆಯುರ್ವೇದ ವೈದ್ಯ ಬಸವರಾಜ ಪಂಡಿತ್, ಲಿಂಗಪ್ಪನಪಾಳ್ಯ ಚಿದಾನಂದ್ ಆಗಮಿಸಿದ್ದರು.
ಬಹುಮಾನ ವಿಜೇತರಿಗೆ ಹುಳಿಯಾರು ಕರವೇ ಅಧ್ಯಕ್ಷ ಕೋಳಿಶ್ರೀನಿವಾಸ್, ಕಾರ್ಯದರ್ಶಿ ಲಕ್ಷ್ಮೀಕಾಂತ್, ಮೆಡಿಕಲ್ ಚನ್ನಬಸವಯ್ಯ, ಅಂಜನ್ ಕುಮಾರ್, ಬಸವರಾಜು, ಹರೀಶ್ ಅವರುಗಳು ಬಹುಮಾನ ವಿತರಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ