ನರೇಂದ್ರ ಮೋದಿಯವರ ಕೈ ಬಲಪಡಿಸಲು ಬದ್ಧರಾಗಿದ್ದೇವೆ

ಶಿರಾ

      ತಾಲ್ಲೂಕಿನ ಜೆಡಿಎಸ್ ಮುಖಂಡ ಚಿದಾನಂದ್ ಎಂ.ಗೌಡ ಜೆಡಿಎಸ್ ತೊರೆದು ಬಿಜೆಪಿ ಪಕ್ಷವನ್ನು ಸೇರಿದ ಹಿನ್ನೆಲೆಯಲ್ಲಿ ನಗರದ ಸೇವಾಸದನದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಲಾಯಿತು.

       ಚಿದಾನಂದ್ ಎಂ.ಗೌಡ ಮಾತನಾಡಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‍ನಿಂದ ಟಿಕೆಟ್ ಲಭ್ಯವಾಗದಿದ್ದಾಗ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಜಯಗೊಂಡಿದ್ದೇನಾದರೂ ಸಂಘಟನಾಶಕ್ತಿಯನ್ನು ನಾನು ಕಳೆದುಕೊಂಡಿಲ್ಲ. ಚಿತ್ರದುರ್ಗ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಅನೇಕ ಬಿಜೆಪಿ ಮುಖಂಡರು ನನ್ನನ್ನು ಸಂಪರ್ಕಿಸಿದಾಗ ಅವರ ಒತ್ತಡಕ್ಕೆ ಹಾಗೂ ನನ್ನ ಬೆಂಬಲಿಗರ ಒತ್ತಡದಿಂದ ಬೇಷರತ್ತಾಗಿ ಯಾವುದೇ ಆಕಾಂಕ್ಷೆಗಳನ್ನು ಇಟ್ಟುಕೊಳ್ಳದೆ ಬಿಜೆಪಿಗೆ ಸೇರ್ಪಡೆಗೊಂಡಿದ್ದೇನೆ. ಗುರುವಾರದಂದು ಜಿಲ್ಲಾ ಬಿ.ಜೆ.ಪಿ. ಮುಖಂಡರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇನೆ ಎಂದರು.

        ಈ ಹಿಂದೆ ಬೋಟ್ ಹತ್ತಿದ್ದೆನು…ಈಗ ಹಡಗನ್ನು ಹತ್ತಿದ್ದೇನೆ ಎಂದು ಮಾರ್ಮಿಕವಾಗಿ ಮಾತನಾಡಿದ ಚಿದಾನಂದ್ ಜೆಡಿಎಸ್ ಪಕ್ಷವನ್ನು ಬೋಟ್‍ಗೂ ಬಿಜೆಪಿಯನ್ನು ಹಡಗಿಗೆ ಹೋಲಿಸಿದರಲ್ಲದೆ ಬಿಜೆಪಿ ಪಕ್ಷವು ಒಂದು ಹಡಗಿನಂತಿದ್ದು ಇದರಲ್ಲಿ ಪ್ರಾಮಾಣಿಕರಿಗೆ ಅವಕಾಶಗಳಿವೆ ಎಂದು ನಂಬಿದ್ದೇನೆ ಎಂದರು.

        ತಾಲ್ಲೂಕಿನಲ್ಲಿ ನೂರಾರು ಸಮಸ್ಯೆಗಳು ತಾಂಡವಾಡುತ್ತಿದ್ದು ಈ ಎಲ್ಲಾ ಸಮಸ್ಯೆಗಳಿಗೆ ಶಿಸ್ತಿನ ಪಕ್ಷವಾದ ಬಿಜೆಪಿ ಪ್ರಾಮಾಣಿಕವಾಗಿ ಸ್ಪಂಧಿಸುತ್ತದೆ ಎಂಬ ನಂಬಿಕೆಯಿಂದ ಹಾಗೂ ನರೇಂದ್ರ ಮೋದಿಯವರ ದೇಶದ ಅಭಿವೃದ್ಧಿಯ ಚಿಂತನೆಯನ್ನು ಮೆಚ್ಚಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇನೆ. ದೇಶದಲ್ಲಿನ ಭ್ರಷ್ಠಾಚಾರ ಮುಕ್ತ ಆಡಳಿತ ಯುವ ಜನತೆಯ ಗಮನ ಸೆಳೆದಿದ್ದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ನಾರಾಯಣಸ್ವಾಮಿ ಅವರ ಗೆಲುವಿಗೆ ಪಕ್ಷದ ಎಲ್ಲಾ ಮುಖಂಡರು ಪ್ರಾಮಾಣಿಕವಾಗಿ ಮತ ಯಾಚನೆ ಮಾಡುವುದಾಗಿ ಭರವಸೆ ನೀಡಿದರು.

        ರಾಜ್ಯದ ಒಕ್ಕಲಿಗ ವರ್ಗಕ್ಕೆ ಓಬಿಸಿ ಮೀಸಲಾತಿ ಲಭ್ಯವಾಗಿದ್ದು ಕುಂಚಿಟಿಗ ವರ್ಗಕ್ಕೂ ಈ ಸೌಲಭ್ಯ ಒದಗಿಸಲು ಸಮ್ಮಿಶ್ರ ಸರ್ಕಾರವನ್ನು ಕುಂಚಿಟಿಗ ಸಮುದಾಯ ಒತ್ತಾಯಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಆಸಕ್ತಿಯೂ ಸಮ್ಮಿಶ್ರ ಸರ್ಕಾರಕ್ಕಿಲ್ಲ ಎಂದ ಚಿದಾನಂದ್‍ಗೌಡ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ಮುಂದಿನ ಮೂರು ವರ್ಷಗಳ ಅವಧಿಯೊಳಗೆ ತಾಲ್ಲೂಕಿನ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಅನ್ಯ ಪಕ್ಷಗಳಿಗೆ ಬಿ.ಜೆ.ಪಿ. ಪ್ರಭಲವಾಗಿ ಸ್ಪರ್ಧೆಯೊಡ್ಡಲಿದ್ದು ಇದಕ್ಕಾಗಿ ಪಕ್ಷದ ಎಲ್ಲಾ ಮುಖಂಡರು ಕಟಿಬದ್ಧರಾಗಿದ್ದೇವೆ ಎಂದು ತಿಳಿಸಿದರು.

        ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಎಸ್.ಆರ್.ಗೌಡ ಮಾತನಾಡಿ ದೇಶದ ಸುಭದ್ರತೆಗೆ ಬಿಜೆಪಿ ಪಕ್ಷವನ್ನು ಮತದಾರರು ಬೆಂಬಲಿಸುವುದು ಅಗತ್ಯವಾಗಿದೆ. ಅಧಿಕಾರ ಹಾಗೂ ವೋಟಿಗಾಗಿ ಅನ್ಯ ಪಕ್ಷಗಳು ಜಾತಿಯನ್ನು ಮುಂದು ಮಾಡಿಕೊಮಡು ಹೋಗುತ್ತಿವೆಯೇ ಹೊರತು ಬಿಜೆಪಿ ಪಕ್ಷ ಜಾತಿಯನ್ನು ಗುರಿಯನ್ನಾಗಿಸಿಕೊಮಡಿಲ್ಲ. ಈ ಪಕ್ಷದಲ್ಲಿ ಎಲ್ಲಾ ವರ್ಗದ ಜನರೂ ಇದ್ದಾರೆ. ಚಿದಾನಂದ್ ಎಂ.ಗೌಡರು ಪಕ್ಷಕ್ಕೆ ಸೇರ್ಪಡೆಗೊಂಡ ಪರಿಣಾಮ ಪಕ್ಷಕ್ಕೆ ಒಂದು ಶಕ್ತಿ ಬಂದಂತಾಗಿದೆ. ಎಲ್ಲರೂ ಒಗ್ಗೂಡಿ ನಾರಾಯಣಸ್ವಾಮಿ ಅವರ ಪರ ವ್ಯಾಪಕ ಚುನಾವಣಾ ಪ್ರಚಾರ ಕೈಗೊಂಡಿದ್ದೇವೆ ಎಂದರು.

         ನಗರ ಬಿಜೆಪಿ ಘಟಕದ ಅಧ್ಯಕ್ಷ ಬಿ.ಗೋವಿಂದಪ್ಪ ಮಾತನಾಡಿ ಶಿರಾ ಭಾಗದಲ್ಲಿ ಹಲವು ವರ್ಷಗಳ ಹಿಂದೆ ಪಕ್ಷದ ದ್ವಜ ಹಿಡಿಯುವವರು ಕಡಿಮೆ ಸಂಖ್ಯೆಯಲ್ಲಿದ್ದರು, ಈಗ ಪಕ್ಷದ ಮುಖಮಡರ ಸಂಖ್ಯೆ ಗಜ ಗಾತ್ರವಾಗಿದ್ದು ಎಲ್ಲರಲ್ಲೂ ಕ್ರಿಯಾಶೀಲತೆ ಇದೆ. ಚಿದಾನಂದ್ ಅವರ ಸೇರ್ಪಡೆಯಿಂದ ಪಕ್ಷಕ್ಕೆ ಬಲ ಬಮದಿದ್ದು ಅವರು ಪಕ್ಷವನ್ನು ಸೇರ್ಪಡೆಗೊಂಡ ಕಾರಣದ ಹಿಂದೆ ಯಾರೂ ಕೂಡಾ ತಪ್ಪು ಹುಡುಕುವ ಅಗತ್ಯವಿಲ್ಲ. ಯಾವುದೇ ಆಸೆ-ಆಕಾಂಕ್ಷೆಗಳನ್ನು ಹಾಗೂ ಬೇಡಿಕೆಗಳನ್ನು ಮುಂದಿಡದೆ ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ಕಟಿ ಬದ್ಧರಾಗಿ ಚಿದಾನಂದ್ ಬಿಜೆಪಿ ಸೇರಿದ್ದಾರೆ ಎಂದು ಗೋವಿಂದಪ್ಪ ತಿಳಿಸಿದರು.

          ತಾ.ಪಂ. ಉಪಾಧ್ಯಕ್ಷ ರಂಗನಾಥಗೌಡ, ಕಗ್ಗಲಡು ರಾಜಶೇಖರ್, ನಿಡಗಟ್ಟೆ ಚಂದ್ರಶೇಖರ್, ಲಕ್ಷ್ಮೀನಾರಾಯಣ್, ಶ್ರೀಧರ್, ರಘು, ಜೈರಾಮಯ್ಯ ಸೇರಿದಂತೆ ಬಿ.ಜೆ.ಪಿ. ಪಕ್ಷದ ಅನೇಕ ಮುಖಂಡರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link