ಶಾಹಿ ಜಾಮಾ ಮಸೀದಿಯಲ್ಲಿ ಹವನ- ಪೂಜೆಗೆ ಯತ್ನಿಸಿದ ದೆಹಲಿಯ ಮೂವರ ಬಂಧನ

ಸಂಭಲ್: 

   ಇಲ್ಲಿನ ಶಾಹಿ ಜಾಮಾ ಮಸೀದಿಯಲ್ಲಿ ಹವನ ಮತ್ತು ಪೂಜೆ ಸೇರಿದಂತೆ ಹಿಂದೂ ಆಚರಣೆಗಳನ್ನು ಮಾಡಲು ಯತ್ನಿಸಿದ ಆರೋಪದ ಮೇಲೆ ದೆಹಲಿಯ ಮೂವರನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಶುಕ್ರವಾರದ ಪ್ರಾರ್ಥನೆ ಇದ್ದ ಕಾರಣ ಆಡಳಿತವು ಮಸೀದಿಯಲ್ಲಿ ಈಗಾಗಲೇ ಭಾರಿ ಭದ್ರತೆಯನ್ನು ನಿಯೋಜಿಸಿತ್ತು.

   ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣ ಕುಮಾರ್ ಬಿಷ್ಣೋಯ್ ಮಾತನಾಡಿ, ‘ಮೂವರು ವ್ಯಕ್ತಿಗಳು ಕಾರಿನಲ್ಲಿ ಬಂದರು ಮತ್ತು ವಿವಾದಿತ ಸ್ಥಳದ ಬಳಿ ಅವರನ್ನು ವಶಕ್ಕೆ ಪಡೆಯಲಾಯಿತು. ಅವರನ್ನು ಪೊಲೀಸ್ ಠಾಣೆಗೆ ಕಳುಹಿಸಲಾಗಿದೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತಂದಿದ್ದಕ್ಕಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಭವಿಷ್ಯದಲ್ಲಿ ಸಂಭಲ್‌ಗೆ ಪ್ರವೇಶಿಸದಂತೆ ಅವರಿಗೆ ಎಚ್ಚರಿಕೆ ನೀಡಲಾಗುವುದು’ ಎಂದು ಹೇಳಿದರು.

  ಬಂಧಿತರಲ್ಲಿ ಒಬ್ಬರಾದ ಸನಾತನ್ ಸಿಂಗ್ ಮಾತನಾಡಿ, ‘ನಾವು ವಿಷ್ಣು ಹರಿಹರ ದೇವಸ್ಥಾನದಲ್ಲಿ ಹವನ ಮತ್ತು ಯಜ್ಞ ಮಾಡಲು ಬಂದಿದ್ದೇವೆ. ಆದರೆ, ಪೊಲೀಸರು ನಮ್ಮನ್ನು ಬಂಧಿಸಿದರು. ಅಲ್ಲಿ ನಮಾಜ್ ಮಾಡಬಹುದಾದರೆ, ನಾವು ಏಕೆ ಪೂಜೆ ಮಾಡಬಾರದು?’ ಎಂದಿದ್ದಾರೆ. ಮೂರನೇ ಬಂಧಿತ ಅನಿಲ್ ಸಿಂಗ್, ‘ನಮ್ಮನ್ನು ವಶಕ್ಕೆ ಪಡೆದಾಗ ನಾವು ಹರಿಹರ ದೇವಸ್ಥಾನದಲ್ಲಿ ಹವನ ಮಾಡಲು ಬಂದಿದ್ದೆವು’ ಎಂದು ಹೇಳಿದರು.

   ಮೊಹಲ್ಲಾ ಕೋಟ್ ಗಾರ್ವಿಯಲ್ಲಿ ಧಾರ್ಮಿಕ ಚಟುವಟಿಕೆಗಳ ಹಿನ್ನೆಲೆಯಲ್ಲಿ ಹೆಚ್ಚಿದ ಉದ್ವಿಗ್ನತೆಯ ನಂತರ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಕೋಮು ಸಾಮರಸ್ಯವನ್ನು ಕದಡುವ ಯಾವುದೇ ಪ್ರಯತ್ನವನ್ನು ಎದುರಿಸಲಾಗುವುದು ಎಂದು ಅಧಿಕಾರಿಗಳು ಒತ್ತಿ ಹೇಳಿದ್ದಾರೆ.

  ಶಾಹಿ ಜಾಮಾ ಮಸೀದಿಯ ಸಮೀಕ್ಷೆ ನಡೆಸುವಂತೆ ನ್ಯಾಯಾಲಯದ ಆದೇಶವನ್ನು ವಿರೋಧಿಸಿ ಸ್ಥಳೀಯರು ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ ಕಳೆದ ವರ್ಷ ನವೆಂಬರ್ 24ರಂದು ನಾಲ್ವರು ಸಾವಿಗೀಡಾಗಿದ್ದರು.ಹಿಂದೂ ದೇವಾಲಯವನ್ನು ಕೆಡವಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಹೇಳಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ನ್ಯಾಯಾಲಯವು ಸಮೀಕ್ಷೆಗೆ ಸೂಚಿಸಿತ್ತು. ಹಿಂಸಾಚಾರದಲ್ಲಿ ಭದ್ರತಾ ಸಿಬ್ಬಂದಿ ಸೇರಿದಂತೆ ಹಲವಾರು ಜನರು ಗಾಯಗೊಂಡಿದ್ದರು.

Recent Articles

spot_img

Related Stories

Share via
Copy link