ಇಸ್ರೇಲ್​ನಲ್ಲಿ ಭಾರೀ ಬಾಂಬ್‌ ಸ್ಫೋಟ ; ಉಗ್ರರ ದಾಳಿ ಶಂಕೆ

ಜೆರುಸಲೇಂ:

    ಗುರುವಾರ ಸಂಜೆ ಇಸ್ರೇಲ್‌  ಕೇಂದ್ರ ನಗರವಾದ ಬ್ಯಾಟ್ ಯಾಮ್‌ನಲ್ಲಿ ಮೂರು ಬಸ್‌ಗಳಲ್ಲಿ ಬಾಂಬ್‌ ಸ್ಫೋಟ ಸಂಭವಿಸಿದೆ ಎಂದು ವರದಿಯಾಗಿದೆ. ಅದೃಷ್ಟವಶಾತ್ ಯಾರಿಗೂ ಯಾವುದೇ ರೀತಿಯ ಗಾಯಗಳಾಗಿಲ್ಲ. ಇದು ಭಯೋತ್ಪಾದಕ ದಾಳಿ ಎಂದು ಪೊಲೀಸರು ಹೇಳಿದ್ದಾರೆ. ಬಾಂಬ್​ಗಳು ಸ್ಫೋಟಗೊಂಡಾಗ ಬಸ್​ಗಳು ಖಾಲಿ ಇದ್ದವು. ಈ ಮೂರು ಬಸ್​ಗಳು ಸುಮಾರು 500 ಮೀಟರ್​ ದೂರದಲ್ಲಿ ಪಾರ್ಕಿಂಗ್ ಸ್ಥಳದಲ್ಲಿದ್ದವು. ಕಾರ್ಯಾಚರಣೆಯ ವೇಳೆ ಮತ್ತೊಂದು ಬಸ್​ನಲ್ಲಿ ಸಜೀವ ಬಾಂಬ್ ಪತ್ತೆಯಾಗಿದೆ. ಸದ್ಯ ಬಸ್‌ಗಳು ಹೊತ್ತಿ ಉರಿಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್‌ ಆಗಿದೆ.

   ಸದ್ಯ ಘಟನೆ ನಡೆದ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಬಾಂಬ್ ನಿಷ್ಕ್ರಿಯ ದಳ ಸ್ಥಳದಲ್ಲಿದೆ. ಅನುಮಾನಾಸ್ಪದ ವಸ್ತುಗಳಿಗಾಗಿ ಹಾಗೂ ಶಂಕಿತರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಹೆಚ್ಚಿನ ಪೊಲೀಸರನ್ನು ಘಟನಾ ಸ್ಥಳದಲ್ಲಿ ನಿಯೋಜಿಸಲಾಗಿದ್ದು, ತನಿಖೆ ನಡೆಯುತ್ತಿದೆ. ಸಾರ್ವಜನಿಕರು ಅನುಮಾನಾಸ್ಪದ ವಸ್ತುಗಳ ಬಗ್ಗೆ ಜಾಗರೂಕರಾಗಿರಲು ನಾವು ಒತ್ತಾಯಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ. 

    ಸ್ಫೋಟದ ನಂತರ, ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಅವರು ಈ ದಾಳಿಯನ್ನು ಪ್ಯಾಲೇಸ್ತೀನಿಯನ್ ಭಯೋತ್ಪಾದಕ ಸಂಘಟನೆಗಳು ಮಾಡಿವೆ ಎಂಬ ಹೇಳಿಕೆಯನ್ನು ನೀಡಿದ್ದಾರೆ. ಇಸ್ರೇಲ್‌ನ ಪೊಲೀಸ್ ಕಮಾಂಡರ್ ಹೈಮ್ ಸರ್ಗರೋಫ್ ದಾಳಿಯ ಬಗ್ಗೆ ಮಾಹಿತಿ ನೀಡಿ ಸ್ಫೋಟಗಳನ್ನು ನಡೆಸಲು ಬಳಸಿದ ಸಾಧನಗಳು ಇಸ್ರೇಲ್ ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಕಂಡುಬಂದ ಸಾಧನಗಳನ್ನು ಹೋಲುತ್ತವೆ ಎಂದು ಹೇಳಿದ್ದಾರೆ. 

  ಸ್ಫೋಟದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರ ಕಚೇರಿ ಪ್ರಧಾನಿ ಅವರು ಈ ಘಟನೆಯನ್ನು ಖಂಡಿಸಿದ್ದಾರೆ ಎಂದು ಹೇಳಿದ್ದಾರೆ. ಸದ್ಯ ವಿದೇಶ ಪ್ರವಾಸದಲ್ಲಿರುವ ಸಾರಿಗೆ ಸಚಿವೆ ಮಿರಿ ರೆಗೆವ್ ಅವರು ಮೊರಾಕೊ ಪ್ರವಾಸವನ್ನು ಮೊಟಕುಗೊಳಿಸಿ ಇಸ್ರೇಲ್‌ಗೆ ಹಿಂತಿರುಗಲಿದ್ದಾರೆ ಎಂದು ತಿಳಿದು ಬಂದಿದೆ.

Recent Articles

spot_img

Related Stories

Share via
Copy link