ತುಮಕೂರು:
ಲಿಂಗೈಕ್ಯ ಪರಮಪೂಜ್ಯ ಡಾ.ಶ್ರೀ ಶಿವಕುಮಾರ ಮಹಾಸ್ವಾಮಿಗಳವರ 112ನೇ ಜಯಂತಿ ಹಾಗೂ ಗುರುವಂದನಾ ಕಾರ್ಯಕ್ರಮವು ಏಪ್ರಿಲ್ 1 ರಂದು ಬೆಳಗ್ಗೆ 10.15ಕ್ಕೆ ಶ್ರೀ ಸಿದ್ಧಗಂಗಾ ಕ್ಷೇತ್ರದಲ್ಲಿ ಜರುಗಲಿದೆ. ದಿವ್ಯ ಸಾನಿಧ್ಯವನ್ನು ಶ್ರೀ ಸಿದ್ಧಲಿಂಗ ಸ್ವಾಮಿಗಳು ವಹಿಸಲಿದ್ದು, ಅಧ್ಯಕ್ಷತೆಯನ್ನು ಶ್ರೀ ಸುತ್ತೂರು ವೀರಸಿಂಹಾಸನ ಮಹಾ ಸಂಸ್ಥಾನ ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ವಹಿಸುವರು. ಡಾ.ಶ್ರೀ ಶಿವಮೂರ್ತಿ ಮುರುಘಾ ಶರಣರು ಎಂ.ಎಸ್.ಶಶಿಧರ್ ವಿರಚಿತ ಚಿತ್ರಸಂಗಮ ಗ್ರಂಥ ಬಿಡುಗಡೆ ಮಾಡುವರು.
ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮಿಗಳು ಇಂಡಿಯನ್ ಎಕ್ಸ್‍ಪ್ರೆಸ್ ಪತ್ರಿಕೆಯ ಕಾಫಿ ಟೇಬಲ್ ಪುಸ್ತಕ ಬಿಡುಗಡೆ ಮಾಡುವರು. ಶ್ರೀ ಅನ್ನದಾನಮಹಾಸ್ವಾಮಿಗಳು ದಿ ಹಿಂದು ಪತ್ರಿಕೆಯ ವಿಶೇಷ ಸಂಚಿಕೆ ಬಿಡುಗಡೆ ಮಾಡುವರು. ಡಾ. ಪ್ರದೀಪ್ ಕುಮಾರ್ ಹೆಬ್ರಿಯವರ ಪರಂಜ್ಯೋತಿ ಮಹಾಕಾವ್ಯದ ಬಿಡುಗಡೆಯನ್ನು ಶ್ರೀ ವಿಶ್ವೇಶ್ವರತೀರ್ಥ ಶ್ರೀ ಪಾದಂಗಳವರು ಮಾಡುವರು. ಉದ್ಘಾಟನೆಯನ್ನು ಮೈಸೂರು ರಾಜವಂಶಸ್ಥ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ನೆರವೇರಿಸುವರು.
ಶ್ರೀ ತೋಂಟದ ಸಿದ್ದರಾಮಸ್ವಾಮಿಗಳು, ಶ್ರೀ ಸಂಗನಬಸವ ಮಹಾಸ್ವಾಮಿಗಳು, ಶ್ರೀ ಪಂಚಮಶಿವಲಿಂಗೇಶ್ವರ ಸ್ವಾಮಿಗಳು, ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು, ಶ್ರೀ ಸದಾಶಿವ ಮಹಾಸ್ವಾಮಿಗಳವರು ನುಡಿನಮನ ಸಲ್ಲಿಸುವರು. ಮಧ್ಯಾಹ್ನ 3 ಗಂಟೆಗೆ ಸಂಗೀತಾ ಕಟ್ಟಿ ಇವರಿಂದ ಸಂಗೀತ ಕಾರ್ಯಕ್ರಮ ಮೂಡಿಬರಲಿದೆ.
ಶ್ರೀಗಳ 112ನೇ ಜಯಂತಿ ಹಾಗೂ ಗುರುವಂದನಾ ಕಾರ್ಯಕ್ರಮಕ್ಕೆ ಬರುವ ಭಕ್ತಾದಿಗಳಿಗೆ ಎಂದಿನಂತೆ ವಿಶೇಷ ಪ್ರಸಾದವನ್ನು ಸಿದ್ಧಪಡಿಸಲಾಗುತ್ತಿದೆ. ಬೆಳಗಿನ ತಿಂಡಿಗೆ ಸಿಹಿ ಮತ್ತು ಖಾರ ಪೊಂಗಲ್ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನದ ಪ್ರಸಾದದ ವ್ಯವಸ್ಥೆ ಬೆಳಗ್ಗೆ 11.30 ರಿಂದ ಆರಂಭವಾಗಲಿದ್ದು, ಪಾಯಸ, ಸಿಹಿ ಬೂಂದಿ, ಖಾರಾ ಬೂಂದಿ, ಚಿತ್ರಾನ್ನ, ಅನ್ನ ಸಂಬಾರು, ಮಜ್ಜಿಗೆ ವ್ಯವಸ್ಥೆ ಮಾಡಲಾಗಿದೆ.
ಕಾರ್ಯಕ್ರಮದ ಮುಖ್ಯ ವೇದಿಕೆಗೆ ಕಳೆದೆರಡು ದಿನಗಳಿಂದಲೇ ಸಿದ್ಧತೆ ನಡೆಸಲಾಗಿದ್ದು, ಇಂದು ಗುರುವಂದನೆಗೆ ಆಗಮಿಸುವ ಸಕಲ ಭಕ್ತಾದಿಗಳಿಗೆ ಮಠದ ಆವರಣದಲ್ಲಿ ವ್ಯವಸ್ಥೆಗೊಳಿಸಲಾಗಿರುವ ವಿವಿಧ ಕಡೆಗಳಲ್ಲಿ ದಾಸೋಹದ ವ್ಯವಸ್ಥೆ ಮಾಡಲಾಗಿದೆ.