ಮುಂಬೈ:
ಮಹಾರಾಷ್ಟ್ರದ ಥಾಣೆ ಜಿಲ್ಲೆಯ ರಾಸಾಯನಿಕ ಕಾರ್ಖಾನೆಯಲ್ಲಿ ಗುರುವಾರ ಮಧ್ಯಾಹ್ನ ಭಾರಿ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಂಬೈ ಸಮೀಪದ ಡೊಂಬಿವಾಲಿ ಎಂಐಡಿಸಿ ಪ್ರದೇಶದ 2ನೇ ಹಂತದಲ್ಲಿರುವ ಅಮುದನ್ ಕೆಮಿಕಲ್ ಕಂಪನಿಯಲ್ಲಿ ಇಂದು ಮಧ್ಯಾಹ್ನ 1.40 ರ ಸುಮಾರಿಗೆ ಬಾಯ್ಲರ್ ಸ್ಫೋಟಗೊಂಡ ನಂತರ ಭಾರಿ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮುಂಬೈನಿಂದ ಸುಮಾರು 40 ಕಿಮೀ ದೂರದಲ್ಲಿರುವ ಡೊಂಬಿವಾಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಹಾರಾಷ್ಟ್ರ ಕೈಗಾರಿಕಾ ಸಚಿವ ಉದಯ್ ಸಮಂತ್, ಸ್ಥಳದಿಂದ ಇದುವರೆಗೆ ಮೂರು ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ. ಅವರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ ಘೋಷಿಸಿದ್ದಾರೆ. ಗಾಯಗೊಂಡವರ ನಿಖರ ಸಂಖ್ಯೆ ಇನ್ನೂ ತಿಳಿದುಬಂದಿಲ್ಲ ಎಂದು ಅವರು ಹೇಳಿದ್ದಾರೆ.
ಸ್ಫೋಟದ ಶಬ್ದವು ಒಂದು ಕಿಲೋಮೀಟರ್ ದೂರದವರೆಗೂ ಕೇಳಿಸಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.ಸ್ಫೋಟದ ತೀವ್ರತೆಗೆ ಅಕ್ಕಪಕ್ಕದ ಕಟ್ಟಡಗಳ ಗಾಜಿನ ಕಿಟಕಿಗಳು ಬಿರುಕು ಬಿಟ್ಟಿದ್ದು, ಸುತ್ತಮುತ್ತಲಿನ ಹಲವು ಮನೆಗಳಿಗೆ ಹಾನಿಯಾಗಿದೆ.
ಮಧ್ಯಾಹ್ನ 1.40ರ ಸುಮಾರಿಗೆ ಸ್ಫೋಟ ಸಂಭವಿಸಿದೆ ಎಂದು ಥಾಣೆ ಮಹಾನಗರ ಪಾಲಿಕೆ ವಿಪತ್ತು ನಿರ್ವಹಣಾ ಘಟಕದ ಮುಖ್ಯಸ್ಥ ಯಾಸಿನ್ ತದ್ವಿ ಅವರು ತಿಳಿಸಿದ್ದಾರೆ.