ಗುಬ್ಬಿ:
ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸರ್ಕಾರ ಹಲವಾರು ಮಹತ್ವದ ಯೋಜನೆಗಳನ್ನು ಜಾರಿಗೊಳಿಸಿದ್ದು ವಿದ್ಯಾರ್ಥಿಗಳು ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡು ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಅಭಿವೃಧ್ದಿ ಹೊಂದುವಂತೆ ಸಣ್ಣ ಕೈಗಾರಿಕೆ ಸಚಿವ ಎಸ್.ಆರ್.ಶ್ರೀನಿವಾಸ್ ಕರೆನೀಡಿದರು.
ತಾಲ್ಲೂಕಿನ ಕಡಬ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶ್ರೀಮತಿ ರತ್ನಮ್ಮ ಶ್ರೀಸಂಪತ್ ಅಯ್ಯಂಗಾರ್ ಸುಪುತ್ರರು ಮತ್ತು ಪದ್ಮಚಾರಿಟಬಲ್ ಟ್ರಸ್ಟ್ವತಿಯಿಂದ ಏರ್ಪಡಿಸಿದ್ದ ನಗದು ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಗ್ರಾಮೀಣ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಅಭಿವೃಧ್ದಿ ಹೊಂದಿದಾಗ ಮಾತ್ರ ಗ್ರಾಮಗಳ ಸರ್ವಾಂಗೀಣ ಅಬಿವೃಧ್ದಿ ಸಾಧ್ಯವಾಗುತ್ತದೆ ಸರ್ಕಾರ ಗ್ರಾಮೀಣ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಸದುದ್ದೇಶದಿಂದ ಹಲವು ಮಹತ್ವದ ಸೌಲಭ್ಯಗಳನ್ನು ನೀಡುತ್ತಿದೆ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಶೈಕ್ಷಣಿಕವಾಗಿ ಪ್ರಗತಿಹೊಂದುವಂತೆ ತಿಳಿಸಿದರು.
ಯಾವುದೇ ಕ್ಷೇತ್ರ ಅಭಿವೃಧ್ದಿ ಹೊಂದಬೇಕಾದರೆ ಶಿಕ್ಷಣದಿಂದ ಮಾತ್ರ ಸಾಧ್ಯವಿದ್ದು ಇಂದಿನ ವಿದ್ಯಾರ್ಥಿಗಳು ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು ಸಂಸ್ಕಾರಗಳನ್ನು ಪಡೆಯುವ ಮೂಲಕ ಆಧರ್ಶ ವಿದ್ಯಾರ್ಥಿಗಳಾಗಿ ರೂಪುಗೊಳ್ಳುವಂತೆ ಕರೆನೀಡಿದ ಅವರು ಸರ್ಕಾರದ ಜೊತೆಗೆ ಹಲವು ಸಂಘ ಸಂಸ್ಥೆಗಳು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸಹಕಾರ ನೀಡುತ್ತಿರುವುದ ಶ್ಲಾಘನೀಯವಾದುದಾಗಿದ್ದು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅಭಿನಂದಿಸುವಂತಹ ಮಹತ್ವದ ಕಾರ್ಯ ಮಾಡುತ್ತಿರುವುದು ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕವಾಗಲಿದೆ ಎಂದು ತಿಳಿಸಿದರು.
ಪ್ರಾಚಾರ್ಯ ಹೆಚ್.ಕೆ.ನರಸಿಂಹಮೂರ್ತಿ ಮಾತನಾಡಿ ಶೈಕ್ಷಣಿಕ ಪ್ರಗತಿಯಿಂದ ಮಾತ್ರ ಸಮಾಜದ ಸರ್ವತೋಮುಖ ಅಭಿವೃಧ್ದಿ ಸಾಧ್ಯವಿದ್ದು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು ಸಂಸ್ಕಾರಗಳನ್ನು ಕಲಿಯುವ ಮೂಲಕ ಸಮಾಜದ ಸತ್ಪ್ರಜೆಗಳಾಗುವಂತೆ ಕರೆನೀಡಿದ ಅವರು ಕಾಲೇಜಿನ ಶೈಕ್ಷಣಿಕ ಪ್ರಗತಿಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಂತೆ ಮನವಿ ಮಾಡಿಕೊಂಡರು.
ಇದೆ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ 1.50 ಲಕ್ಷ ರೂ ನಗದು ಪುರಸ್ಕಾರ ನೀಡಿ ಸನ್ಮಾನಿಸಲಾಯಿತು . ಸಮಾರಂಭದಲ್ಲಿ ತಾಲ್ಲೂಕು ಪಂಚಾಯ್ತಿ ಸದಸ್ಯೆ ಸುಧಾಮಣಿ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಂಗಳಗೌರಮ್ಮ, ಸದಸ್ಯ ಧರ್ಶನ್, ಕಾಲೇಜು ಅಭಿವೃಧ್ದಿ ಸಮಿತಿ ಅಧ್ಯಕ್ಷ ಕೆ.ಎನ್.ವೆಂಕಟೇಶ್, ಸದಸ್ಯರಾದ ವಿ.ಪಿ.ವೆಂಕಟೇಶ್, ಲಲಿತಮ್ಮ, ಎಂ.ಜಿ.ರಾಮಣ್ಣ, ಬಾಲಕೃಷ್ಣ, ಅನುಸೂಯಕುಮಾರಿ, ಬಿ.ಸಿ.ಶಿವಣ್ಣ ಮುಂತಾದವರು ಭಾಗವಹಿಸಿದ್ದರು.
