ಬಿಜಾಪುರ:
ಛತ್ತೀಸ್ಗಢದ ಇಲ್ಲಿನ ಬಿಜಾಪುರ ಜಿಲ್ಲೆಯಲ್ಲಿ ವಿಷಾಹಾರ ಸೇವನೆಯಿಂದ ದುರಂತವೊಂದು ಸಂಭವಿಸಿದೆ. ಪನೀರ್ ಕರಿ ಮತ್ತು ಪೂರಿ ಸೇವಿಸಿದ್ದ ಶಾಲಾ ಪುಟಾಣಿಗಳ ಪೈಕಿ ಮೂರನೇ ತರಗತಿಯ ಪುಟಾಣಿಯೊಬ್ಬಳು ಸಾವಿಗೀಡಾಗಿದ್ದು, 35 ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ಇಲ್ಲಿನ ಸರಕಾರಿ ಶಾಲೆ ಹಾಗೂ ಹಾಸ್ಟೆಲ್ನಲ್ಲಿ ಈ ದುರ್ಘಟನೆ ಸಂಭವಿಸಿದೆ
ಇನ್ನು, ಅಸ್ವಸ್ಥಗೊಂಡಿರುವ 35 ಮಕ್ಕಳ ಪೈಕಿ 12 ವಿದ್ಯಾರ್ಥಿಗಳ ಸ್ಥಿತಿ ಗಂಭೀರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಮಕ್ಕಳಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು, ಘಟನೆಯ ಬಗ್ಗೆ ತನಿಖೆ ನಡೆಸಲು ಹಾಗೂ ಪರಿಸ್ಥಿತಿ ಬಗ್ಗೆ ನಿಗಾ ವಹಿಸಲು ಜಿಲ್ಲಾಡಳಿತವು ಐವರು ಸದಸ್ಯರ ಕಮಿಟಿಯೊಂದನ್ನು ರಚಿಸಿದೆ.
ಇಲ್ಲಿನ ಧನೋರಾ ಬೇಗನ್ ನಲ್ಲಿರುವ ಮಾತಾ ರುಕ್ಮಣಿ ಆಶ್ರಮದಲ್ಲಿರುವ ಮಕ್ಕಳಲ್ಲಿ ಕಳೆದ ಎರಡು ದಿನಗಳ ಹಿಂದೆ ಇದ್ದಕ್ಕಿದ್ದಂತೆ ಅಸ್ವಸ್ಥತೆ ಕಾಣಿಸಿಕೊಳ್ಳಲಾರಂಭಿಸಿತು. ಹೀಗೆ ಅಸ್ವಸ್ಥಗೊಂಡ ಮಕ್ಕಳು ವಾಂತಿ ಮತ್ತು ಬೇಧಿ ಮಾಡಿಕೊಳ್ಳಲು ಪ್ರಾರಂಭಿಸಿದರು. ತಕ್ಷಣವೇ ಅಸ್ವಸ್ಥ ಮಕ್ಕಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಈ ಸಂದರ್ಭದಲ್ಲಿ ಒಬ್ಬಳು ವಿದ್ಯಾರ್ಥಿಯು ಅಸ್ವಸ್ಥಗೊಂಡಿದ್ದ ಕಾರಣ ಆಕೆ ಸಾವನ್ನಪ್ಪಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ.
ವಿಷಾಹಾರ ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ರಾಜಕೀಯ ಕೆಸರೆರಚಾಟ ಶುರುವಾಗಿದೆ. ಬುಡಕಟ್ಟು ಪ್ರಾಬಲ್ಯದ ಹಾಗೂ ನಕ್ಸಲ್ ಪೀಡಿತ ಪ್ರದೇಶಗಳ ಜನರ ಆರೋಗ್ಯ ಹಾಗೂ ಅಲ್ಲಿನ ಮಕ್ಕಳ ಶಿಕ್ಷಣ ವ್ಯವಸ್ಥೆಯನ್ನು ಆಡಳಿತಾರೂಢ ಬಿಜೆಪಿ ಸರಕಾರ ನಿರ್ಲಕ್ಷಿಸುತ್ತಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಆರೋಪಿಸಿದೆ.
ಈ ಪ್ರಕರಣದಲ್ಲಿ ಮಕ್ಕಳಿಗೆ ಪೂರೈಸಲಾದ ಪನೀರ್ನ ಗುಣಮಟ್ಟದ ಬಗ್ಗೆ ಹಾಗೂ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಆಹಾರ ಸುರಕ್ಷತೆಯ ಬಗ್ಗೆ ನಿರ್ಲಕ್ಷ್ಯ ವಹಿಸಲಾಗಿದೆ ಎಂಬ ಆರೋಪವನ್ನು ಸಂತ್ರಸ್ತ ವಿದ್ಯಾರ್ಥಿಗಳ ಪೋಷಕರು ಮಾಡಿದ್ದಾರೆ.
ಸ್ಥಳೀಯ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಬೈಜ್ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ತನಿಖಾ ತಂಡವನ್ನು ಘೋಷಿಸಿದ್ದಾರೆ. ಈ ತಂಡದಲ್ಲಿ ಸ್ಥಳೀಯ ಶಾಸಕ ವಿಕ್ರಮ್ ಮಾಂಡವಿ ಅವರನ್ನು ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ. ಇದರಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಶಂಕರ್ ಕುಡಿಯಮ್, ನೀನಾ ರವಾಟಿಯಾ, ಲಾಲು ರಾಥೋರೆ, ಬೋಧಿ ತಾಟಿ, ಸೋನು ಪೋಟಮ್ ಹಾಗೂ ರಮೇಶ್ ಯಾಲಮ್ ಇದ್ದಾರೆ. ಬೈಜ್ ಅವರು ಹೇಳಿರುವಂತೆ, ಈ ಘಟನೆಯನ್ನು ತಂಡ ತನಿಖೆ ನಡೆಸಲಿದ್ದು, ಲಭ್ಯ ಮಾಹಿತಿಯನ್ನು ಪ್ರದೇಶ ಕಾಂಗ್ರೆಸ್ ಸಮಿತಿಗೆ ಸಲ್ಲಿಸಲಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಸ್ಥಳೀಯಾಡಳಿತವೂ ಒಂದು ತನಿಖಾ ಮಂಡಳಿಯನ್ನು ರಚಿಸಿದ್ದು, ಇದರಲ್ಲಿ ಬಿಜಾಪುರ ಸಿ.ಎಂ.ಹೆಚ್.ಒ., ಎಸ್.ಡಿ.ಎಂ. ಜಾಗೇಶ್ವರ್ ಕೌಶಲ್, ಡಾ. ಬಿ ಆರ್ ಪೂಜಾರಿ, ಎ ಸಿ ಆನಂದ ಸಿಂಗ್, ಡಿಇಒ ಲಖನ್ ಲಾಲ್ ಧನೇಲಿಯಾ ಹಾಗೂ ಆರೋಗ್ಯ ಅಧಿಕಾರಿಯವರು ಇದ್ದಾರೆ. ಈ ತಂಡವು ತಮ್ಮ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಿದೆ.