ನಾಳೆ 3ನೇ ಸುತ್ತಿನ ಮತದಾನ : 227 ಮಂದಿ ಭವಿಷ್ಯ ನಿರ್ಧರಿಸಲಿದ್ದಾರೆ ಮತದಾರರು…!

ಬೆಂಗಳೂರು:

    ರಾಜ್ಯದ ಲೋಕಸಭಾ ಚುನಾವಣೆಯ 2ನೇ ಹಂತದ 14 ಕ್ಷೇತ್ರಗಳಲ್ಲಿ ನಡೆದ ಅಬ್ಬರ ಬಹಿರಂಗ ಪ್ರಚಾರಕ್ಕೆ ಭಾನುವಾರ ಸಂಜೆ ತೆರೆಬಿದ್ದಿದ್ದು, ಸೋಮವಾರ ಅಭ್ಯರ್ಥಿಗಳು ಮನೆ-ಮನೆ ಪ್ರಚಾರ ನಡೆಸಿ ಮತಯಾಚನೆ ಮಾಡಲಿದ್ದಾರೆ.

    ಮಂಗಳವಾರ ಬೆಳಿಗ್ಗೆ 7 ಗಂಟೆಯಿಂದ 14 ಕ್ಷೇತ್ರಗಳ ಮತದಾನ ಆರಂಭವಾಗುವ ಹಿನ್ನೆಲೆಯಲ್ಲಿ ಭಾನುವಾರ ಸಂಜೆ 6 ಗಂಟೆಯಿಂದ ಬಹಿರಂಗ ಪ್ರಚಾರ ಅಂತ್ಯಗೊಂಡಿದೆ. ಸೋಮವಾರ ಇಡೀ ದಿನ ಅಭ್ಯರ್ಥಿಗಳು ಮತ್ತು ಬೆಂಬಲಿಗರು ಮನೆ ಮನೆ ಪ್ರಚಾರ ನಡೆಸಲಿದ್ದಾರೆ.

    ರಾಜ್ಯದಲ್ಲಿ ಗಮನ ಸೆಳೆದಿರುವ ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ಬಿಜಾಪುರ(ಎಸ್ಸಿ ಮೀಸಲು), ಕಲಬುರಗಿ(ಎಸ್ಸಿ), ರಾಯಚೂರು(ಎಸ್ಟಿ ಮೀಸಲು), ಬೀದರ್, ಕೊಪ್ಪಳ, ಬಳ್ಳಾರಿ(ಎಸ್ಟಿ), ಹಾವೇರಿ, ಧಾರವಾಡ, ಉತ್ತರಕನ್ನಡ, ದಾವಣಗೆರೆ, ಶಿವಮೊಗ್ಗ ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

    ಶೋರಾಪುರ ವಿಧಾನಸಭಾ ಕ್ಷೇತ್ರಕ್ಕೂ ನಾಳೆಯೇ ಚುನಾವಣೆ ನಡೆಯಲಿದ್ದು, ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ತಲಾ ಒಬ್ಬರು, ನಾಲ್ವರು ಸ್ವತಂತ್ರರು ಕಣಕ್ಕಿಳಿದಿದ್ದಾರೆ. ಒಟ್ಟಾರೆ ಸ್ಪರ್ಧಾಕಣದಲ್ಲಿ 206 ಪುರುಷರು ಹಾಗೂ 21 ಮಹಿಳೆಯರು ಸೇರಿದಂತೆ ಒಟ್ಟು 227 ಮಂದಿ ಇದ್ದಾರೆ.

     ಈ ಕ್ಷೇತ್ರಗಳಲ್ಲಿ ಒಟ್ಟು 2,59,52,958 ಮತದಾರರು ಮತ ಚಲಾಯಿಸುವ ಹಕ್ಕು ಪಡೆದಿದ್ದಾರೆ. ಇದರಲ್ಲಿ 1,29,48,978 ಪುರುಷ, 1,29,66,570 ಮಹಿಳೆಯರಿದ್ದು, 1935 ಇತರೆ, 35,465 ಸೇವಾ ಮತದಾರರಿದ್ದಾರೆ. ಯುವ ಮತದಾರರು 6,90,929 ಇದ್ದು, 85 ವರ್ಷ ಮೇಲ್ಪಟ್ಟ 2,29,563 ಮತದಾರರಿದ್ದರೆ, 3,43,966 ವಿಕಲಚೇತನ ಮತದಾರರಿದ್ದಾರೆ.

    ಕಲಬುರಗಿ ಕ್ಷೇತ್ರದಲ್ಲಿ ಅತೀ ಹೆಚ್ಚು 20,98,202 ಮತದಾರರಿದ್ದರೆ, ಉತ್ತರ ಕನ್ನಡದಲ್ಲಿ 16,41,156 ಮತದಾರರಿದ್ದಾರೆ. 14 ಕ್ಷೇತ್ರಗಳಲ್ಲಿ 28,269 ಮತಗಟ್ಟೆಗಳನ್ನು ತೆರೆಯಲಾಗಿದೆ.

    ಮತದಾನದ ಪ್ರಮಾಣವನ್ನು ಹೆಚ್ಚಿಸಲು ಮತ್ತು ಜನರು ತಮ್ಮ ಮತಗಟ್ಟೆಯನ್ನು ಹುಡುಕಲು ಸಹಾಯ ಮಾಡಲು, ಚುನಾವಣಾ ಅಧಿಕಾರಿಗಳು ಪ್ರತಿ ವೋಟಿಂಗ್ ಸ್ಲಿಪ್‌ನ ಹಿಂದೆ ಕ್ಯೂಆರ್ ಕೋಡ್ ಅನ್ನು ಮುದ್ರಿಸಿದ್ದಾರೆ, ಅದನ್ನು ಸ್ಕ್ಯಾನ್ ಮಾಡಿದ ಕೂಡಲೇ ಜಿಪಿಎಸ್ ತಂತ್ರಜ್ಞಾನವನ್ನು ಬಳಸಿಕೊಂಡು ಮತದಾರರನ್ನು ಅವಳ/ಅವನ ಬೂತ್‌ಗೆ ನಿರ್ದೇಶಿಸುತ್ತದೆ.

    ಇದರ ಜೊತೆಗೆ ಆಯೋಗವು ವೋಟರ್ ಹೆಲ್ಪ್ ಲೈನ್ ಎಂಬ ಅಪ್ಲಿಕೇಶನ್ ಅನ್ನು ಕೂಡ ಬಿಡುಗಡೆ ಮಾಡಿದೆ, ಇದನ್ನು ಪ್ಲೇಸ್ಟೋರ್‌ನಿಂದ ಡೌನ್‌ಲೋಡ್ ಮಾಡಬಹುದು. ಇದು ಮತಗಟ್ಟೆ ಕುರಿತು ಮಾಹಿತಿ ನೀಡುತ್ತದೆ. ಸರದಿಯಲ್ಲಿರುವ ಜನರ ಸಂಖ್ಯೆ, ಪಾರ್ಕಿಂಗ್ ಸೌಲಭ್ಯ ಮತ್ತು ಇತರ ವಿವರಗಳು ಇದರಿಂದ ಲಭ್ಯವಾಗಲಿದೆ.

    ನಾಳೆ ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದ್ದು, ಮತದಾನದ ದಿನ ಚುನಾವಣಾ ಆಯೋಗದ ಅಧಿಕಾರಿಗಳು ಮತ್ತು ಮತದಾರರಿಗೆ ಬಿಸಿಗಾಳಿಯನ್ನು ಎದುರಿಸುವುದೇ ದೊಡ್ಡ ಸವಾಲಾಗಿ ಪರಿಣಮಿಸುವ ಸಾಧ್ಯತೆಗಳಿವೆ.

    ಕೆಲ ರಾಜಕೀಯ ನಾಯಕರು ಮತದಾನವನ್ನು ಸಂಜೆ 6 ಗಂಟೆಗೂ ಮೀರಿ ವಿಸ್ತರಿಸುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿವೆ. ಆದರೆ, ಆಯೋಗ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಈ ನಡುವೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಉತ್ತರ ಕರ್ನಾಟಕ ಪ್ರದೇಶಗಳಲ್ಲಿ ಚುನಾವಣೆಯ ದಿನದಂದು ತಾಪಮಾನವು 45-46 ಡಿಗ್ರಿ ಸೆಲ್ಸಿಯಸ್‌ಗೆ ಏರುವ ಸಾಧ್ಯತೆಗಳಿವೆ ಎಂದು ಎಚ್ಚರಿಕೆಯನ್ನು ನೀಡಿದೆ. 

   ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯ ಅಧಿಕಾರಿಗಳು ಮಾತನಾಡಿ, IMD ಯಿಂದ ಮಾಹಿತಿ ಪಡೆಯಲಾಗುತ್ತಿದ್ದು, ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

    ಮತದಾನದ ದಿನ ಸಾಕಷ್ಟು ಕುಡಿಯುವ ನೀರು, ಫ್ಯಾನ್, ನೆರಳಿನ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಮತಗಟ್ಟೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಆಸ್ಪತ್ರೆಗಳಲ್ಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಹೆಚ್ಚುವರಿ ಸಿಇಒ ವೆಂಕಟೇಶ್ ಕುಮಾರ್ ಆರ್ ಅವರು ತಿಳಿಸಿದ್ದಾರೆ.

    ಜಿಲ್ಲಾಡಳಿತವು ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಸಾಕಷ್ಟು ಆಂಬ್ಯುಲೆನ್ಸ್‌ಗಳು ಮತ್ತು ವೈದ್ಯಕೀಯ ಸಿಬ್ಬಂದಿಯನ್ನು ಸಜ್ಜುಗೊಳಿಸಿದೆ. ಅಲ್ಲದೆ, ಪ್ರತಿ ಮತಗಟ್ಟೆಯಲ್ಲಿ ಆಶಾ ಕಾರ್ಯಕರ್ತೆ ಅಥವಾ ಸಹಾಯಕ ನರ್ಸ್ ಮಿಡ್‌ವೈಫ್ ವರ್ಕರ್, ಒಆರ್‌ಎಸ್ ಹೊಂದಿರುವ ವೈದ್ಯಕೀಯ ಕಿಟ್ ಮತ್ತು ಇತರ ಸಾಮಗ್ರಿಗಳನ್ನು ಸಜ್ಜುಗೊಳಿಸಿದೆ.

    ಈ ನಡುವೆ ನ್ಯಾಯಸಮ್ಮತ ಚುನಾವಣೆ ಮತ್ತು ಮತದಾನದ ಗೌಪ್ಯತೆಯನ್ನು ಖಚಿತಪಡಿಸಿಕೊಳ್ಳಲು, ಮತ ಚಲಾಯಿಸುವಾಗ ಯಾವುದೇ ಮೊಬೈಲ್ ಫೋನ್‌ಗಳನ್ನು ಅನುಮತಿಸಲಾಗುವುದಿಲ್ಲ ಎಂದು ಚುನಾವಣಾಧಿಕಾರಿಗಳು ಹೇಳಿದ್ದಾರೆ

    ಮತದಾನಕ್ಕೂ ಮುನ್ನ ಮತದಾರರು ತಮ್ಮ ಫೋನ್ ಇಟ್ಟುಕೊಳ್ಳಲು ಪ್ರತ್ಯೇಕ ಟ್ರೇ ಅಥವಾ ಕೌಂಟರ್ ಗಳನ್ನು ಚುನಾವಣಾಧಿಕಾರಿಗಳು ಖಚಿತಪಡಿಸಿದ್ದಾರೆ. ಮತದಾನದ ಪ್ರದೇಶದಲ್ಲಿ ಸ್ಮಾರ್ಟ್ ವಾಚ್‌ಗಳನ್ನೂ ಸಹ ಅನುಮತಿಸಲಾಗುತ್ತಿಲ್ಲ. 

    ಈ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜನು ಖರ್ಗೆ ಅವರ ಅಳಿಯ ರಾಧಾಕೃಷ್ಣ ದೊಡ್ಡಮನಿ, ಸಚಿವರಾದ ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್, ಶಿವಾನಂದ್ ಪಾಟೀಲ್, ಈಶ್ವರ್ ಖಂಡ್ರೆ ಅವರ ಮಕ್ಕಳ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ.

     ಅಭ್ಯರ್ಥಿಗಳನ್ನು ಹೊರತುಪಡಿಸಿ ಕ್ಷೇತ್ರಕ್ಕೆ ಸಂಬಂಧಪಡದ ವ್ಯಕ್ತಿಗಳು ಕ್ಷೇತ್ರದಲ್ಲಿ ಕಾಣಿಸಿಕೊಳ್ಳುವಂತಿಲ್ಲ. ಮತದಾನಕ್ಕೂ 48 ಗಂಟೆ ಮೊದಲು ಶೂನ್ಯ ಅವಧಿ ಪ್ರಾರಂಭವಾಗಿರುವ ಕಾರಣ ಯಾವುದೇ ರೀತಿಯ ಅಬ್ಬರದ ಪ್ರಚಾರ ಕೈಗೊಳ್ಳುವಂತಿಲ್ಲ.

    ಮನೆ-ಮನೆ ಮತಯಾಚನೆ ವೇಳೆ ಐದು ಜನಕಕ್ಕಿಂತ ಹೆಚ್ಚು ಜನರು ಇರುವಂತಿಲ್ಲ. ಧ್ವನಿವರ್ಧಕ ಬಳಸದೆ ಮತಯಾಚನೆ ಮಾಡಬಹುದಾಗಿದೆ. ಯಾವುದೇ ರೀತಿಯ ಸಾರ್ವಜನಿಕ ಸಭೆ, ರ್ಯಾಲಿಗಳನ್ನು ನಿರ್ಬಂಧಿಸಲಾಗಿದೆ. ಭಾನುವಾರ ಸಂಜೆ 6 ಗಂಟೆಯಿಂದಲೇ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಮತದಾರರಲ್ಲದ ರಾಜಕೀಯ ಪಕ್ಷಗಳ ಕಾರ್ಯಕರ್ತರು, ಮುಖಂಡರು, ನಾಯಕರು ಕ್ಷೇತ್ರ ಬಿಟ್ಟು ತೆರಳಿದ್ದಾರೆ.

    ಅಕ್ರಮವಾಗಿ ತಂಗುವ ಸಾಧ್ಯತೆ ಇರುವ ಕಾರಣ ಚುನಾವಣಾ ಸಿಬ್ಬಂದಿ ಕಲ್ಯಾಣ ಮಂಟಪ, ಹೋಟೆಲ್, ಅತಿಥಿಗೃಹ, ವಸತಿ ಗೃಹ ಸೇರಿದಂತೆ ಇತರೆ ಪ್ರದೇಶಗಳ ಪರಿಶೀಲನೆ ನಡೆಸಿದ್ದಾರೆ.

   ಯಾತ್ರಾರ್ಥಿಗಳು, ಪ್ರವಾಸಿಗರಿಗೆ ಕ್ಷೇತ್ರ ಬಿಟ್ಟು ತೆರಳುವ ನಿರ್ಬಂಧ ಇಲ್ಲ ಎಂದು ಆಯೋಗ ತಿಳಿಸಿದೆ. ಕ್ಷೇತ್ರದ ಗಡಿಗಳಲ್ಲಿ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಿ ಕ್ಷೇತ್ರದ ಹೊರಗಿನಿಂದ ಬರುವ ವಾಹನಗಳ ಚಲನವಲನದ ಮೇಲೆ ನಿಗಾವಹಿಸಬೇಕು. ಅಕ್ರಮವಾಗಿ ಕ್ಷೇತ್ರದಲ್ಲಿ ಓಡಾಡುತ್ತಿರುವುದು ಅನುಮಾನ ಬಂದರೆ ಅವರು ಆಯಾ ಕ್ಷೇತ್ರದ ಮತದಾರರೇ ಅಥವಾ ಇಲ್ಲವೇ ಎಂಬುದನ್ನು ಪತ್ತೆ ಹಚ್ಚಲು ಗುರುತಿ ಚೀಟಿಗಳನ್ನು ಪರಿಶೀಲನೆ ನಡೆಸಲಾಗುತ್ತದೆ.

    ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ಮೋದಿ, ಕೇಂದ್ರ ಸಚಿವರು, ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ಮಾಜಿ ಮುಖ್ಣಮಂತ್ರಿ ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ವರಿಷ್ಠರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ತಮ್ಮ ತಮ್ಮ ಪಕ್ಷದ ಅಭ್ಯರ್ಥಿಗಳ ಬಿರುಸಿನ ಮತ ಪ್ರಚಾರ ಕೈಗೊಂಡರು. ಬಹಿರಂಗ ಪ್ರಚಾರ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಎಲ್ಲಾ ಘಟನಾನುಘಟಿ ನಾಯಕರು ಕ್ಷೇತ್ರದಿಂದ ಹೊರಗೆ ತೆರಳಿದ್ದಾರೆ. ಒಂದು ವೇಳೆ ಕ್ಷೇತರಕ್ಕೆ ಸಂಬಂಧಿಸಿದ ವ್ಯಕ್ತಿಗಳು ಕಂಡು ಬಂದರೆ, ಚುನಾವಣಾಧಿಕಾರಿಗಳು ಸೂಕ್ತ ಕ್ರಮ ಜರುಗಿಸಲಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap