ಬೆಂಗಳೂರು:
ನೈಸ್ ರಸ್ತೆಯಲ್ಲಿ ಸೋಮವಾರ ಸಂಭವಿಸಿದ 2 ಪ್ರತ್ಯೇಕ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ.ಗೋವಾ ಪ್ರವಾಸಕ್ಕೆ ತೆರಳುತ್ತಿದ್ದಾಗ ಮಾರ್ಗ ಮಧ್ಯೆ ನೈಸ್ ರಸ್ತೆಯಲ್ಲಿ ಭೀಕರವಾಗಿ ಕಾರು ಅಪಘಾತಕ್ಕೀಡಾಗಿ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಗ್ರಾಮಪಂಚಾಯಿತಿ ಸದಸ್ಯ ಸೇರಿ ಮೂವರು ಸಾವನ್ನಪ್ಪಿದ್ದಾರೆ.
ಮೃತರನ್ನು ಖಾಸಗಿ ಸಾರಿಗೆ ಉದ್ಯಮಿ ನಂಜೇಗೌಡ (45) ಕನಕಪುರದ ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಕಾರು ಚಾಲಕ ವಿನೋದ್ (36), ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯ ಎಚ್.ವಿ.ಕುಮಾರ್ (41) ಎಂದು ಗುರ್ತಿಸಲಾಗಿದೆ.ಈ ಘಟನೆಯಲ್ಲಿ ಮತ್ತೊಂದು ಕಾರಿನಲ್ಲಿದ್ದ ಶಿವರಾಮಕೃಷ್ಣ ಹಾಗೂ ಪ್ರಸನ್ನ ಗಾಯಗೊಂಡಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾರೆ.
ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಕಾರಿನಲ್ಲಿ ವಿನೋದ್, ಆತನ ಸ್ನೇಹಿತರು ತೆರಳುತ್ತಿದ್ದರು. ಈ ವೇಳೆ ನೈಸ್ ರಸ್ತೆಯ ಸೋಪುರ ಸರ್ಕಲ್ ಬಳಿ ಕಾರಿನ ಚಾಲನೆ ಮೇಲೆ ನಿಯಂತ್ರಣ ಕಳೆದುಕೊಂಡ ವಿನೋದ್, ರಸ್ತೆ ವಿಭಜಕಕ್ಕೆ ಗುದ್ದಿ ಅಲ್ಲಿಂದ ಹಾರಿ ಮತ್ತೊಂದು ಬದಿಗೆ ನುಗ್ಗಿದ್ದಾರೆ. ಆಗ ಎದುರಿಗೆ ಬಂದ ಕಾರಿಗೆ ತಮ್ಮ ಕಾರನ್ನು ಗುದ್ದಿಸಿದ್ದಾರೆ. ಈ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡು ಮೂವರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಗೆ ಅತಿವೇಗದ ಚಾಲನೆಯೇ ಕಾರಣ ಎಂದು ತಿಳಿದುಬಂದಿದೆ.
ಕಾರಿನಲ್ಲಿದ್ದವರು ಸೀಟ್ ಬೆಲ್ಟ್ ಧರಿಸಿರಲಿಲ್ಲ. ಹಾಗಾಗಿ ಅಪಘಾತ ಸಂಭವಿಸಿದಾಗ ಏರ್ ಬ್ಯಾಗ್ ತೆರೆದುಕೊಂಡಿಲ್ಲ. ಸ್ಪೀಡೋ ಮೀಟರ್ 14 ಕಿ.ಮೀಗೆ ಸ್ಥಗಿತವಾಗಿದೆ. ರಸ್ತೆಯಲ್ಲಿ ಬ್ರೇಕ್ ಹಾಕಿರುವುದಕ್ಕೆ ಯಾವುದೇ ಕುರುಹು ಇಲ್ಲ. ಆದ್ದರಿಂದ ಸ್ಕಾರ್ಪಿಯೋ ಚಾಲಕ ಅತಿವೇಗವಾಗಿ ಚಾಲನೆ ಮಾಡಿರುವುದು ಸ್ಪಷ್ಟವಾಗಿದೆ. ಘಟನೆ ನಡೆದಾಗ ಮಳೆ ಸುರಿಯುತ್ತಿತ್ತು. ಹೀಗಾಗಿ ಡಿವೈಡರ್’ಗೆ ಕಾರು ಡಿಕ್ಕಿಯಾದ ಕೂಡಲೇ ಚಕ್ರಗಳು ರಸ್ತೆಯಲ್ಲಿ ನಿಯಂತ್ರಣ ತಪ್ಪಿದ ಪರಿಣಾಮ ಮತ್ತೊಂದು ರಸ್ತೆಗೆ ನುಗ್ಗಿ ಎಕ್ಸ್ ಯುವಿ 700ಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.ಮತ್ತೊಂದು ಘಟನೆ ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ನೈಸ್ ರಸ್ತೆಯಲ್ಲಿರುವ ಬಸಾಪುರ ಸೇತುವೆ ಬಳಿ ನಡೆದಿದೆ.
ಕಾರ್ಖಾನೆಗೆ ನೌಕರರನ್ನು ಒಯ್ಯುತ್ತಿದ್ದ ಮಿನಿ ಬಸ್, ರಸ್ತೆ ಬದಿ ನಿಲುಗಡೆ ಮಾಡಿದ್ದ ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮತಪಟ್ಟು, ಐವರು ನೌಕರರು ಗಾಯಗೊಂಡಿದ್ದಾರೆ.ಕುಣಿಗಲ್ ನ ದೇವರಾಜ್ (41) ಮೃತ ವ್ಯಕ್ತಿ. 5 ನೌಕರರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಪ್ರಾಣಪಾಯದಿಂದ ಪಾರಾಗಿದ್ದಾರೆ. ಸೋಮವಾರ ಬೆಳಿಗ್ಗೆ 9 ಗಂಟೆ ಸುಮಾರಿಗೆ ಘಟನೆ ನಡೆದಿದೆ.
ರಾಜಸ್ಥಾನ ನೋಂದಣಿ ಸಂಖ್ಯೆಯನ್ನು ಹೊಂದಿರುವ ಟ್ರಕ್ ವೊಂದು ಯಾಂತ್ರಿಕ ವೈಫಲ್ಯದಿಂದ ಬಸಾಪುರ ಸೇತುವೆ ಬಳಿ ರಸ್ತೆಬದಿಯಲ್ಲಿ ನಿಂತಿತ್ತು. ಅತಿವೇಗವಾಗಿ ಬಂದ ಮಿನಿ ಬಸ್‌ನ ಚಾಲಕ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದಾನೆ. ಈ ವೇಳೆ ಅದರ ಹಿಂದೆಯೇ ಬಂದ ಎರಡು ಕಾರುಗಳೂ ಕೂಡ ಡಿಕ್ಕಿ ಹೊಡೆದು ಸರಣಿ ಅಪಘಾತ ಸಂಭವಿಸಿದೆ.
ಮೃತ ವ್ಯಕ್ತಿ ಹಾಗೂ ನೌಕರರು ಬೊಮ್ಮಸಂದ್ರದ ಸ್ವಿಚ್‌ಬೋರ್ಡ್ ತಯಾರಿಕಾ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಅಪಘಾತ ಸಂಭವಿಸಿದಾಗ ದೇವರಾಜ್ ಮಿನಿ ಬಸ್‌ನ ಚಾಲಕನ ಪಕ್ಕದಲ್ಲಿ ಕುಳಿತಿದ್ದರು ಎಂದು ತಿಳಿದುಬಂದಿದೆ.ಅಪಘಾತದ ನಂತರ ಪೊಲೀಸರು ಕ್ರೇನ್‌ಗಳನ್ನು ಬಳಸಿ ಜಖಂಡಗೊಂಡಿದ್ದ ವಾಹನಗಳನ್ನು ತೆರವುಗೊಳಿಸಿದರು. ಈ ವೇಳೆ ಸುಮಾರು ಒಂದು ಗಂಟೆಗಳ ಕಾಲ ಸಂಚಾರ ದಟ್ಟಣೆ ಎದುರಾಗಿತ್ತು.
ಕಾರ್ಖಾನೆಯ ಮಿನಿ ಬಸ್ ವೇಗದ ಚಾಲನೆ ಮತ್ತು ಯಾವುದೇ ಸಿಗ್ನಲ್ ಹಾಕದೆ ರಸ್ತೆ ಬದಿ ಲಾರಿ ನಿಲುಗಡೆ ಮಾಡಿದ್ದು ಅಪಘಾತಕ್ಕೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.ಈ ಸಂಬಂಧ ಲಾರಿ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗಿದೆ. ಈ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ