ಮ್ಯಾಂಚೆಸ್ಟರ್:
ಭಾರತ ಮತ್ತು ಇಂಗ್ಲೆಂಡ್ ನಡುವಿನ 4ನೇ ಟೆಸ್ಟ್ ಪಂದ್ಯ ಮುಕ್ತಾಯದ ಬಳಿಕ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಗಮನಾರ್ಹ ಬದಲಾವಣೆಯಾಗಿದೆ. ಭಾರತ ನಾಲ್ಕನೇ ಸ್ಥಾನದಲ್ಲಿ ಮುಂದುವರಿದರೂ ಕೂಡ ಗೆಲುವಿನ ಶೇಕಡಾವಾರು ಅಂಕದಲ್ಲಿ ಪ್ರಗತಿ ಸಾಧಿಸಿದೆ. ಹಾಲಿ ಅಂಕಪಟ್ಟಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿರುವ ಆಸ್ಟ್ರೇಲಿಯಾ ತಂಡ ಶೇಕಡಾವಾರು 100 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿ ಮುಂದುವರೆದಿದೆ. ಈ ಹಿಂದೆ ಎರಡನೇ ಸ್ಥಾನದಲ್ಲಿದ್ದ ಇಂಗ್ಲೆಂಡ್ ಮೂರನೇ ಸ್ಥಾನಕ್ಕೆ ಕುಸಿದಿದೆ.
ಬಾಂಗ್ಲಾದೇಶ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಒಂದು ಗೆಲುವು ಹಾಗೂ ಒಂದು ಡ್ರಾ ಸಾಧಿಸಿರುವ ಶ್ರೀಲಂಕಾ ತಂಡ ಶೇಕಡಾವಾರು 66.67 ಅಂಕಗಳೊಂದಿಗೆ 2ನೇ ಸ್ಥಾನಕ್ಕೇರಿದೆ. ಇಂಗ್ಲೆಂಡ್ ತಂಡ ಶೇಕಡವಾರು 54.17 ಅಂಕಗಳೊಂದಿಗೆ 3ನೇ ಸ್ಥಾನ ಪಡೆದಿದೆ. ಭಾರತ ತಂಡವು 33.33 ಶೇಕಡಾವಾರು ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಉಳಿದಂತೆ 16.67 ಶೇಕಡಾವಾರು ಅಂಕಗಳೊಂದಿಗೆ ಬಾಂಗ್ಲಾದೇಶ ಐದನೇ ಸ್ಥಾನ, ಅಂಕಪಟ್ಟಿಯಲ್ಲಿ ಖಾತೆಯನ್ನೇ ತೆರೆಯದ ವೆಸ್ಟ್ ಇಂಡೀಸ್ 6ನೇ ಸ್ಥಾನದಲ್ಲಿದೆ.
ಹಾಲಿ ವಿಶ್ವ ಟೆಸ್ಟ್ ಚಾಂಪಿಯನ್ ದಕ್ಷಿಣ ಆಫ್ರಿಕಾ ಪ್ರಶಸ್ತಿ ಗೆದ್ದ ಬಳಿಕ ಯಾವುದೇ ಟೆಸ್ಟ್ ಆಡದ ಕಾರಣ ಸದ್ಯ 9ನೇ ಸ್ಥಾನದಲ್ಲಿದೆ. ಈ ವರ್ಷದ ಕೊನೆಯಲ್ಲಿ ಭಾರತ ವಿರುದ್ಧ ಸರಣಿ ಆಡುವ ಮೂಲಕ ದಕ್ಷಿಣ ಆಫ್ರಿಕಾ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಸರಣಿಯಲ್ಲಿ ಒಟ್ಟು 9 ತಂಡಗಳು ಕಣಕ್ಕಿಳಿಯುತ್ತಿವೆ. 2025 ರಿಂದ 2027 ರವರೆಗೆ ನಡೆಯಲಿರುವ ಈ ಸರಣಿಯಲ್ಲಿ ಅತ್ಯಧಿಕ ಶೇಕಡಾವಾರು ಅಂಕಗಳನ್ನು ಪಡೆಯುವ ಮೊದಲೆರಡು ತಂಡಗಳು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ.
